ಉಡುಪಿ ಇಂದಿರಾ ಕ್ಯಾಂಟೀನ್ ಡಿಸಿ ನಿಗಾ

ಉಡುಪಿ: ಜಿಲ್ಲೆಯಲ್ಲಿ ಉಡುಪಿ, ಮಣಿಪಾಲ, ಕಾರ್ಕಳ ಮತ್ತು ಕುಂದಾಪುರದಲ್ಲಿ ಒಟ್ಟು ನಾಲ್ಕು ಇಂದಿರಾ ಕ್ಯಾಂಟೀನ್‌ಗಳಿವೆ. ಆರಂಭದಲ್ಲಿ ಭರ್ತಿ ಲೆಕ್ಕ ಕೊಡುತ್ತಿದ್ದ ಕ್ಯಾಂಟೀನ್‌ಗಳಿಗೆ ನಂತರ ಗ್ರಾಹಕರ ಸಂಖ್ಯೆ ನೋಡಿಕೊಂಡು ಟೋಕನ್ ಸಂಖ್ಯೆ ಇಳಿಕೆ ಮಾಡಲಾಗಿದೆ. ಅವ್ಯವಹಾರಕ್ಕೆ ಅವಕಾಶ ನೀಡದಂತೆ ಅಧಿಕಾರಿಗಳಿಂದ ಆಗಾಗ ಜಿಲ್ಲಾಧಿಕಾರಿ ವರದಿ ತರಿಸಿಕೊಂಡು ಕಣ್ಗಾವಲಿಟ್ಟಿದ್ದಾರೆ.

ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಉಡುಪಿ ಮತ್ತು ಮಣಿಪಾಲದಲ್ಲಿ ಎರಡು ಇಂದಿರಾ ಕ್ಯಾಂಟೀನ್‌ಗಳಿವೆ. ಆಹಾರ ಗುಣಮಟ್ಟ, ಮೂಲಸೌಕರ್ಯ, ಸ್ವಚ್ಛತೆ, ಗ್ರಾಹಕರಿಗೆ ಸ್ಪಂದನೆ ಹಾಗೂ ಊಟ-ಉಪಾಹಾರದ ಲೆಕ್ಕದ ಬಗ್ಗೆ ಅಧಿಕಾರಿಗಳು ನಿರಂತರ ನಿಗಾ ಇಡಬೇಕು. ಆಗಾಗ ದಿಢೀರ್ ಭೇಟಿ ನೀಡಿ ವರದಿ ಒಪ್ಪಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಸೂಚನೆ ಹಿನ್ನೆಲೆಯಲ್ಲಿ ನಗರಸಭೆ ನೋಡಲ್ ಅಧಿಕಾರಿಗಳು ಮತ್ತು ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಡಿಸಿಗೆ ವರದಿ ನೀಡುತ್ತಾರೆ.

‘ವಿಜಯವಾಣಿ’ ತಂಡ ಕ್ಯಾಂಟೀನ್‌ಗಳಿಗೆ ಭೇಟಿ ನೀಡಿದಾಗ ನಾಗರಿಕರು ಎರಡೂ ಕ್ಯಾಂಟೀನ್‌ಗಳಲ್ಲಿ ಜನಸಂದಣಿ ಕಂಡುಬಂತು.

ಇಂದಿರಾ ಕ್ಯಾಂಟೀನ್‌ನಲ್ಲಿ ಗ್ರಾಹಕರಿಗೆ 5 ರೂ.ಗೆ ಉಪಾಹಾರ ಹಾಗೂ 10 ರೂ.ಗೆ ಊಟ ನೀಡಲಾಗುತ್ತಿದೆ. ಉಪಾಹಾರಕ್ಕೆ 11.66 ರೂ. ಮತ್ತು ಊಟಕ್ಕೆ 23.33 ರೂ. ಗುತ್ತಿಗೆ ಸಂಸ್ಥೆಗೆ ನೀಡುತ್ತಿದ್ದು, ಹೆಚ್ಚುವರಿ ಮೊತ್ತವನ್ನು ನಗರಾಭಿವೃದ್ಧಿ ಕೋಶದಿಂದ ಭರಿಸಲಾಗುತ್ತದೆ.

