ತೀವ್ರ ಸ್ವರೂಪಕ್ಕೆ ಜಲ ಸಮಸ್ಯೆ

ಅವಿನ್ ಶೆಟ್ಟಿ ಉಡುಪಿ
ಬಿಸಿಲ ತಾಪ ದಿನದಿಂದ ದಿನಕ್ಕೆ ಏರುತ್ತಿದ್ದು, ನಗರದಲ್ಲಿ ನೀರಿನ ಸಮಸ್ಯೆ ದಿನಕ್ಕೊಂದು ರೂಪ ಪಡೆಯುತ್ತಿದೆ. ಸ್ವರ್ಣ ನದಿ ಬಜೆ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಮೂರು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದ್ದು, ಪರಿಣಾಮ ನಗರದಲ್ಲಿ ಸರ್ಕಾರಿ ನೌಕರರ ವಸತಿಗೃಹಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಸರ್ಕಾರಿ ವಸತಿಗೃಹಗಳಲ್ಲಿ ನೀರಿನ ಸಮಸ್ಯೆಯಿಂದ ಹಲವು ಸಮಸ್ಯೆಗಳು ತಲೆದೋರಿದ್ದು ಅಡುಗೆ, ಸ್ನಾನ ಮಾಡಲು, ಬಟ್ಟೆ ಹೊಗೆಯಲು ತೊಂದರೆಯಾಗುತ್ತಿದೆ ಎಂದು ಸರ್ಕಾರಿ ನೌಕರರು ಅಳಲು ತೋಡಿಕೊಂಡಿದ್ದಾರೆ.

ದೊಡ್ಡಣಗುಡ್ಡೆ ಸರ್ಕಾರಿ ನೌಕರರ ವಸತಿಗೃಹ, ಮಿಷನ್ ಕಾಂಪೌಂಡ್‌ನಲ್ಲಿರುವ ಸರ್ಕಾರಿ ನೌಕರರ ವಸತಿಗೃಹ, ಜಿಲ್ಲಾಧಿಕಾರಿ ಕಚೇರಿ ಹಿಂಭಾಗವಿರುವ ಲೋಕೊಪಯೋಗಿ ಇಲಾಖೆಯ ಸರ್ಕಾರಿ ನೌಕರರ ವಸತಿಗೃಹ, ಜಿಲ್ಲಾ ನ್ಯಾಯಾಧೀಶರ ಮನೆ ಹಿಂಭಾಗವಿರುವ ಸರ್ಕಾರಿ ನೌಕರರ ವಸತಿಗೃಹದಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಮಿಷನ್ ಕಾಂಪೌಂಡ್‌ನಲ್ಲಿ 25-30 ವಸತಿಗೃಹಗಳಿವೆ, ಅಜ್ಜರಕಾಡಿನಲ್ಲಿರುವ ಲೋಕೊಪಯೋಗಿ ಇಲಾಖೆಯ ಸರ್ಕಾರಿ ನೌಕರರದು 50 ವಸತಿಗೃಹಗಳಿವೆ. ಪರ್ಯಾಯ ಬಾವಿ ಮತ್ತು ಬೋರ್‌ವೆಲ್‌ಗಳಿದ್ದರೂ ಅಂತರ್ಜಲ ಬತ್ತಿರುವುದು, ವ್ಯವಸ್ಥಿತ ಸಂಪರ್ಕ ಸೌಲಭ್ಯ ಇಲ್ಲದಿರುವುದು ನೀರಿನ ಸಮಸ್ಯೆಗೆ ಕಾರಣ ಎನ್ನುತ್ತಾರೆ ನೌಕರರು.

ಪೊಲೀಸ್ ಕ್ವಾಟ್ರಸ್‌ನಲ್ಲೂ ನೀರಿಲ್ಲ: ನಗರ ಪೊಲೀಸ್ ಠಾಣೆ ಪಕ್ಕದಲ್ಲಿರುವ ಪೊಲೀಸ್ ಸಿಬ್ಬಂದಿ ವಸತಿಗೃಹದಲ್ಲಿಲ್ಲೂ ನೀರಿಲ್ಲದೆ ತೊಂದರೆಯಲ್ಲಿದ್ದಾರೆ ಪೊಲೀಸರು. 2-3 ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದ್ದರೂ ಅದು ಸಾಕಾಗುತ್ತಿಲ್ಲ. ನೀರು ಬರುವ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲವೆಂದಾದರೆ ಅವರಿಗೆ ನೀರು ಸಿಗುವುದೇ ಇಲ್ಲ. ಹೆಚ್ಚಾಗಿ ಹೊರಗೆ ಉದ್ಯೋಗದಲ್ಲಿರುವ ಪೊಲೀಸರಿಗೆ ಇದರಿಂದ ಸಮಸ್ಯೆ ಹೆಚ್ಚು. ಮನೆಯಲ್ಲಿ ಯಾರಾದರೂ ಇದ್ದರೆ ನೀರು ಹಿಡಿದಿಡುತ್ತಾರೆ, ಯಾರೂ ಇಲ್ಲದ ವೇಳೆ ನೀರು ಬಂದರೆ ನಮಗೆ ಸಿಗುವುದೇ ಇಲ್ಲ. ದಿನನಿತ್ಯದ ಕೆಲಸ ಕಾರ್ಯಗಳಿಗೆ ಸಮಸ್ಯೆಯಾಗುತ್ತದೆ ಎನ್ನುತ್ತಾರೆ ಪೊಲೀಸ್ ಸಿಬ್ಬಂದಿ. ಇಲ್ಲೊಂದು ಬಾವಿ ಇದ್ದು, ನಗರ ಪೊಲೀಸ್, ಠಾಣೆ, ಆಫೀಸರ್ಸ್ ವಸತಿಗೃಹ, ಮಹಿಳಾ ಠಾಣೆಗೆ ಇದೊಂದೆ ಆಪತ್ಬಾಂಧವ ಎನ್ನುವಂಥ ನೀರಿನ ಸಂಪರ್ಕವಿರುವುದು. ಆದರೆ ಇದರಲ್ಲೂ ನೀರು ಬತ್ತುತ್ತಿದೆ. ಇನ್ನೊಂದು ನೂತನ ಬೋರ್‌ವೆಲ್ ತೆಗೆಸಲಾಗಿದ್ದು, ಅದರ ಸಂಪರ್ಕ ಸಮೀಪದಲ್ಲಿರುವ ನೂತನ ಪೊಲೀಸ್ ಕ್ವಾಟರ್ಸ್‌ಗೆ ಮೀಸಲಿಡಲಾಗಿದೆ ಎನ್ನುತ್ತಾರೆ ಸಿಬ್ಬಂದಿ.

