Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಕೃಷ್ಣಾರ್ಚನೆಯ ತುಳಸಿ ಔಷಧಕ್ಕೆ ಬಳಕೆ

Tuesday, 10.07.2018, 5:00 AM       No Comments

– ಗೋಪಾಲಕೃಷ್ಣ ಪಾದೂರು ಉಡುಪಿ
‘ಪ್ರಸೀದ ತುಳಸೀ ದೇವಿ’ ಭಾರತದಲ್ಲಿ ತುಳಸಿಗೆ ಧಾರ್ಮಿಕ ಹಾಗೂ ವೈದ್ಯಕೀಯ ಎರಡೂ ಮಹತ್ವಗಳಿದ್ದು, ಉಡುಪಿಯಲ್ಲಿ ಇವೆರೆಡರ ಸಂಯೋಜನೆ ಹೊಸ ಅವಕಾಶಗಳಿಗೆ ತೆರೆದುಕೊಂಡಿದೆ.
ಪರ್ಯಾಯ ಪಲಿಮಾರು ಶ್ರೀಗಳ ಸಂಕಲ್ಪದಂತೆ ಉಡುಪಿ ಕೃಷ್ಣ ಮಠದಲ್ಲಿ ನಿತ್ಯ ಲಕ್ಷ ತುಳಸಿಗಳಿಂದ ಅರ್ಚನೆ ನಡೆಯುತ್ತಿದ್ದು, ಕೃಷ್ಣನಿಗೆ ಅರ್ಪಿಸಿದ ತುಳಸಿಯಿಂದ ಉದ್ಯಾವರ ಎಸ್‌ಡಿಎಂ ಫಾರ್ಮಸಿಯಲ್ಲಿ ಮಾತ್ರೆ, ಚೂರ್ಣ, ಪೇಯಗಳನ್ನು ತಯಾರಿಸಲಾಗುತ್ತಿದೆ. ಈ ಮೂಲಕ ಕೃಷ್ಣ ನಿರ್ಮಾಲ್ಯ ಔಷಧವಾಗಿ ಜನರ ಒಡಲು ಸೇರುವಂತಾಗಿದೆ.

ತುಳಸಿ ವ್ಯರ್ಥವಲ್ಲ: ಜನವರಿ 18ರಂದು ನಡೆದ ಪರ್ಯಾಯ ಮಹೋತ್ಸವದಲ್ಲಿ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ನಿತ್ಯ ಲಕ್ಷ ತುಳಸಿ ಅರ್ಚನೆ, ಸ್ವರ್ಣ ಗೋಪುರ, ಅಹೋರಾತ್ರಿ ಭಜನೆ ಎಂಬ ಮೂರು ಯೋಜನೆ ಪ್ರಕಟಿಸಿದ್ದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು, ತುಳಸಿ ವ್ಯರ್ಥ ಎಂದು ಯಾರೂ ಭಾವಿಸುವುದು ಬೇಡ. ನಮ್ಮ ಸಂಸ್ಥೆ ಪಡೆದು ಔಷಧಿಗೆ ಬಳಸಿಕೊಳ್ಳಲಿದೆ ಎಂದು ಭರವಸೆ ನೀಡಿದ್ದರು. ಅದರಂತೆ ಉದ್ಯಾವರ ಎಸ್‌ಡಿಎಂ ಫಾರ್ಮಸಿಯಲ್ಲಿ 3 ಹೊಸ ಉತ್ಪನ್ನಗಳನ್ನು ಪ್ರಾರಂಭಿಸಲಾಗಿದ್ದು, ಮಾತ್ರೆ, ಚೂರ್ಣ, ತುಳಸಿ ಪೇಯಗಳ ಸ್ಯಾಂಪಲ್ ತಯಾರಿಸಿ ಆಯುಷ್ ಇಲಾಖೆಯ ಔಷಧ ನಿಯಂತ್ರಣ ಮಂಡಳಿಯಿಂದ ಅನುಮತಿಗಾಗಿ ನಿರೀಕ್ಷಿಸಲಾಗುತ್ತಿದೆ.

