ಕೃಷ್ಣಾರ್ಚನೆ ತುಳಸಿಯಿಂದ ಔಷಧ

ಉಡುಪಿ: ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಸಂಕಲ್ಪದಂತೆ ಕೃಷ್ಣ ಮಠದಲ್ಲಿ ನಿತ್ಯ ಲಕ್ಷ ತುಳಸಿಗಳಿಂದ ಅರ್ಚನೆ ನಡೆಯುತ್ತಿದ್ದು, ನಿರ್ಮಾಲ್ಯ ತುಳಸಿ ದಳಗಳಿಂದ ಉದ್ಯಾವರ ಎಸ್‌ಡಿಎಂ ಫಾರ್ಮಸಿಯಲ್ಲಿ ಮಾತ್ರೆ, ಚೂರ್ಣ, ಕಷಾಯ ತಯಾರಿಸಲಾಗುತ್ತಿದೆ.

2018ರ ಜ.18ರಿಂದ ಮಠದಲ್ಲಿ ನಿತ್ಯ ಲಕ್ಷ ತುಳಸಿ ಅರ್ಚನೆ ನಡೆಯುತ್ತಿದೆ. ಪರ್ಯಾಯ ದರ್ಬಾರ್‌ನಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ತುಳಸಿ ವ್ಯರ್ಥ ಎಂದು ಯಾರೂ ಭಾವಿಸುವುದು ಬೇಡ. ನಮ್ಮ ಸಂಸ್ಥೆ ಅದನ್ನು ಪಡೆದು ಔಷಧಿಗೆ ಬಳಸಿಕೊಳ್ಳಲಿದೆ ಎಂದು ಹೇಳಿದ್ದರು. ಅದರಂತೆ ಉದ್ಯಾವರ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆ ಫಾರ್ಮಸಿಯಲ್ಲಿ ತುಳಸಿ ಮಾತ್ರೆ, ಕಾಸ ಅಭಯ ಸಿರಪ್, ತ್ರಿಭುವನ ಕೀರ್ತಿ ರಸ ಮಾತ್ರೆ ಉತ್ಪಾದಿಸಲಾಗುತ್ತಿದೆ. ಆಯುಷ್ ಇಲಾಖೆಯ ಔಷಧ ನಿಯಂತ್ರಣ ಮಂಡಳಿ ಅನುಮತಿಯೊಂದಿಗೆ ಜನವರಿಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

2 ಕೋಟಿ ರೂ. ಮೌಲ್ಯದ ಯಂತ್ರ
ಒಂದೂವರೆ ವರ್ಷದಲ್ಲಿ 6 ಸಾವಿರ ಕೆ.ಜಿ. ತುಳಸಿ ಸಂಗ್ರಹಿಸಲಾಗಿದ್ದು, ಕೃಷ್ಣ ಮಠದಿಂದ ಪ್ರತಿ ದಿನ 2ರಿಂದ 20 ಕೆ.ಜಿ.ವರೆಗೆ ತುಳಸಿ ಬರುತ್ತದೆ. ತುಳಸಿ ಎಲೆಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿದ ಬಳಿಕ ಶಾಸ್ತ್ರಬದ್ಧವಾಗಿ ನೆರಳಿನಲ್ಲಿ ಒಣಗಿಸಲಾಗುತ್ತದೆ. ಇದಕ್ಕಾಗಿ 2 ಕೋಟಿ ರೂ.ವೆಚ್ಚದಲ್ಲಿ ಅತ್ಯಾಧುನಿಕ ವಾಕ್ಯುಮ್ ಟ್ರೇ ಡ್ರಯರ್, ಸ್ಪ್ರೇ ಡ್ರಯರ್, ವಾಕ್ಯೂಮ್ ಕಾನ್ಸನ್‌ಟ್ರೇಟರ್, ಹರ್ಬ್ ಎಕ್ಸ್‌ಟ್ರಾೃಕ್ಟರ್ ಅಳವಡಿಸಲಾಗಿದೆ. 30 ಕೆ.ಜಿ.ತುಳಸಿ ಅಂತಿಮ ಘಟ್ಟದಲ್ಲಿ 5 ಕೆ.ಜಿ.ಗೆ ಇಳಿಯುತ್ತದೆ. ಬಳಿಕ ಶುಷ್ಕಾಂಶ ತೆಗೆದ ತುಳಸಿಯಿಂದ ಚೂರ್ಣ ತಯಾರಿಸಲಾಗುತ್ತದೆ. ಘನ ಸತ್ವದಿಂದ ಕ್ಯಾಪ್ಸೂಲ್‌ಗಳನ್ನು ತಯಾರಿಸಲಾಗುತ್ತಿದೆ.

ರೋಗ ನಿರೋಧಕ ಶಕ್ತಿ ವೃದ್ಧಿ
ತುಳಸಿಯಿಂದ ತಯಾರಿಸಿದ ಮಾತ್ರೆ ಮತ್ತು ಸಿರಪ್‌ಗಳು ಶೀತ, ಕೆಮ್ಮು, ಕಫ ರೋಗ ನಿವಾರಣೆಗೆ ಹಾಗೂ ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಗೆ ಉಪಯೋಗಿಸಲಾಗುತ್ತದೆ. ಒತ್ತಡದ ಜೀವನಶೈಲಿಯಿಂದ ಬರುವ ಅನೇಕ ರೋಗಗಳಿಗೆ ತುಳಸಿ ರಾಮಬಾಣ.

ತುಳಸಿ ಮಾತ್ರೆಗಳನ್ನು ಶರೀರ ವಾರ್ಧಕ್ಯದ ತೊಂದರೆ, ಶೀತ ದೋಷ ನಿವಾರಣೆ, ಜೀರ್ಣ ಶಕ್ತಿ ಹೆಚ್ಚಳಕ್ಕೆ ಉಪಯೋಗಿಸಲಾಗುತ್ತದೆ. ಚರ್ಮರೋಗ, ತುರಿಕೆ ನಿವಾರಣೆಗೆ ಚೂರ್ಣ ಪ್ರಯೋಜನಕಾರಿ. ಕೃಷ್ಣ ಮಠದಿಂದ ನಿರಂತರ ಫಾರ್ಮಸಿಗೆ ಬರುತ್ತಿರುವ ತುಳಸಿಯಿಂದ ಮಾತ್ರೆ ಮತ್ತು ಸಿರಪ್ ತಯಾರಿಸಲಾಗುತ್ತಿದೆೆ.
– ಡಾ.ಮುರಳೀಧರ ಆರ್.ಬಲ್ಲಾಳ್
ಮುಖ್ಯಸ್ಥರು, ಎಸ್‌ಡಿಎಂ ಆಯುರ್ವೇದ ಫಾರ್ಮಸಿ, ಉದ್ಯಾವರ

Leave a Reply

Your email address will not be published. Required fields are marked *