More

    ಉಡುಪಿ ಡಿಸಿ ಕಚೇರಿಗೆ ನುಗ್ಗಿದ ರೈತರು

    ಉಡುಪಿ: ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಕೃಷಿಕ ಸಂಘದ ನೇತೃತ್ವದಲ್ಲಿ ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಆಕ್ರೋಶಗೊಂಡ ರೈತರು ಜಿಲ್ಲಾಧಿಕಾರಿ ಕಟ್ಟಡದ ಒಳಾಂಗಣಕ್ಕೆ ನುಗ್ಗಿ ಸರ್ಕಾರ ಮತ್ತು ಜಿಲ್ಲಾಡಳಿತ ವಿರುದ್ಧ ಧಿಕ್ಕಾರ ಕೂಗಿದರು.

    ಪೊಲೀಸರನ್ನು ಲೆಕ್ಕಿಸದೆ ಕಟ್ಟಡದ ಒಳಾಂಗಣಕ್ಕೆ ನುಗ್ಗಿದ ರೈತರು, ಸುಮಾರು 15 ನಿಮಿಷ ಪ್ರತಿಭಟನೆ ನಡೆಸಿದರು. ಪೊಲೀಸರ ಮನವೊಲಿಕೆಗೂ ಜಗ್ಗದೆ, ‘ಜಿಲ್ಲಾಡಳಿತಕ್ಕೆ ಧಿಕ್ಕಾರ, ರೈತರ ಸಮಸ್ಯೆಯನ್ನು ಆಲಿಸದ ಸರ್ಕಾರ’ ಎಂದು ಜೋರು ದನಿಯಲ್ಲಿ ಧಿಕ್ಕಾರ ಕೂಗಿದರು.

    ಜಿಲ್ಲಾಧಿಕಾರಿ ಜತೆ ವಾಗ್ವಾದ: ರಸ್ತೆ ಸುರಕ್ಷತಾ ಸಭೆ ಮುಗಿಸಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಹೇಳಿದ ಸಮಯಕ್ಕೆ ಮನವಿ ನೀಡಲು ನೀವು ಬಂದಿಲ್ಲ. ಈಗ ಈ ರೀತಿ ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ರೈತರಿಗೆ ತಿಳಿಹೇಳಿದರು. ಪ್ರತಿಭಟನಾಕಾರರನ್ನು ಕಚೇರಿ ಒಳಾಂಗಣಕ್ಕೆ ಬಿಟ್ಟಿದ್ದಕ್ಕೆ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳನ್ನೂ ತರಾಟೆಗೆ ತೆಗೆದುಕೊಂಡರು. ಇದರಿಂದ ಮತ್ತಷ್ಟು ಆಕ್ರೋಶಗೊಂಡ ರೈತರು, ನಾವು ಬೆಳಗ್ಗೆ 11 ಗಂಟೆಯಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ನೀವು ಮನವಿ ಸ್ವೀಕರಿಸಲು ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಕೃಷಿಕ ಸಮಾಜದ ಮುಖಂಡರು ಡಿಸಿ ಜತೆ ವಾಗ್ವಾದ ನಡೆಸಿದರು. ಸಿಟ್ಟಾದ ಡಿಸಿ ಮನವಿ ಸ್ವೀಕರಿಸದೆ ಕಚೇರಿಯತ್ತ ನಡೆದರು. ಡಿಸಿ ಮನವಿ ಸ್ವೀಕರಿಸದಿದ್ದಲ್ಲಿ ಸ್ಥಳದಿಂದ ಕದಲುವುದಿಲ್ಲ ಎಂದ ಪ್ರತಿಭಟನಾಕಾರರು ಪಟ್ಟು ಹಿಡಿದರು.
    ಜಿಲ್ಲಾ ಕೃಷಿಕ ಸಂಘದ ಉಪಾಧ್ಯಕ್ಷರಾದ ದಿನೇಶ್ ಶೆಟ್ಟಿ ಹೆರ್ಗ, ಶ್ರೀನಿವಾಸ ಬಲ್ಲಾಳ್, ಕಾರ್ಯದರ್ಶಿ ರವೀಂದ್ರ ಪೂಜಾರಿ ಗುಜ್ಜರಬೆಟ್ಟು, ಸಂಘದ ಪ್ರಮುಖರಾದ ಸುಬ್ರಹ್ಮಣ್ಯ ಶ್ರೀಯಾನ್ ಪೆರಂಪಳ್ಳಿ, ಭೋಜ ಶೆಟ್ಟಿ ಚೇರ್ಕಾಡಿ, ಪ್ರಭಾಕರ ಶೆಟ್ಟಿ ಚೇರ್ಕಾಡಿ, ಭಾರತಿ ಶೆಟ್ಟಿ ಅಂಜಾರು ಮೊದಲಾದವರಿದ್ದರು.