ಟ್ಯಾಂಕರ್ ನೀರು ಕೊಡಿ: ಕಳೆದ ಬಾರಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗಿಲ್ಲ, 2017ರ ಅವಧಿಯಲ್ಲಿ ನೀರಿಲ್ಲದೆ ಕಂಗೆಟ್ಟು ಹೋಗಿದ್ದೆವು, ಈ ಬಾರಿಯೂ ಅದೇ ಪರಿಸ್ಥಿತಿ ಬರಲಿದೆ ಎಂಬ ಆತಂಕ ಕಾಡುತ್ತಿದೆ. ಎತ್ತರ ಪ್ರದೇಶದಲ್ಲಿರುವುದರಿಂದ ಮೂರು ದಿನಕ್ಕೊಮ್ಮೆ ಬರುವ ನೀರು ಸರಿಯಾಗಿ ಬರುತ್ತಿಲ್ಲ, ನಳ್ಳಿಯಲ್ಲಿ ತುಂಬ ನಿಧಾನವಾಗಿ ಬರುತ್ತಿದೆ. ಕೆಲವೊಮ್ಮೆ ನೀರು ಸ್ವಲ್ಪ ಸಮಯ ಬಂದು ಅಧರ್ಕ್ಕೆ ನಿಂತು ಬಿಡುತ್ತದೆ. ನಮಗೆ ಟ್ಯಾಂಕರ್ ಮೂಲಕ ನೀರು ಕೊಡುವ ವ್ಯವಸ್ಥೆ ಮಾಡಬೇಕು ಎಂದು ಪಿಡಬ್ಲುೃಡಿ ಇಲಾಖೆ ವಸತಿಗೃಹದಲ್ಲಿರುವ ನೌಕರರು ಮನವಿ ಮಾಡಿಕೊಂಡಿದ್ದಾರೆ. ಸಮಸ್ಯೆಯನ್ನು ನೇರವಾಗಿ ಹೇಳಿಕೊಳ್ಳಲಾಗದೆ ಸಂಕಟದಲ್ಲಿ ದಿನಗಳೆಯುವ ಪರಿಸ್ಥಿತಿ ಎದುರಾಗಿದೆ ಎಂದು ನೌಕರರೊಬ್ಬರು ಅಳಲು ತೋಡಿಕೊಂಡಿದ್ದಾರೆ.

ಚುನಾವಣಾ ಕೆಲಸ ಕಾರ್ಯಗಳ ಒತ್ತಡದಲ್ಲಿ ನೀರಿನ ಸಮಸ್ಯೆ ಸಹಿಸಿಕೊಳ್ಳಬೇಕಾದ ಸಂದಿಗ್ಧ ಪರಿಸ್ಥಿತಿ ನೌಕರರದ್ದು. ಮಿಷನ್ ಕಾಂಪೌಂಡ್, ದೊಡ್ಡಣಗುಡ್ಡೆ, ಅಜ್ಜರಕಾಡು ಮೂರು ಕಡೆಗಳ ವಸತಿಗೃಹಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಎತ್ತರ ಪ್ರದೇಶವಾದ್ದರಿಂದ ನೀರು ಸರಬರಾಜು ನಿಧಾನವಾಗಿದೆ. ನೀರು ಬಾರದ ದಿನದಲ್ಲಿ ವಸತಿಗೃಹಗಳಿಗೆ ಟ್ಯಾಂಕರ್ ಮೂಲಕ ನೀರು ಕೊಡುವ ವ್ಯವಸ್ಥೆಯನ್ನು ಸ್ಥಳೀಯಾಡಳಿತ ಮಾಡಬೇಕು.
|ಸುಬ್ರಹ್ಮಣ್ಯ ಶೇರಿಗಾರ್, ಜಿಲ್ಲಾಧ್ಯಕ್ಷ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