ತಯಾರಿಕಾ ವಿಧಾನ: ಕೃಷ್ಣ ಮಠದಿಂದ ಪ್ರತಿದಿನ 30 ಕೆ.ಜಿ.ವರೆಗೆ ತುಳಸಿಗಳು ಬರುತ್ತಿದ್ದು, ಅವುಗಳನ್ನು ವಿಂಗಡಿಸಿ ತುಳಸಿ ಎಲೆಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿದ ಬಳಿಕ ಶಾಸ್ತ್ರಬದ್ಧವಾಗಿ ನೆರಳಿನಲ್ಲಿ ಒಣಗಿಸಲಾಗುತ್ತದೆ. ಇದಕ್ಕಾಗಿ ಅತ್ಯಾಧುನಿಕ ವಾಕ್ಯುಮ್ ಟ್ರೇ ಡಯರ್ ಅಳವಡಿಸಲಾಗಿದ್ದು, 30 ಕೆ.ಜಿ.ಯಷ್ಟು ಇರುವ ತುಳಸಿ ಈ ಸಂದರ್ಭ 5 ಕೆ.ಜಿ.ಗೆ ಇಳಿಯುತ್ತದೆ. ಬಳಿಕ ಶುಷ್ಕಾಂಶ ತೆಗೆದ ತುಳಸಿಯಿಂದ ಚೂರ್ಣ ತಯಾರಿಸಲಾಗುತ್ತದೆ. ಇದರ ಘನಸತ್ವದಿಂದ ಕ್ಯಾಪ್ಸೂಲ್‌ಗಳನ್ನು ತಯಾರಿಸಲಾಗುತ್ತಿದೆ.

 3 ಹೊಸ ಉತ್ಪನ್ನಗಳು: ತುಳಸಿಯಲ್ಲಿ ಪ್ರಮುಖವಾಗಿ ಕ್ರಿಮಿನಾಶಕ, ಚೈತನ್ಯದಾಯಕ, ಕಫ ನಿಸ್ಸಾರಕ ಅಂಶಗಳನ್ನು ಹೊಂದಿದ್ದು, ಇದರ ಸತ್ವವನ್ನು ಅಮೃತಾರಿಷ್ಟ, ಅನುತೈಲ ಹೀಗೆ ವಿವಿಧ ಔಷಧಗಳ ಜತೆಗೆ ಸೇರಿಸಿ ಉಪಯೋಗಿಸಲಾಗುತ್ತಿತ್ತು. ಇದಕ್ಕಾಗಿ ಫಾರ್ಮಸಿ ವರ್ಷಕ್ಕೆ 50ರಿಂದ 100 ಕೆ.ಜಿ. ತುಳಸಿ ಖರೀದಿಸುತ್ತಿತ್ತು. ಆದರೆ ಪಲಿಮಾರು ಶ್ರೀಗಳು ಹೊಸ ಯೋಜನೆ ಪ್ರಕಟಿಸಿದ ಬಳಿಕ ತುಳಸಿಯನ್ನೇ ಪ್ರಧಾನವಾಗಿಟ್ಟುಕೊಂಡು 3 ಹೊಸ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ.