ಕ್ಯಾಂಟೀನ್‌ನಲ್ಲಿ ಗರಿಷ್ಠ ಒಂದು ಹೊತ್ತು 500 ಮಂದಿಗೆ ಊಟ, ಉಪಾಹಾರ ಪೂರೈಸಬೇಕೆಂಬ ನಿಯಮವಿದೆ. ಫೆಬ್ರವರಿಯಲ್ಲಿ ಆರಂಭವಾದ ಮಣಿಪಾಲ ಕ್ಯಾಂಟೀನ್‌ನಲ್ಲಿ ಜೂನ್ ನಂತರ ಗ್ರಾಹಕರ ಸಂಖ್ಯೆ ಆಧರಿಸಿ, ರಾತ್ರಿಯ ಊಟ 350 ಮಂದಿಗೆ ಕಡಿಮೆಗೊಳಿಸಲಾಗಿದೆ. ಉಡುಪಿಯದ್ದು ಜೂನ್ ನಂತರ ಕಡಿಮೆ ಮಾಡಲಾಗಿದೆ. ಸೆಪ್ಟೆಂಬರ್‌ನಲ್ಲಿ ಮತ್ತೆ ಕಡಿಮೆಗೊಳಿಸಲಾಗಿದ್ದು, 150 ಮಂದಿಗೆ ಸೀಮಿತಗೊಳಿಸಲಾಗಿದೆ. ಮಧ್ಯಾಹ್ನ ಊಟ ಮತ್ತು ಬೆಳಗ್ಗಿನ ಉಪಾಹಾರದಲ್ಲಿ ಮತ್ತಷ್ಟು ಸಂಖ್ಯೆ ಕಡಿತಗೊಳಿಸಲಾಗುತ್ತದೆ ಎಂದು ನಗರಾಭಿವೃದ್ಧಿ ಕೋಶ ಮೂಲಗಳು ತಿಳಿಸಿದೆ.

ಉಡುಪಿ ಕ್ಯಾಂಟೀನ್‌ನಲ್ಲಿ ಪ್ರತಿನಿತ್ಯ ಬೆಳಗ್ಗೆ 480-495, ಭಾನುವಾರ 230-250 ಮಂದಿ ಉಪಾಹಾರ ಸೇವಿಸುತ್ತಾರೆ. ಮಧ್ಯಾಹ್ನ 450 ಮಂದಿ ಊಟ ಮಾಡುತ್ತಾರೆ. ಸಾಯಂಕಾಲ 120ರಿಂದ 130 ಮಂದಿ ಊಟ ಮಾಡುತ್ತಾರೆ. ಮಣಿಪಾಲದಲ್ಲಿ ಬೆಳಗ್ಗೆ 490 ಮಂದಿ ಬೆಳಗ್ಗೆ ಉಪಾಹಾರ, ಪ್ರತಿದಿನ 480-500 ಮಂದಿ ಊಟ, ರಜಾದಿನಗಳಲ್ಲಿ 350-360 ಮಂದಿ ಊಟ ಮಾಡುತ್ತಾರೆ. ಇಲ್ಲಿ ರಾತ್ರಿ ಊಟ ಮಾಡುವವರ ಸಂಖ್ಯೆ 250ರಿಂದ 300.

ಉದ್ಯೋಗಿಗಳು, ಕಾರ್ಮಿಕರು, ಆಸ್ಪತ್ರೆಗಳಿಗೆ ಬರುವವರು, ವಿದ್ಯಾರ್ಥಿಗಳು ಕ್ಯಾಂಟೀನ್‌ಗಳನ್ನು ನೆಚ್ಚಿಕೊಂಡಿದ್ದಾರೆ.

ಗುತ್ತಿಗೆ ಸಂಸ್ಥೆಗೆ ಪಾವತಿಸಿರುವ ಹಣ: ಮಣಿಪಾಲ ಕ್ಯಾಂಟೀನ್‌ಗೆ ಫೆಬ್ರವರಿಯಲ್ಲಿ 27 ಸಾವಿರ ರೂ, ಮಾರ್ಚ್ 5.10 ಲಕ್ಷ ರೂ, ಏಪ್ರಿಲ್-ಮೇ-ಜೂನ್ ತಿಂಗಳಲ್ಲಿ ತಲಾ 4.94 ಲಕ್ಷ ರೂ, ಜುಲೈ-ಆಗಸ್ಟ್ ತಲಾ 4.42 ಲಕ್ಷ ರೂ, ಸೆಪ್ಟೆಂಬರ್ 3.93 ಲಕ್ಷ ರೂ. ಸಹಿತ ಒಟ್ಟು 32,99 ಲಕ್ಷ ರೂ. ಪಾವತಿಯಾಗಿದೆ. ಉಡುಪಿ ಕ್ಯಾಟೀನ್‌ಗೆ ಮಾರ್ಚ್‌ನಲ್ಲಿ 1.57 ಲಕ್ಷ ರೂ, ಏಪ್ರಿಲ್‌ನಿಂದ ಜೂನ್‌ವರೆಗೆ ತಲಾ 4.94 ಲಕ್ಷ ರೂ, ಜುಲೈ-ಆಗಸ್ಟ್ ತಿಂಗಳಲ್ಲಿ ತಲಾ 4.42 ಲಕ್ಷ ರೂ, ಸೆಪ್ಟೆಂಬರ್ 3.93 ಲಕ್ಷ ರೂ ಸಹಿತ ಒಟ್ಟು 29.18 ಲಕ್ಷ ರೂ. ಪಾವತಿಸಲಾಗಿದೆ.

