ಸ್ವರ್ಣ ಹೊದಿಕೆ ಅಳವಡಿಕೆ ಆರಂಭ

ಉಡುಪಿ: ಕೃಷ್ಣ ಮಠದ ಗರ್ಭಗುಡಿ ಮೇಲ್ಛಾವಣಿಗೆ ಚಿನ್ನದ ಹೊದಿಕೆ ಅಳವಡಿಕೆಗೆ ಗುರುವಾರ ಮುಹೂರ್ತ ನಡೆದಿದ್ದು, ಸೋಮವಾರದಿಂದ ದಿನಕ್ಕೆ 400 ಸ್ವರ್ಣ ಹಾಳೆಗಳನ್ನು ಜೋಡಿಸುವ ಕೆಲಸ ಪ್ರಾರಂಭವಾಗಲಿದೆ. ಮೇ 15ರೊಳಗೆ ಮೇಲಂತಸ್ತಿನ ಸ್ವರ್ಣ ಗೋಪುರ ಕಾಮಗಾರಿ ಪೂರ್ಣಗೊಳ್ಳಲಿದೆ.

ಗೋಪುರದಲ್ಲಿ 2 ಹಂತಗಳಿದ್ದು, ಮೊದಲಿಗೆ ಮೇಲಂತಸ್ತಿನ ಹಳೆಯ ಪಕ್ಕಾಸು ಮತ್ತು ಹಲಗೆಯನ್ನು ತೆಗೆದು ಹೊಸದಾಗಿ 700 ಸಿಎಫ್‌ಟಿಯಷ್ಟು ಸಾಗುವಾನಿ ಮರದ ಹಲಗೆ ಅಳವಡಿಸಲಾಗಿದೆ. ಆಚಾರ್ಯ ಮಧ್ವರ ರಚಿಸಿರುವ ಸರ್ವಮೂಲ ಗ್ರಂಥ ಹಾಗೂ ಹಂಸ ಮಂತ್ರವನ್ನು ತಾಮ್ರದ ತಗಡಿಗೆ ಲೇಸರ್ ಪ್ರಿಂಟ್ ಹಾಕಿಸಲಾಗಿದ್ದು, ತಾಮ್ರ ಹಾಗೂ ಬಂಗಾರದ ತಗಡನ್ನು ಒಟ್ಟೊಟ್ಟಿಗೆ ಛಾವಣಿಗೆ ಅಳವಡಿಸಲಾಗುತ್ತದೆ. ಇದಕ್ಕಾಗಿ 20 ಗ್ರಾಂ ತೂಕದ ಬಂಗಾರದ 4 ಸಾವಿರ ಶೀಟ್‌ಗಳನ್ನು ತಯಾರಿಸಲಾಗಿದ್ದು, ದಿನಕ್ಕೆ 400 ಶೀಟ್‌ಗಳನ್ನು ಗೋಪುರಕ್ಕೆ ಹೊದಿಸುವ ಗುರಿ ಹೊಂದಲಾಗಿದೆ. ಶನಿವಾರದಿಂದ ಕೆಳ ಅಂತಸ್ತಿನ ಕಾಮಗಾರಿಯೂ ಆರಂಭವಾಗಿದೆ.

ಹಳೇ ತಾಮ್ರವೀಗ ಕೃಷ್ಣ ಟಂಕೆ: ಮಠದ ಗರ್ಭಗುಡಿ ಛಾವಣಿಗೆ ಅಳವಡಿಸಿದ್ದ ಹಲವು ಶತಮಾನದ ಹಿಂದಿನ ಹಳೆಯ ತಾಮ್ರದ ತಗಡನ್ನು ಸಣ್ಣ ಗಾತ್ರದಲ್ಲಿ ಟಂಕಿಸಿ ಕೃಷ್ಣ ಟಂಕೆ ಹಾಗೂ ರಾಮ ಟಂಕೆ ರೂಪದಲ್ಲಿ ಬ್ರಹ್ಮಕಲಶೋತ್ಸವದಂದು 10 ಸಾವಿರ ಮಂದಿಗೆ ವಿತರಿಸಲು ನಿರ್ಧರಿಸಲಾಗಿದೆ. ಚಿನ್ನದ ಗೋಪುರಕ್ಕಾಗಿ ಹೊಸ ತಾಮ್ರದ ಹಾಳೆಗಳನ್ನು ಅಳವಡಿಸಲಾಗುತ್ತಿರುವುದರಿಂದ ಗರ್ಭಗುಡಿಯ ಮೇಲ್ಛಾವಣಿಯಲ್ಲಿದ್ದ 300 ವರ್ಷಗಳಷ್ಟು ಹಳೆಯ 1,500 ಕೆ.ಜಿ.ತಾಮ್ರ ತಗಡನ್ನು ತೆಗೆದು ಶುದ್ಧೀಕರಿಸಿ ಶೇಖರಿಸಿಡಲಾಗಿದೆ. 4 ಇಂಚಿನಷ್ಟು ದಪ್ಪವಿರುವ ಈ ತಾಮ್ರದ ತಗಡು ಐತಿಹಾಸಿಕವಾಗಿಯೂ ಮಹತ್ವದ್ದಾಗಿದೆ. ಬಹಳ ವರ್ಷ ಕೃಷ್ಣ ಮಠದ ಛಾವಣಿಯಲ್ಲಿದ್ದ ಕಾರಣ ಭಕ್ತರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಹೀಗಾಗಿ ತಾಮ್ರದ ತಗಡನ್ನು ಬೇರೆ ರೂಪದಲ್ಲಿ ಬಳಸಿಕೊಳ್ಳಲು ಮಠದ ಆಡಳಿತ ಮಂಡಳಿ ನಿರ್ಧರಿಸಿದೆ.

14ರಂದು ಪೂರ್ವಭಾವಿ ಸಭೆ: ಪರ್ಯಾಯ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ಸ್ವಾಮೀಜಿ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಸುವರ್ಣಗೋಪುರ ಸಮರ್ಪಣೆ ಹಾಗೂ ಬ್ರಹ್ಮಕಲಶೋತ್ಸವ ಮೇ 31ರಿಂದ ಜೂನ್ 10ರವರೆಗೆ ನಡೆಯಲಿದೆ. ಜೂನ್1ರಂದು ಸಾಯಂಕಾಲ 4ಕ್ಕೆ ಜೋಡುಕಟ್ಟೆಯಿಂದ ಕೃಷ್ಣ ಮಠದವರೆಗೆ ಶೋಭಾಯಾತ್ರೆ ಹೊರಡಲಿದೆ. ಈ ಬಗ್ಗೆ ಹೋಟೆಲ್ ಕಿದಿಯೂರ್‌ನಲ್ಲಿ ಮೇ 14ರಂದು ಸಾಯಂಕಾಲ 4 ಗಂಟೆಗೆ ಪೂರ್ವಭಾವಿ ಸಮಾಲೊಚನಾ ಸಭೆ ಆಯೋಜಿಸಲಾಗಿದೆ.