ಉಡುಪಿ ಕೃಷ್ಣ ಮಠದಲ್ಲಿ ಸಪ್ತೋತ್ಸವ ಆರಂಭ

ಉಡುಪಿ: ಕೃಷ್ಣ ಮಠದ ವಾರ್ಷಿಕ ಜಾತ್ರೆ ಎಂದೆಣಿಸಿದ ಸಪ್ತೋತ್ಸವ ಬುಧವಾರ ಆರಂಭಗೊಂಡಿದೆ.
ಸಾಯಂಕಾಲ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮಠದ ಪುರೋಹಿತ ಹೆರ್ಗ ವೇದವ್ಯಾಸ ಭಟ್, ಪರ್ಯಾಯ ಮಠದ ದಿವಾನರಾದ ವೇದವ್ಯಾಸ ತಂತ್ರಿಯವರು ದೇವತಾ ಪ್ರಾರ್ಥನೆ ನೆರವೇರಿಸಿದರು. ಬಳಿಕ ಮಧ್ವ ಸರೋವರದಲ್ಲಿ ತೆಪ್ಪೋತ್ಸವ ನಡೆಯಿತು. ರಥಬೀದಿಯಲ್ಲಿ ಮಹಾಪೂಜೆ ರಥ ಮತ್ತು ಗರುಡ ರಥವನ್ನು ಸ್ವಾಮೀಜಿಯವರು ಎಳೆಯುವ ಮೂಲಕ ಸಪ್ತೋತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಯಿತು.

ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಭಂಡಾರಿಕೇರಿ ಮಠಾಧೀಶ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು,ಪೇಜಾವರ ಕಿರಿಯ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಅದಮಾರು ಕಿರಿಯ ಮಠಾಧೀಶ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಭಾಗವಹಿಸಿದ್ದರು.

15ರಂದು ಚೂರ್ಣೋತ್ಸವ: ಜ.14ರಂದು ಮಕರಸಂಕ್ರಾಂತಿಯಂದು ಸಾಯಂಕಾಲ ಶ್ರೀಕೃಷ್ಣ, ಮುಖ್ಯ ಪ್ರಾಣ ದೇವರಿಗೆ ಮಧ್ವ ಸರೋವರದಲ್ಲಿ ವೈಭವದ ತೆಪ್ಪೋತ್ಸವ ನಡೆಯಲಿದೆ. ಜ.15ರಂದು ಹಗಲು ರಥೋತ್ಸವ (ಚೂರ್ಣೋತ್ಸವ) ನಡೆಯಲಿದ್ದು, ಬೆಳಗ್ಗೆ 8.30ಕ್ಕೆ ಮಹಾಪೂಜೆ ಬಳಿಕ ಶ್ರೀಕೃಷ್ಣ ಹಾಗೂ ಮುಖ್ಯಪ್ರಾಣ ದೇವರನ್ನು ಬ್ರಹ್ಮರಥದಲ್ಲಿ ಇರಿಸಿ ಪರ್ಯಾಯ ಶ್ರೀಪಾದರ ಸಹಿತ ಅಷ್ಟಮಠದ ಯತಿಗಳು ಮಂಗಳಾರತಿ ಬೆಳಗಲಿದ್ದಾರೆ. ಬ್ರಹ್ಮರಥೋತ್ಸವ ಬಳಿಕ ವಸಂತ ಮಂಟಪದಲ್ಲಿ ಓಕುಳಿ ಪೂಜೆ, ಅಷ್ಟ ಮಠದ ಸ್ವಾಮೀಜಿಯವರಿಗೆ ಪರ್ಯಾಯ ಮಠದಿಂದ ಗೌರವ ಸಮರ್ಪಣೆ, ಪಲ್ಲಪೂಜೆ, ಮಧ್ವ ಸರೋವರದಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣದೇವರ ಅವಭೃತೋತ್ಸವ ನಡೆಯಲಿದೆ. ಈ ಬಾರಿ ಹಗಲು ರಥೋತ್ಸವ ಹಾಗೂ ಸೌರ ಮಧ್ವನವಮಿ ಒಂದೇ ದಿನವಾಗಿದ್ದು, ಉತ್ಸವದ ವೈಭವ ಹೆಚ್ಚಲಿದೆ.