ಕಾರ್ಕಳ, ಕುಂದಾಪುರ 300 ಮಂದಿಗೆ ಊಟ, ಉಪಾಹಾರ: ಕುಂದಾಪುರ ಮತ್ತು ಕಾರ್ಕಳದಲ್ಲಿ ನ.21ರಂದು ಇಂದಿರಾ ಕ್ಯಾಂಟೀನ್‌ಗಳ ಉದ್ಘಾಟನೆಯಾಗಿದೆ. ಕುಂದಾಪುರದಲ್ಲಿ ಬೆಳಗ್ಗೆ ಉಪಾಹಾರ, ಮಧ್ಯಾಹ್ನ-ರಾತ್ರಿ ಊಟಕ್ಕೆ ತಲಾ 300ರಂತೆ ಟೋಕನ್ ವ್ಯವಸ್ಥೆ ಇದೆ. ಬೆಳಗ್ಗೆ ಮತ್ತು ಮಧ್ಯಾಹ್ನ ಟೋಕನ್ ಖಾಲಿಯಾಗಿ ಹೆಚ್ಚಿನ ಬೇಡಿಕೆ ಇರುತ್ತದೆ. ಪುರಸಭೆ ನೋಡಲ್ ಅಧಿಕಾರಿ, ಮುಖ್ಯಾಧಿಕಾರಿಗಳು ಭೇಟಿ ನೀಡಿ ಬೆಳಗ್ಗೆ, ಮಧ್ಯಾಹ್ನ, ಟೋಕನ್ ವಿತರಿಸುವುದನ್ನು ಗಮನಿಸುತ್ತಾರೆ.

ಕಾರ್ಕಳದಲ್ಲಿ ಬೆಳಗ್ಗೆ, ಮಧ್ಯಾಹ್ನ 300 ಮಂದಿಗೆ ಟೋಕನ್ ನೀಡಲಾಗುತ್ತದೆ. ಬೆಳಗ್ಗೆ, ಮಧ್ಯಾಹ್ನಕ್ಕಿಂತ ರಾತ್ರಿ ಊಟಕ್ಕೆ ಜನರು ಬರುವುದು ಕಡಿಮೆ. ಉಪಾಹಾರ, ಊಟಕ್ಕೆ ಪ್ರತಿದಿನ ಸರಾಸರಿ 280-290 ಮಂದಿ ಇರುತ್ತಾರೆ. ರಾತ್ರಿ ಊಟಕ್ಕೆ 270-280 ಮಂದಿ, ಭಾನುವಾರ ರಜೆ ಹಿನ್ನೆಲೆಯಲ್ಲಿ 200-250 ಮಂದಿ ಊಟ ಸೇವಿಸುತ್ತಾರೆ. ಕಾರ್ಕಳ ಪುರಸಭೆ ನೋಡಲ್ ಅಧಿಕಾರಿ ಪರಿಶೀಲನೆ ನಡೆಸುತ್ತಾರೆ. ಈ ಎರಡೂ ಕ್ಯಾಂಟೀನ್‌ಗಳ ಮೊದಲ ಬಿಲ್ ಗುತ್ತಿಗೆ ಸಂಸ್ಥೆಗೆ ಇನ್ನೂ ಪಾವತಿಯಾಗಿಲ್ಲ, ವರದಿ ನಗರಾಭಿವೃದ್ಧಿ ಕೋಶಕ್ಕೆ ಹೋಗಿದ್ದು, ಅನುಮೋದನೆ ಬಳಿಕ ಹಣ ಪಾವತಿ ಆದೇಶ ಸಿಗಲಿದೆ.