More

    ಉಡುಪಿ ಪರ್ಯಾಯ|ಮೊದಲ ದಿನದ ಹೊರೆಕಾಣಿಕೆಯೇ ಭರಪೂರ

    ಉಡುಪಿ: ಅದಮಾರು ಪರ್ಯಾಯೋತ್ಸವದ ಪ್ರಥಮ ಹೊರೆಕಾಣಿಕೆ ಬುಧವಾರ ಆಗಮಿಸಿತು. ಮಲ್ಪೆ ಮೀನುಗಾರರ ಸಂಘದ ನೇತೃತ್ವದಲ್ಲಿ ಮಲ್ಪೆಯ ಭಜನಾ ಮಂದಿರಗಳು, ಸಂಘ ಸಂಸ್ಥೆಗಳು, ಅದಮಾರು ವಲಯ ಭಕ್ತವೃಂದ, ಮಟ್ಟುಗುಳ್ಳ ಬೆಳೆಗಾರರ ಸಂಘದಿಂದ ಹೊರೆಕಾಣಿಕೆ ಸಮರ್ಪಣೆ ಮೆರವಣಿಗೆ ವೈಭವದಿಂದ ನೆರವೇರಿತು.

    ಭಾವಿ ಪರ್ಯಾಯ ಪೀಠಾಧಿಪತಿ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಮಲ್ಪೆ ಬಂದರಿನಲ್ಲಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ನೂರಾರು ಟೆಂಪೋ ಸಹಿತ ವಾಹನಗಳೊಂದಿಗೆ ಮೆರವಣಿಗೆ ಮಲ್ಪೆಯಿಂದ ಜೋಡುಕಟ್ಟೆ, ಕೋರ್ಟ್ ರಸ್ತೆ , ಕೆ.ಎಂ. ಮಾರ್ಗ ಸಂಸ್ಕೃತ ಕಾಲೇಜು ಮಾರ್ಗವಾಗಿ ಹೊರೆಕಾಣಿಕೆ ಸಾಗಿತು. ವಿವಿಧ ಭಜನಾ ಸಂಘಟನೆ ಮಹಿಳೆಯರು ಸಾಥ್ ನೀಡಿದರು. ಮಲ್ಪೆಯಿಂದ ಸುಮಾರು 10 ಟನ್ ಅಕ್ಕಿ, 3 ಟನ್ ಬೆಲ್ಲ, 5 ಸಾವಿರ ತೆಂಗಿನಕಾಯಿ, ದವಸ ಧಾನ್ಯಗಳು ಹರಿದು ಬಂದಿವೆ. ಮಟ್ಟುಗುಳ್ಳ ಬೆಳೆಗಾರರು ದೋಣಿ ಆಕಾರದ ಗಾಡಿಯಲ್ಲಿ ಮಟ್ಟುಗುಳ್ಳ ತುಂಬಿಸಿ ಮೆರವಣಿಗೆ ನಡೆಸಿದರು. ತಲೆ ಮೇಲೆ ಮಟ್ಟುಗುಳ್ಳ ಬುಟ್ಟಿ ಹೊತ್ತುಕೊಂಡು ಸಾಂಪ್ರದಾಯಿಕವಾಗಿ ಸಾಗಿಬಂದರು.

    ಅದಮಾರು ಗ್ರಾಮ ಭಕ್ತ ವೃಂದ ವತಿಯಿಂದಲೂ 10 ಟನ್ ಅಕ್ಕಿ, ದವಸ, ಧಾನ್ಯ, ಬೆಳೆ, ಕಾಳು ಸಮರ್ಪಿಸಲಾಯಿತು. ಶಾಸಕ ಕೆ.ರಘುಪತಿ ಭಟ್, ನಾಡೋಜ ಡಾ.ಜಿ.ಶಂಕರ್, ಹೊರೆಕಾಣಿಕೆ ಉಸ್ತುವಾರಿಯಾಗಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಎ. ಸುವರ್ಣ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಎಸ್. ಸುವರ್ಣ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ವಿನಯ ಕರ್ಕೇರ, ಹಸಿ ಮೀನು ಮಾರಾಟಗಾರರ ಸಂಘದ ಅಧ್ಯಕ್ಷೆ ಬೇಬಿ ಎಚ್. ಸಾಲ್ಯಾನ್, ಮಹಿಳಾ ಮೀನುಗಾರರ ಸಂಘದ ಅಧ್ಯಕ್ಷೆ ಜಲಜಾ ಕೋಟ್ಯಾನ್ ಮೊದಲಾದವರಿದ್ದರು.

