ವೈದಿಕರಿಗೆ ಸಮಾಜದ ಸಹಕಾರ

>

ವಿಜಯವಾಣಿ ಸುದ್ದಿಜಾಲ ಉಡುಪಿ
ವೇದಗಳು ಭಗವಂತನಿಗೆ ಪ್ರಿಯ. ದೇವರ ಆರಾಧನೆಗೆ ವೇದಗಳು ಮಾಧ್ಯಮ. ಹೀಗಾಗಿ ವೈದಿಕರಿಗೆ ಸಮಾಜದ ಸಹಕಾರ ಅಗತ್ಯ. ವೇದ ಕಲಿಸಿಕೊಡುವ ವಿದ್ಯಾಪೀಠಗಳ ಪೋಷಣೆಯೂ ಸಮಾಜದ ಜವಾಬ್ದಾರಿಯಾಗಿದೆ ಎಂದು ಪರ್ಯಾಯ ಪಲಿಮಾರು ಮಠಾಧೀಶ ವಿದ್ಯಾಧೀಶತೀರ್ಥ ಸ್ವಾಮೀಜಿ ಹೇಳಿದರು.
ಕೃಷ್ಣ ಮಠದ ಮಧ್ವಮಂಟಪದಲ್ಲಿ ಬುಧವಾರ ಪಲಿಮಾರಿನ ಯೋಗದೀಪಿಕಾ ವಿದ್ಯಾಪೀಠದ 30ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.
ವೇದ ಮಂತ್ರಗಳನ್ನು ಅಧ್ಯಯನ ಮಾಡಿದವರೇ ನೈಜ ಮಾಂತ್ರಿಕರು. ದೇವರಿಗೆ ಸಮರ್ಪಣೆ ಮಾಡಿದಾಗ ಯಾವುದೇ ಕಾರ್ಯ ಮಂಗಳವಾಗುತ್ತದೆ. ಕೃಷ್ಣನ ಸನ್ನಿಧಿಯಲ್ಲಿ ನಡೆದ ವಿದ್ಯಾರ್ಥಿಗಳ ಯಜರ್ವೇದ ವೇದಮಂಗಳೋತ್ಸವ ಸಾರ್ಥಕವಾಗಿದೆ ಎಂದರು.
ಪೇಜಾವರ ಕಿರಿಯ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಕರಾವಳಿ ಜನರಲ್ಲಿ ಧಾರ್ಮಿಕ ಮನೋಭಾವ ಅಧಿಕವಾಗಿದೆ. ಹೀಗಾಗಿ ದೇವಾಲಯಗಳ ಜೀರ್ಣೋದ್ಧಾರ, ಪೂಜೆ, ಹೋಮಹವನಾದಿಗಳು ಹೆಚ್ಚು ನಡೆಯುತ್ತವೆೆ. ಇದಕ್ಕೆ ವಿದ್ವಾಂಸರ, ಪುರೋಹಿತರ ಅಗತ್ಯವಿದ್ದು, ಕೊರತೆಯನ್ನು ತುಂಬುವ ಕೆಲಸವನ್ನು ಯೋಗದೀಪಿಕಾ ವಿದ್ಯಾಪೀಠ ಮಾಡುತ್ತಿದೆ ಎಂದರು. ಅದಮಾರು ಕಿರಿಯ ಮಠಾಧೀಶ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ಯೋಗದೀಪಿಕಾ ಪ್ರಾಂಶುಪಾಲ ಶಂಕರನಾರಾಯಣ ಆಚಾರ್ಯ ಸ್ವಾಗತಿಸಿ, ಪ್ರಾಧ್ಯಾಪಕ ವಾಸುದೇವ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು. ಉಪಪ್ರಾಂಶುಪಾಲ ಸುದರ್ಶನ್ ಸಾಮಗ ವಂದಿಸಿದರು.

ಬಹುಮಾನ ವಿತರಣೆ:  ಭಗವದ್ಗೀತೆಯ 18 ಅಧ್ಯಾಯಗಳನ್ನೂ ಕಂಠಪಾಠ ಮಾಡಿರುವ ಯೋಗದೀಪಿಕಾ ವಿದ್ಯಾರ್ಥಿ ಮಾಧವತೀರ್ಥ ಅವರನ್ನು ಪಲಿಮಾರು ಶ್ರೀಗಳು ಅಭಿನಂದಿಸಿದರು. ವಿದ್ಯಾಪೀಠದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.