ಧರ್ಮೋತ್ಥಾನ ಸದುದ್ದೇಶಕ್ಕೆ ಬ್ರಹ್ಮಕಲಶೋತ್ಸವ: ಪಲಿಮಾರು ಶ್ರೀ ಆಶಯ

ವಿಜಯವಾಣಿ ಸುದ್ದಿಜಾಲ ಉಡುಪಿ
ಕೃಷ್ಣ ಮಠದಲ್ಲಿ ಸುವರ್ಣಗೋಪುರ ಸಮರ್ಪಣೆ ಅಂಗವಾಗಿ ಮೇ 29ರಿಂದ ಜೂನ್ 6ರವರೆಗೆ ನಡೆಯುವ ಬ್ರಹ್ಮಕಲಶೋತ್ಸವ ಪ್ರಯುಕ್ತ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಕನಕಮಂಟಪದಲ್ಲಿ ಮಂಗಳವಾರ ಪೂರ್ವಭಾವಿ ಸಭೆ ನಡೆಯಿತು.

ಪಲಿಮಾರು ಶ್ರೀಗಳು ಮಾತನಾಡಿ, ಕೇವಲ ವೈಭವೀಕರಣ ಉದ್ದೇಶವಾಗದೆ ಸನಾತನ ಧರ್ಮೋತ್ಥಾನ ಸದುದ್ದೇಶದಿಂದ ನಡೆಯುವ ಬ್ರಹ್ಮಕಲಶ ಮಹೋತ್ಸವವಾಗಬೇಕು. ಇದರಲ್ಲಿ ಪ್ರತಿಯೊಬ್ಬ ಕೃಷ್ಣ ಭಕ್ತರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಮಟ್ಟು ಲಕ್ಷ್ಮೀನಾರಾಯಣ ರಾವ್ ಅವರಿಗೆ ಹೊರೆಕಾಣಿಕೆ ಮತ್ತು ಭುವನೇಂದ್ರ ಕಿದಿಯೂರು ಅವರಿಗೆ ಶೋಭಾಯಾತ್ರೆಯ ಜವಾಬ್ದಾರಿ ನೀಡಲಾಯಿತು.

ಅದಮಾರು ಕಿರಿಯ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ಕಟೀಲು ಹರಿನಾರಾಯಣ ಆಸ್ರಣ್ಣ, ಯುವ ಬ್ರಾಹ್ಮಣ ಪರಿಷತ್ ಅಧ್ಯಕ್ಷ ವಿಷ್ಣುಮೂರ್ತಿ ಪಾಡಿಗಾರು, ಬಾಲಾಜಿ ರಾಘವೇಂದ್ರ ಆಚಾರ್ಯ ಮತ್ತಿತರರಿದ್ದರು. ಪರ್ಯಾಯ ಮಠದ ದಿವಾನ ಶಿಬರೂರು ವೇದವ್ಯಾಸ ತಂತ್ರಿ ಸ್ವಾಗತಿಸಿ, ಡಾ.ಕೊರ್ಲಹಳ್ಳಿ ವೆಂಕಟೇಶ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

ಅನ್ನದಾನದ ಮಹಾಪರ್ವ
ಸುವರ್ಣಗೋಪುರ ಸಮರ್ಪಣೆ ಹಾಗೂ ಬ್ರಹ್ಮಕಲಶೋತ್ಸವ ಅಂಗವಾಗಿ ಧಾನ್ಯ ಸಮರ್ಪಣಾ ಕಾರ್ಯಕ್ರಮವನ್ನು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಹಾಗೂ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಉದ್ಘಾಟಿಸಿದರು. ಮುಂದಿನ ದಿನಗಳಲ್ಲಿ ಉಡುಪಿ ಕೃಷ್ಣ ಮಠದ ನವಗ್ರಹ ಗುಡಿಯ ಬಳಿಯಿರುವ ಧಾನ್ಯ ಸಂಗ್ರಹ ಪಾತ್ರೆಗಳಲ್ಲಿ ಭಕ್ತರು ತಮ್ಮ ತಮ್ಮ ಶಕ್ತ್ಯಾನುಸಾರ ಧಾನ್ಯವನ್ನು ಸಮರ್ಪಿಸಿ ಬ್ರಹ್ಮಕಲಶೋತ್ಸವದಲ್ಲಿ ಸೇವೆ ಸಮರ್ಪಿಸಬಹುದು ಎಂದು ಪರ್ಯಾಯ ಪಲಿಮಾರು ಸ್ವಾಮೀಜಿ ತಿಳಿಸಿದರು.