ರಾಮ ಮಂದಿರ ನಿರ್ಮಾಣ ಆಗದಿರುವುದು ರಾಷ್ಟ್ರೀಯ ಅಪಮಾನ: ಪೇಜಾವರ ಶ್ರೀ

ಮಂಗಳೂರು: ರಾಮ ಮಂದಿರ ನಿರ್ಮಾಣ ಆಗದಿರುವುದು ರಾಷ್ಟ್ರೀಯ ಅಪಮಾನ. ಮಂದಿರಕ್ಕಾಗಿ ಈ ನಾಲ್ಕೂವರೆ ವರ್ಷ ಕಾದಿದ್ದೇವೆ. ಆದರೆ, ಈಗ ಸಹನೆ ಮೀರಿದೆ ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಸಲುವಾಗಿ ಕೇಂದ್ರದ ಮೇಲೆ ಒತ್ತಡ ಹೇರುವ ಸಲುವಾಗಿ ಮಂಗಳೂರಿನಲ್ಲಿ ಆಯೋಜಿಸಿದ್ದ ‘ರಾಮಮಂದಿರ ಜನಾಗ್ರಹ ಸಭೆ’ಯಲ್ಲಿ ಮಾತನಾಡಿರುವ ಅವರು,”ಸಂತರು, ಸಂಸದರೂ ಪ್ರಧಾನಿ ಮೋದಿಯವರನ್ನು ಒಪ್ಪಿಸಲೇಬೇಕು. ಅವರು ಒಪ್ಪುವ ಭರವಸೆ ಇದೆ. ಇದರಿಂದ ಸರ್ಕಾರಕ್ಕೇ ಲಾಭ. ಚುನಾವಣೆ ಬಂದಾಗ ಈ ಸಭೆ ಎಂಬ ಊಹೆ ಕೆಲವರಿಗಿದೆ. ಆದರೆ ಇದು ರಾಜಕೀಯ ಅಲ್ಲ‌. ಚುನಾವಣೆಗೂ ಮಂದಿರಕ್ಕೂ ಸಂಬಂಧವಿಲ್ಲ. ನಾಲ್ಕೂವರೆ ವರ್ಷ ಕಾದಿದ್ದೇವೆ, ಆದರೆ ಈಗ ನಮ್ಮ ಸಹನೆ ಮೀರಿದೆ. ಸರ್ಕಾರ ರಾಮಮಂದಿರಕ್ಕಾಗಿ ಲೋಕಸಭೆ, ರಾಜ್ಯಸಭೆಯಲ್ಲಿ ಮಸೂದೆ ಜಾರಿಗೊಳಿಸಬೇಕು,” ಎಂದು ಆಗ್ರಹಿಸಿದರು.

“ಕಾಯಿದೆ ಜಾರಿ ಮಾಡಲು ಆಗದಿದ್ದರೆ, ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಲಿ. ಮಾತುಕತೆಯನ್ನಾದರೂ ನಡೆಸಲಿ” ಎಂದರು.
“ಫೆಬ್ರವರಿಯಲ್ಲಿ ಕುಂಭಮೇಳಕ್ಕಿಂತ ಮೊದಲು ರಾಮಮಂದಿರ ನಿರ್ಮಾಣಕ್ಕೆ ಮೋದಿಯವರು ಹೆಜ್ಜೆ ಇರಿಸುವ ಭರವಸೆ ನಮಗಿದೆ. ಇಲ್ಲವಾದರೆ

ಕುಂಭಮೇಳದಲ್ಲಿ ಸಂತರು ಸೇರಿ ಮುಂದಿನ ಹೋರಾಟ ನಿರ್ಧರಿಸುತ್ತೇವೆ,” ಎಂದು ಅವರು ತಿಳಿಸಿದರು.

ಶಾಸನ ರೂಪಿಸಲು ಸಂಸದರಿಗೆ ಮನವಿ

ರಾಮಮಂದಿರ ನಿರ್ಮಾಣಕ್ಕಾಗಿ ಸಂಸತ್ತಿನಲ್ಲಿ ಶಾಸನ ರೂಪಿಸುವಂತೆ ಸಂಸದ ನಳಿನ್‌ ಕುಮಾರ್​ ಅವರಿಗೆ ವಿಶ್ವ ಹಿಂದು ಪರಿಷತ್​ನ ಮುಖಂಡರು ಸಭೆಯಲ್ಲಿಯೇ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, “ಹಿಂದೆ‌ ಕರಸೇವಕನಾಗಿದ್ದರಿಂದ ಈಗ ನಾನು ಸಂಸದನಾಗಿದ್ದೇನೆ. 2019 ರಲ್ಲಿ ಮಂದಿರ ‌ನಿರ್ಮಾಣ ಕಾರ್ಯ ಆಗಿಯೇ ಆಗುತ್ತದೆ. ಇದಕ್ಕೆ ಸಂಸದನಾಗಿ ನಾನು ಸಂಸತ್ತಿನಲ್ಲಿ ಧ್ವನಿ ಸೇರಿಸುತ್ತೇ‌ನೆ,” ಎಂದು ಅವರು ಹೇಳಿದರು.