ಶಿಕ್ಷಣ ಸಚಿವರಿಗೆ ಶಾಸಕ ಯಶ್ಪಾಲ್ ಸುವರ್ಣ ಪತ್ರ
ಉಡುಪಿ: ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಶೌಚಾಲಯ ಸ್ವಚ್ಛತೆ ಹಾಗೂ ನಿರ್ವಹಣೆಗೆ ಸಿಬ್ಬಂದಿ ಕೊರತೆಯಿಂದ ಸಮಸ್ಯೆ ಉಂಟಾಗುತ್ತಿದ್ದು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೇ ಸ್ವಚ್ಛ ಮಾಡಬೇಕಾದ ಸಂದಿಗ್ಧತೆ ಉಂಟಾಗಿದೆ. ರಾಜ್ಯ ಸರ್ಕಾರ ಕೂಡಲೇ ಶಾಲೆಗಳ ಶೌಚಾಲಯ ಸ್ವಚ್ಛತೆಗೆ ಸ್ಥಳೀಯಾಡಳಿತದ ಮೂಲಕ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಿಸಲು ಕ್ರಮಕೈಗೊಳ್ಳಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಶಾಲಾ ಶೌಚಾಲಯಗಳ ಸ್ವಚ್ಛತೆ ಅತಿ ಅವಶ್ಯವಾಗಿದೆ. ಇತ್ತೀಚೆಗೆ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳೇ ಶೌಚಾಲಯ ಸ್ವಚ್ಛ ಮಾಡುತ್ತಿರುವ ಕುರಿತು ಆಗಾಗ ಮಾಧ್ಯಮಗಳಲ್ಲಿಯೂ ವರದಿಯಾಗುತ್ತಿದೆ. ಮಕ್ಕಳಿಂದ ಈ ಕಾರ್ಯ ಮಾಡಿಸುವುದು ಸಮಂಜಸವಲ್ಲ. ಅಲ್ಲದೆ, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಮಹತ್ತರ ಜವಾಬ್ದಾರಿ ಹೊಂದಿರುವ ಶಿಕ್ಷಕರಿಗೂ ಶೌಚಾಲಯ ಸ್ವಚ್ಛತಾ ಕಾರ್ಯದ ಜವಾಬ್ದಾರಿ ನೀಡುವುದು ಸರಿಯಲ್ಲ ಎಂದಿದ್ದಾರೆ.
ಶಾಲಾ ಶೌಚಾಲಯಗಳ ನಿರಂತರ ಸ್ವಚ್ಛತೆಗಾಗಿ ಸ್ಥಳೀಯ ಸಂಸ್ಥೆಗಳಾದ ಗ್ರಾಪಂ, ಪಪಂ, ಪುರಸಭೆ ಹಾಗೂ ನಗರಸಭೆಗಳ ಮೂಲಕ ಹೊರ ಗುತ್ತಿಗೆ ಸಿಬ್ಬಂದಿ ನೇಮಿಸಬೇಕು. ಅದಕ್ಕಾಗಿ ಸೂಕ್ತ ಅನುದಾನವನ್ನೂ ಒದಗಿಸಬೇಕು ಎಂದು ಶಾಸಕ ಯಶ್ಪಾಲ್ ಸುವರ್ಣ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನಗರಾಭಿವೃದ್ಧಿ ಅಹವಾಲು ಸ್ವೀಕಾರ ಸಭೆ
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅರ್ಜಿಗಳಿಗೆ ಸಂಬಂಧಿಸಿದಂತೆ ಜು.20ರಂದು ಬೆಳಗ್ಗೆ 11:30ಕ್ಕೆ ಪ್ರಾಧಿಕಾರದ ಕಚೇರಿಯಲ್ಲಿ ಸಾರ್ವಜನಿಕರಿಂದ ಶಾಸಕ ಯಶ್ಪಾಲ್ ಅಹವಾಲು ಸ್ವೀಕರಿಸಲಿದ್ದಾರೆ. ಪ್ರಾಧಿಕಾರದಲ್ಲಿ ಬಾಕಿ ಉಳಿದಿರುವ ಅರ್ಜಿ, ಸಮಸ್ಯೆಗಳ ವಿಚಾರವಾಗಿ ಅಹವಾಲು ನೀಡಬಹುದು. ನಗರಾಭಿವೃದ್ಧಿ ಪ್ರಾಧಿಕಾರದ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ ಎಂದು ಶಾಸಕರ ಕಚೇರಿಯ ಪ್ರಕಟಣೆ ತಿಳಿಸಿದೆ.