    ಪಾರ್ಕಿಂಗ್ ಬಳಿ ಉಗ್ರಾಣ ಮುಹೂರ್ತ: ಅದಮಾರು ಪರ್ಯಾಯೋತ್ಸವಕ್ಕೆ ಭಕ್ತರು ನೀಡುವ ಹೊರೆಕಾಣಿಕೆ ಸಂಗ್ರಹಿಸಲು ಕೃಷ್ಣಮಠ ರಾಜಾಂಗಣ ಪಾರ್ಕಿಂಗ್ ಪ್ರದೇಶದಲ್ಲಿ ದಾಸ್ತಾನು ಉಗ್ರಾಣ ನಿರ್ಮಿಸಲಾಗಿದೆ. ಉಗ್ರಾಣ ಉದ್ಘಾಟಿಸಿದ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ದೇವರ ಪ್ರಸಾದ ತಯಾರಿಸಲು ದವಸ ಧಾನ್ಯ ಹಾಗೂ ತರಕಾರಿಗಳನ್ನು ಮೊದಲೇ ಸಂಗ್ರಹಿಸುವುದು ಉತ್ತಮ. ಈ ನಿಟ್ಟಿನಲ್ಲಿ ಉಗ್ರಾಣ ನಿರ್ಮಿಸಲಾಗಿದೆ. ಜ.18ರವರೆಗೆ ಹೊರೆಕಾಣಿಕೆ ಸಂಗ್ರಹ ಕಾರ್ಯ ನಡೆಯಲಿದೆ ಎಂದರು.

    ಕೃಷ್ಣ ಸೇವಾ ಬಳಗ ಮಾರ್ಗದರ್ಶನದಂತೆ ಯುವ ಬ್ರಾಹ್ಮಣ ಪರಿಷತ್ತು ಹಾಗೂ ದೈವಜ್ಞ ಯುವಕ ಮಂಡಲದ ಯುವಕರು ಹೊರೆಕಾಣಿಕೆ ಉಗ್ರಾಣ ನಿರ್ವಹಣೆ ಮಾಡಲಿದ್ದಾರೆ. 120*40 ಚದರಡಿ ವಿಸ್ತೀರ್ಣದಲ್ಲಿ ಉಗ್ರಾಣ ನಿರ್ಮಾಣ ಮಾಡಲಾಗಿದೆ ಎಂದು ಉಡುಪಿ ಯುವ ಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷ ವಿಷ್ಣುಪ್ರಸಾದ ಪಾಡಿಗಾರು ತಿಳಿಸಿದರು. ಕೃಷ್ಣ ಸೇವಾ ಸಮಿತಿಯ ದಿನೇಶ್ ಪುತ್ರನ್, ಗೋವಿಂದ ರಾಜ್, ಹೊರೆಕಾಣಿಕೆ ಸಮಿತಿಯ ದೀಪಕ್ ಶೇಟ್, ಪ್ರವೀಣ್ ಉಪಾಧ್ಯ, ರಂಜನ್ ಕಲ್ಕೂರ, ಎಂ.ಎಸ್. ವಿಷ್ಣು, ದಿವ್ಯಾ ವಿಷ್ಣುಪ್ರಸಾದ್, ಪದ್ಮಲತಾ, ಸುಮಿತ್ರಾ ಕೆರೆಮಠ, ಮಂಜುನಾಥ್ ಇದ್ದರು.

    ಮೀನುಗಾರರು ಶ್ರಮಜೀವಿಗಳು ಹಾಗೂ ಛಲಗಾರರು. ಮಲ್ಪೆ ಹಾಗೂ ಶ್ರೀಕೃಷ್ಣನಿಗೆ ಅನೋನ್ಯ ಸಂಬಂಧವಿದೆ. ಮೀನುಗಾರರು ಕೃಷ್ಣನ ಸೇವೆಗೆ ಸದಾ ಕಾರ್ಯಪ್ರವೃತ್ತರಾಗುತ್ತಾರೆ. ಎಲ್ಲರೂ ಒಳ್ಳೆಯ ಗುಣಗಳನ್ನು ಸ್ವೀಕರಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕು.
    – ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts