ಜಿಲ್ಲಾಧಿಕಾರಿ ವಿದ್ಯಾಕುಮಾರಿ ಮಾಹಿತಿ
ಶೇ.95 ಕುಟುಂಬಗಳ ದತ್ತಾಂಶ ಸಂಗ್ರಹ
ವಿಜಯವಾಣಿ ಸುದ್ದಿಜಾಲ ಉಡುಪಿ
ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಕುರಿತು ನ್ಯಾ. ಎಚ್.ಎನ್. ನಾಗಮೋಹನದಾಸ್ ಏಕ ಸದಸ್ಯ ವಿಚಾರಣಾ ಆಯೋಗದ ಶಿಫಾರಸಿನಂತೆ ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ ದತ್ತಾಂಶ ಸಂಗ್ರಹ ಕಾರ್ಯ ಜಿಲ್ಲೆಯಲ್ಲಿ ಮುಂದುವರಿದಿದ್ದು, ಮನೆ ಮನೆ ಸಮೀಕ್ಷೆ ಕಾರ್ಯವನ್ನು ಮೇ 25ರ ವರೆಗೆ ವಿಸ್ತರಿಸಲಾಗಿದೆ ಎಂದು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಮಾಹಿತಿ ನೀಡಿದರು.

ಉಡುಪಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೇ 17ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2011ರ ಜನಗಣತಿ ವರದಿ ಪ್ರಕಾರ ಉಡುಪಿ ಜಿಲ್ಲೆಯಲ್ಲಿ ಒಟ್ಟು 15,329 ಪ.ಜಾತಿ ಕುಟುಂಬಗಳಿದ್ದು, ಈವರೆಗೆ 14,941 ಕುಟುಂಬಗಳ ಸಮೀಕ್ಷೆ ಮಾಡಲಾಗಿದೆ. ಶೇ.95.75ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.
ಸರ್ಕಾರದ ಸೂಚನೆ
ಮೇ 16ರಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್ನಲ್ಲಿ ಸದರಿ ಸಮೀಕ್ಷಾ ದಿನಗಳನ್ನು ವಿಸ್ತರಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿತ್ತು. ಮೇ 5ರಿಂದ ಸಮೀಕ್ಷೆ ಪ್ರಾರಂಭಿಸಲಾಗಿದ್ದು, ಒಟ್ಟು 1,112 ಗಣತೀದಾರರು ಕಾರ್ಯ ಕೈಗೊಂಡಿರುತ್ತಾರೆ. ಅವರುಗಳ ಮೇಲ್ವಿಚಾರಣೆಗೆ 12 ಮೇಲ್ವಿಚಾರಕರನ್ನೂ ನೇಮಿಸಲಾಗಿದೆ ಎಂದರು.
ಸಹಾಯವಾಣಿ ಕೇಂದ್ರ
ಸಮೀಕ್ಷೆ ಸಂಬಂಧಿಸಿ ಯಾವುದೇ ಸಂದೇಹ ಅಥವಾ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಜಿಲ್ಲಾ ಮಟ್ಟದಲ್ಲಿ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಮೊ.ಸಂ. 9480843046, 9480843209 ಸಂಪರ್ಕಿಸಬಹುದು ಎಂದು ಡಿಸಿ ವಿದ್ಯಾಕುಮಾರಿ ತಿಳಿಸಿದರು.
ಸ್ವಯಂ ಘೋಷಣೆಗೆ 28ರ ವರೆಗೆ ಅವಕಾಶ
ಮನೆ ಮನೆ ಭೇಟಿ ಸಮೀಕ್ಷೆ ಮೇ 17ಕ್ಕೆ ಮುಕ್ತಾಯದ ದಿನವಾಗಿದ್ದು, ಮೇ 25ರ ವರೆಗೆ ದಿನಾಂಕ ವಿಸ್ತರಿಸಲಾಗಿದೆ. ಬ್ಲಾಕ್ ವ್ಯಾಪ್ತಿಯಲ್ಲಿ ಮೇ 19ರಿಂದ ಮೇ 21ರ ವರೆಗೆ ವಿಶೇಷ ಶಿಬಿರ ಆಯೋಜಿಸಲಾಗಿದ್ದು ಅದನ್ನು ಮೇ 26ರಿಂದ ಮೇ 28ರ ವರೆಗೆ ವಿಸ್ತರಿಸಲಾಗಿದೆ. ಮೇ 19ರಿಂದ ಮೇ 23ರ ವರೆಗೆ ಆನ್ಲೈನ್ ಮೂಲಕ ಸ್ವಯಂ ಘೋಷಣೆಗೆ ಅವಕಾಶ ನೀಡಲಾಗಿತ್ತು. ಅದನ್ನು ಮೇ 19ರಿಂದ ಮೇ 28ರ ವರೆಗೆ ದಿನಾಂಕ ವಿಸ್ತರಿಸಲಾಗಿದೆ.
ಗಣತಿದಾರರು ತಮ್ಮ ಬೂತ್ ವ್ಯಾಪ್ತಿಯಲ್ಲಿ ಬರುವ ಎಲ್ಲ ಚುನಾಯಿತ ಜನಪ್ರತಿನಿಧಿಗಳ ಮನೆಗೆ ಕಡ್ಡಾಯವಾಗಿ ತೆರಳಿ ಸಮೀಕ್ಷೆಯಲ್ಲಿ ಕೈಗೊಂಡಿರುವ ಸಂಗ್ರಹಿತ ಮಾಹಿತಿಯನ್ನು ಅಗತ್ಯವಾಗಿ ನೀಡಲು ಸರ್ಕಾರ ಸೂಚನೆ ನೀಡಿದೆ. ಅದರಂತೆ ಎಲ್ಲ ಗಣತಿದಾರರಿಗೂ ಜಿಲ್ಲಾಡಳಿತದಿಂದ ಸೂಕ್ತ ನಿರ್ದೇಶನ ನೀಡಲಾಗಿದೆ.
| ಡಾ. ಕೆ.ವಿದ್ಯಾಕುಮಾರಿ. ಜಿಲ್ಲಾಧಿಕಾರಿ