ಅಪರಾಧ ಚಟುವಟಿಕೆ ಸಹಿಸುವುದಿಲ್ಲ

 

ಉಡುಪಿ: ಕಾನೂನು ಸುವ್ಯವಸ್ಥೆಗಾಗಿ, ಅಪರಾಧ ಚಟುವಟಿಕೆಗಳ ವಿರುದ್ಧ ನಿರ್ದ್ಯಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನಿಕಟಪೂರ್ವ ಎಸ್‌ಪಿ ಲಕ್ಷ್ಮಣ.ಬಿ ನಿಂಬರಗಿ ಅವರಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಶನಿವಾರ ಅಧಿಕಾರ ಸ್ವೀಕರಿಸಿದ ನೂತನ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ತಿಳಿಸಿದ್ದಾರೆ.

ಉಡುಪಿ ಜಿಲ್ಲೆ ಬಗ್ಗೆ ಸಾಕಷ್ಟು ಕೇಳಿದ್ದೇನೆ. ಅಭಿವೃದ್ಧಿ ವಿಚಾರದಲ್ಲಿ ಜಿಲ್ಲೆ ಮುಂಚೂಣಿಯಲ್ಲಿದೆ. ಜಿಲ್ಲೆಯ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು. ಮಹಿಳೆಯರಿಗಾಗಿ ಇಲಾಖೆ ವತಿಯಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಚನೆ ಇದೆ ಎಂದರು.

ಪೊಲೀಸ್ ಇಲಾಖೆ ಉತ್ತಮ ಸೇವೆ ನೀಡಲು ಸಾರ್ವಜನಿಕರು ಸಹಕಾರ ನೀಡಬೇಕು. ಸಾರ್ವಜನಿಕರು, ಪೊಲೀಸ್ ಇಲಾಖೆ ನಡುವೆ ಉತ್ತಮ ಸಂಪರ್ಕಕೊಂಡಿಯಾಗಿರುವ ಫೋನ್‌ಇನ್ ಕಾರ್ಯಕ್ರಮವನ್ನು ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದರು.

ಬಿಬಿಸಿಯಲ್ಲಿ ಪತ್ರಕರ್ತೆ: 2013ರ ಐಪಿಎಸ್ ಬ್ಯಾಚ್‌ನ ಅಧಿಕಾರಿಯಾಗಿರುವ ನಿಶಾ ಜೇಮ್ಸ್ ಅದಕ್ಕೂ ಮೊದಲು ದೆಹಲಿ ಬಿಬಿಸಿ ವಾಹಿನಿ ಕಚೇರಿ ಸಂಪಾದಕೀಯ ವಿಭಾಗದಲ್ಲಿ ಒಂದೂವರೆ ವರ್ಷ ಕಾರ್ಯ ನಿರ್ವಹಿಸಿದ್ದರು.

ದ.ಕ. ಜಿಲ್ಲೆಯಲ್ಲಿ ಎಎಸ್‌ಪಿ, ಉಡುಪಿಯಲ್ಲಿ ಎಸ್‌ಪಿ ಆಗಿ ಕೆಲಸ ಮಾಡಿದ್ದು ಸಂತೃಪ್ತಿ ತಂದಿದೆ. ಜಿಲ್ಲೆಯಲ್ಲಿ ಕಾರ್ಯನಿರ್ವಹಣೆ ವೇಳೆ ಸವಾಲು ಎದುರಿಸಿದ್ದೇನೆ, ಅನುಭವ ಸಂಪಾದಿಸಿದ್ದೇನೆ. ಸವಾಲುಗಳ ನಿರ್ವಹಣೆಯಲ್ಲಿ ಸಿಬ್ಬಂದಿ ಮತ್ತು ಅಧಿಕಾರಿ ವರ್ಗದ ಪಾತ್ರ ಅನನ್ಯ.
– ಲಕ್ಷ್ಮಣ ಬಿ.ನಿಂಬರಗಿ, ಉಡುಪಿ ನಿಕಟಪೂರ್ವ ಎಸ್‌ಪಿ