    ಜಿಲ್ಲಾಡಳಿತ ರೈತರನ್ನು ಕಡೆಗಣಿಸದು: ಕಚೇರಿಯ ಒಳಾಂಗಣದಲ್ಲಿ ಕುಳಿತಿದ್ದ ಪ್ರತಿಭಟನಾಕಾರರನ್ನು ಎಎಸ್‌ಪಿ ಕುಮಾರಚಂದ್ರ ಮನವೊಲಿಸಿ ಹೊರಗೆ ಕಳುಹಿಸಿದರು. ನಂತರ ಜಿಲ್ಲಾಧಿಕಾರಿ ಜಗದೀಶ್ ಕಚೇರಿ ಮುಂಭಾಗಕ್ಕೆ ತೆರಳಿ ರೈತರ ಮನವಿ ಸ್ವೀಕರಿಸಿದರು. ನೀವು ಮನವಿ ನೀಡಲು ಬರುತ್ತೀರಿ ಎಂದು ನಾನು ಕಾಯುತ್ತಿದ್ದೆ. ನಂತರ ನಿಗದಿತ ಸಭೆಗೆ ತೆರಳಿದ್ದೇನೆ. ಜಿಲ್ಲಾಡಳಿತ ರೈತರನ್ನು ಎಂದಿಗೂ ಕಡೆಗಣನೆ ಮಾಡುವುದಿಲ್ಲ ಎಂದು ಭರವಸೆ ನೀಡಿದರು. ನಿಮ್ಮ ಬೇಡಿಕೆಗಳನ್ನು ಜಿಲ್ಲಾಡಳಿತ ಮಟ್ಟದಲ್ಲಿ ಸಾಧ್ಯವಾದಷ್ಟು ಬಗೆಹರಿಸಿ, ಸರ್ಕಾರಕ್ಕೂ ತಿಳಿಸುತ್ತೇನೆ ಎಂದು ರೈತರನ್ನು ಸಮಾಧಾನ ಪಡಿಸಿದರು.

    ರೈತರ ಶೋಷಣೆ ನಿರಂತರ: ಕೃಷಿಕರ ಸಮಸ್ಯೆ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಮೌನ ವಹಿಸಿದ್ದಾರೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಹೋರಾಟ ಸ್ವರೂಪ ಬದಲಾಗಲಿದೆ ಎಂದು ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಎಚ್ಚರಿಕೆ ನೀಡಿದರು. ಮಾರುಕಟ್ಟೆಯಲ್ಲಿ ಉತ್ಪನ್ನಗಳ ಬೆಲೆ ಗಗನಕ್ಕೇರುತ್ತಿದೆ, ಆದರೆ ರೈತರ ಉತ್ಪನ್ನಗಳಿಗೆ ಬೆಲೆ ಸಿಗುತ್ತಿಲ್ಲ. ಬೆಂಬಲ ಬೆಲೆಯ ಹೆಸರಿನಲ್ಲಿ ರೈತರ ಶೋಷಣೆ ನಡೆಯುತ್ತಿದೆ ಎಂದು ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಭಟ್ ಕುದಿ ಬೇಸರ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts