ಅಂಚೆ ಕಚೇರಿಗಿಲ್ಲ ಸ್ವಂತ ಕಟ್ಟಡ ಭಾಗ್ಯ

ಹೇಮನಾಥ್ ಪಡುಬಿದ್ರಿ

ಪಡುಬಿದ್ರಿ ಅಂಚೆ ಕಚೇರಿಗೆ ಸ್ವಂತ ಕಟ್ಟಡಕ್ಕಾಗಿ ಜಮೀನು ಕಾಯ್ದಿರಿಸಿದ್ದರೂ ಕಟ್ಟಡ ನಿರ್ಮಾಣವಾಗದೆ ಇನ್ನೂ ಬಾಡಿಗೆ ಕಟ್ಟಡದಲ್ಲೇ ಕಾರ‌್ಯಾಚರಿಸುತ್ತಿದೆ.

ಪಾದೆಬೆಟ್ಟು, ನಂದಿಕೂರು, ಸಾಂತೂರು ಶಾಖಾ ಅಂಚೆ ಕಚೇರಿಗಳನ್ನೊಳಗೊಂಡ ಪಡುಬಿದ್ರಿ ಅಂಚೆ ಕಚೇರಿ ವಿವಿಧ ಕಾರಣಗಳಿಂದ ಈವರೆಗೆ ನಾಲ್ಕು ಕಡೆ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ 66ರ ಬಳಿಯಿರುವ ಶ್ರೀ ಮುಕುಂದ ಕಟ್ಟಡದಲ್ಲಿ ಕಾರ‌್ಯಾಚರಿಸುತ್ತಿದೆ. ಪಡುಬಿದ್ರಿ ಮಾರುಕಟ್ಟೆ ಪ್ರದೇಶದ ಅನತಿ ದೂರದಲ್ಲಿರುವ ದೂರಸಂಪರ್ಕ ಕೇಂದ್ರಕ್ಕೆ ಹೊಂದಿಕೊಂಡ ಪ್ರದೇಶದಲ್ಲಿ 30 ಸೆಂಟ್ಸ್ ಜಮೀನು ಸುಮಾರು 30 ವರ್ಷಗಳ ಹಿಂದೆಯೇ ಅಂಚೆ ಇಲಾಖೆಗೆ ಮಂಜೂರು ಮಾಡಲಾಗಿತ್ತು. 1989-90ರಲ್ಲಿ ಜಿಲ್ಲಾಧಿಕಾರಿ ಈ ಬಗ್ಗೆ ಆದೇಶ ಮಾಡಿದ್ದರು. ಆದರೆ ಈವರೆಗೂ ಅಲ್ಲಿ ಕಟ್ಟಡ ನಿರ್ಮಾಣವಾಗಿಲ್ಲ.

ಪಾಳು ಬಿದ್ದ ಜಮೀನು ಜಪ್ತಿ ವಾಹನಗಳ ತಾಣ: ಅಂಚೆ ಇಲಾಖೆಗೆ ಕಾಯ್ದಿರಿಸಿದ ಜಮೀನಿಗೆ ತಂತಿ ಬೇಲಿ ಅಳವಡಿಸಿ ಫಲಕ ಹಾಕಲಾಗಿತ್ತು. ಕ್ರಮೇಣ ತಂತಿ ಬೇಲಿ ಕಿತ್ತು ಹೋಗಿ ಪಾಳು ಬಿದ್ದು, ಈ ಪ್ರದೇಶದಲ್ಲೇ ಇರುವ ಪೊಲೀಸ್ ಠಾಣೆಯ ಜಪ್ತಿ ಮಾಡಿದ ವಾಹನಗಳು ಹಾಗೂ ಪಡುಬಿದ್ರಿ ವಾರದ ಸಂತೆ ದಿನ ವ್ಯಾಪಾರಸ್ಥರ ಸರಕು ವಾಹನಗಳ ನಿಲುಗಡೆ ತಾಣವಾಗಿ ಮಾರ್ಪಟ್ಟಿದೆ. ಒಟ್ಟಿನಲ್ಲಿ ಮಾರುಕಟ್ಟೆ, ಪೊಲೀಸ್ ಠಾಣೆ, ಪ್ರಾಥಮಿಕ ಆರೋಗ್ಯ ಕೇಂದ್ರ, ದೂರಸಂಪರ್ಕ ಕಚೇರಿ ಹೊಂದಿರುವ ಈ ಪ್ರದೇಶದಲ್ಲಿ ಅಂಚೆ ಕಚೇರಿ ಶೀಘ್ರ ನಿರ್ಮಾಣವಾಗಲಿ ಎಂಬುದು ಸಾರ್ವಜನಿಕರ ಒತ್ತಾಸೆ.

ದೇಶದಲ್ಲಿನ ಬಹಳಷ್ಟು ಅಂಚೆ ಕಚೇರಿಗಳಿಗೆ ಸ್ವಂತ ಕಟ್ಟಡಕ್ಕಾಗಿ ಜಮೀನು ಕಾಯ್ದಿರಿಸಲಾಗಿದೆ. ರಾಷ್ಟ್ರೀಯ ಯೋಜನೆಯಂತೆ ಹಂತಹಂತವಾಗಿ ಕಟ್ಟಡ ನಿರ್ಮಾಣವಾಗುತ್ತದೆ. ಪಡುಬಿದ್ರಿ ಅಂಚೆ ಕಚೇರಿಗೆ ಕಾಯ್ದಿರಿಸಿರುವ ಜಮೀನಿನ ಬಗ್ಗೆ ಯಾವುದೇ ಗೊಂದಲಗಳಿಲ್ಲ. ಗಣಕೀಕೃತ ಪಹಣಿ ಪಡೆಯಲು ಅರ್ಜಿ ಸಲ್ಲಿಸಲಾಗಿದೆ. ಕಟ್ಟಡ ನಿರ್ಮಾಣಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆ ದೊರೆತಲ್ಲಿ ಶೀಘ್ರ ನಿರ್ಮಾಣವಾಗಲಿದೆ.
|ಸುಧಾಕರ ದೇವಾಡಿಗ, ಅಂಚೆ ಅಧೀಕ್ಷರು, ಉಡುಪಿ.

ದೂರಸಂಪರ್ಕ ಕೇಂದ್ರಕ್ಕೆ ಹೊಂದಿಕೊಂಡ ಪ್ರದೇಶದಲ್ಲಿ 30 ಸೆಂಟ್ಸ್ ಜಮೀನನ್ನು ಸುಮಾರು 30 ವರ್ಷಗಳ ಹಿಂದೆಯೇ ಅಂಚೆ ಇಲಾಖೆಗೆ ವಿಂಗಡಿಸಿಡಲಾಗಿದೆ.
|ಶ್ಯಾಮ್, ಪಡುಬಿದ್ರಿ ಗ್ರಾಮ ಲೆಕ್ಕಿಗ