ತೇರನ್ನೇರಿ ಮೆರೆದ ಕಸ್ತೂರಿ ರಂಗ

«ಕೃಷ್ಣ ಮಠದಲ್ಲಿ ಲಕ್ಷದೀಪೋತ್ಸವ, ರಥೋತ್ಸವ ಸಂಭ್ರಮ»

ಉಡುಪಿ: ಕೃಷ್ಣ ಮಠದಲ್ಲಿ ಮಂಗಳವಾರ ಉತ್ಥಾನ ದ್ವಾದಶಿ ಪ್ರಯುಕ್ತ ಲಕ್ಷದೀಪೋತ್ಸವ ಮತ್ತು ರಥೋತ್ಸವ ಸಂಭ್ರಮದಿಂದ ನೆರವೇರಿತು. ತಿಂಗಳ ಪರ್ಯಂತ ನಡೆದ ಪಶ್ಚಿಮ ಜಾಗರಣೆ ಪೂಜೆ ಸಂಪನ್ನಗೊಂಡಿತು.

ನಾಲ್ಕು ತಿಂಗಳ ಹಿಂದೆ ಭಾಗೀರಥಿ ಜನ್ಮದಿನದಂದು ಗರ್ಭಗುಡಿ ಸೇರಿದ್ದ ಕೃಷ್ಣನ ಉತ್ಸವಮೂರ್ತಿಯನ್ನು ಉತ್ಥಾನ ದ್ವಾದಶಿಯಂದು ಮತ್ತೆ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ನವಗ್ರಹ ಪೂಜೆ, ನವಗ್ರಹ ದಾನದ ಬಳಿಕ ರಥೋತ್ಸವಕ್ಕೆ ಅಧಿಕೃತ ಚಾಲನೆ ದೊರೆಯಿತು. ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಮಠದ ಪ್ರಾಂಗಣದಲ್ಲಿರುವ ತುಳಸಿ ಕಟ್ಟೆಯಲ್ಲಿ ತುಳಸೀ ಪೂಜೆ ನೆರವೇರಿಸಿದರು. ಕೃಷ್ಣ ಮಠದ ರಾಜಾಂಗಣದಲ್ಲಿ ಪ್ರಬೋಧೋತ್ಸವ ಅಂಗವಾಗಿ ಧಾರ್ಮಿಕ ಸಭೆ, ಭಜನಾಮಂಡಳಿ ಸದಸ್ಯರಿಂದ ರಥಬೀದಿಯಲ್ಲಿ ಭಜನಾ ಪ್ರದಕ್ಷಿಣೆ ನಡೆಯಿತು.

ಕ್ಷೀರಾಬ್ಧಿ ಪೂಜೆ 

ಮಧ್ವಸರೋವರದ ಮಧ್ಯದಲ್ಲಿರುವ ಮಂಟಪದಲ್ಲಿ ಕ್ಷೀರಾಬ್ಧಿ ಪೂಜೆ ನೆರವೇರಿತು. ಪರ್ಯಾಯ ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿ, ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ, ಪೇಜಾವರ ಕಿರಿಯ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ, ಅದಮಾರು ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಪೂಜೆ ಮಾಡಿ ತುಳಸಿ ಮತ್ತು ನೆಲ್ಲಿಗಿಡದ ಬುಡದಲ್ಲಿಟ್ಟಿದ್ದ ತೆಂಗಿನ ಹೋಳಿನಲ್ಲಿ ಕ್ಷೀರಾಬ್ದಿ ಅರ್ಘ್ಯ ಪ್ರದಾನ ಮಾಡಿದರು. ಈ ಮೂಲಕ ಚಾತುರ್ಮಾಸ್ಯದ ವ್ರತವನ್ನು ದೇವರಿಗೆ ಸಮರ್ಪಿಸಿದರು.

ಕ್ಷೀರಾಬ್ದಿ ಅರ್ಘ್ಯ ಸಮಯದಲ್ಲಿ ತಿರುಪತಿ ತಿರುಮಲ ದಾಸ ಸಾಹಿತ್ಯ ಪ್ರಾಜೆಕ್ಟ್, ಮಂತ್ರಾಲಯ ಗುರು ಸಾರ್ವ ಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಮತ್ತು ಉಡುಪಿ ಜಿಲ್ಲಾ ಭಜನಾ ಮಂಡಳಿಗಳ ಒಕ್ಕೂಟದ 2,000 ಸದಸ್ಯರು ಮಧ್ವ ಸರೋವರದ ದಂಡೆಯಲ್ಲಿ ಸುತ್ತ ಕುಳಿತು ಸಾಮೂಹಿಕ ಗೋಷ್ಠಿ ಗಾನದ ಪ್ರಬೋಧೋತ್ಸವ ನೆರವೇರಿಸಿದರು. 18 ದೇವರನಾಮಗಳನ್ನು ಹಾಡಲಾಯಿತು.

ಲಕ್ಷ ದೀಪೋತ್ಸವ 

ಮಠದಲ್ಲಿ ಉತ್ಥಾನ ದ್ವಾದಶಿಯಿಂದ ಹುಣ್ಣಿಮೆವರೆಗೆ 4 ದಿನ ಲಕ್ಷದೀಪೋತ್ಸವ ನಡೆಯಲಿದ್ದು, ಮಂಗಳವಾರ 3ಕ್ಕೆ ಲಕ್ಷದೀಪೋತ್ಸವದ ಪ್ರಯುಕ್ತ ಹಣತೆ ಇಡುವ ಕಾರ್ಯಕ್ರಮಕ್ಕೆ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಚಾಲನೆ ನೀಡಿದರು. ರಾತ್ರಿ ನೂರಾರು ಭಕ್ತರು ಹಚ್ಚಿದ ಹಣತೆಯಿಂದ ರಥಬೀದಿ ಕಂಗೊಳಿಸುತ್ತಿತ್ತು. ಬಳಿಕ ರಥೋತ್ಸವ, ಮಧ್ವ ಸರೋವರದಲ್ಲಿ ತೆಪ್ಪೋತ್ಸವ ನೆರವೇರಿತು.