2,249 ಕೆ.ಜಿ. ತುಳಸಿ: ನಿತ್ಯದಲ್ಲಿ ತುಳಸಿ ನಿರ್ಮಾಲ್ಯವನ್ನು ಭಕ್ತರು ಪ್ರಸಾದ ರೂಪದಲ್ಲಿ ತೆಗೆದುಕೊಂಡು ಹೋಗುತ್ತಾರೆ. ಉಳಿದ ತುಳಸಿ ಕೃಷ್ಣಮಠದಿಂದ ಫಾರ್ಮಸಿಗೆ ರವಾನೆಯಾಗುತ್ತದೆ. ಆರು ತಿಂಗಳಲ್ಲಿ 2,249 ಕೆ.ಜಿ.ಯಷ್ಟು ತುಳಸಿ ಸಂಗ್ರಹವಾಗಿದೆ. ಜನವರಿಯಲ್ಲಿ 345, ಫೆಬ್ರವರಿ 428, ಮಾರ್ಚ್ 318, ಏಪ್ರಿಲ್ 247, ಮೇ 350, ಜೂನ್ 455 ಹಾಗೂ ಜುಲೈಯಲ್ಲಿ ಇದುವರೆಗೆ 106 ಕೆ.ಜಿ. ತುಳಸಿ ಔಷಧಕ್ಕಾಗಿ ಬಂದಿದೆ.

ತುಳಸಿಯ ಬಗೆಗಳು
ಶ್ಯಾಮ ತುಳಸಿ
ಕೃಷ್ಣ ತುಳಸಿ
ರಾಮ ತುಳಸಿ
ನಿಂಬು ತುಳಸಿ
ವನ ತುಳಸಿ

ಶ್ರೀಕೃಷ್ಣನಿಗೆ ನಿತ್ಯ ಲಕ್ಷ ತುಳಸಿ ಅರ್ಚನೆ ಸಾಂಗವಾಗಿ ನಡೆಯುತ್ತಿದೆ. ನೈಸರ್ಗಿಕವಾಗಿ ಔಷಧೀಯ ಗುಣಗಳನ್ನು ಹೊಂದಿರುವ ತುಳಸಿ ಭಗವಂತನಿಗೆ ಅರ್ಪಿಸಿದ ಬಳಿಕ ಔಷಧಗಳ ತಯಾರಿಯಲ್ಲಿ ಬಳಕೆಯಾದರೆ ಶೀಘ್ರ ರೋಗ ಉಪಶಮನಕ್ಕೆ ಪೂರಕವಾಗುತ್ತದೆ. ಶ್ರೀಕೃಷ್ಣನಿಗೆ ಸಮರ್ಪಿಸಿದ ನಿರ್ಮಾಲ್ಯ ತುಳಸಿ ಔಷಧವಾಗಿ ಬಳಸುವಲ್ಲಿ ಸಹಕರಿಸಿದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅಭಿನಂದನಾರ್ಹರು.
– ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ, ಪರ್ಯಾಯ ಪಲಿಮಾರು ಮಠ, ಕೃಷ್ಣಮಠ

ತುಳಸಿ ಮಾತ್ರೆಗಳನ್ನು ಶರೀರ ವಾರ್ಧಕ್ಯದ ತೊಂದರೆ, ಶೀತದೋಷ ನಿವಾರಣೆ, ಜೀರ್ಣ ಶಕ್ತಿ ಹೆಚ್ಚಳಕ್ಕೆ ಉಪಯೋಗಿಸಲಾಗುತ್ತದೆ. ಚರ್ಮರೋಗ, ತುರಿಕೆ ನಿವಾರಣೆಗೆ ಚೂರ್ಣ ಬಹಳ ಪ್ರಯೋಜನಕಾರಿಯಾಗಿದೆ. ಜತೆಗೆ ತುಳಸಿ ಪೇಯ ಜೀರ್ಣಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ. ಆಯುಷ್ ಇಲಾಖೆಯಿಂದ ಅನುಮತಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ದೊರೆತ ಕೂಡಲೇ ಔಷಧ ಮಾರುಕಟ್ಟೆಗೆ ಬರಲಿದೆ.
-ಡಾ.ಮುರಳೀಧರ ಆರ್. ಬಲ್ಲಾಳ್, ಜಿಎಂ, ಎಸ್‌ಡಿಎಂ ಆಯುರ್ವೇದ ಫಾರ್ಮಸಿ, ಉದ್ಯಾವರ

Leave a Reply

Your email address will not be published. Required fields are marked *

Back To Top