ವಡಭಾಂಡೇಶ್ವರದಲ್ಲಿ ಕಲ್ಲು ತೆಗೆಯುವ ವಿಚಾರಕ್ಕೆ ಆರೋಗ್ಯ ನಿರೀಕ್ಷಕರ ಮೇಲೆ ನಗರಸಭೆ ಸದಸ್ಯನಿಂದ ಹಲ್ಲೆ

ಉಡುಪಿ: ಇತ್ತೀಚಿಗೆ ಜನಪ್ರತಿನಿಧಿಗಳು ಸಣ್ಣಪುಟ್ಟ ಕಾರಣಗಳಿಗಾಗಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲವೇ ದಿನಗಳ ಹಿಂದೆ ಬಿಜೆಪಿ ನಾಯಕ ವಿಜಯ ವರ್ಗೀಯ ಅವರ ಪುತ್ರ ಹಾಗೂ ಶಾಸಕರೊಬ್ಬರು ನಗರಸಭೆ ಅಧಿಕಾರಿಗಳ ಮೇಲೆ ಕ್ರಿಕೆಟ್​ ಬ್ಯಾಟ್​ನಿಂದ ಹಲ್ಲೆ ಮಾಡಿದ್ದರು.

ಇದೀಗ ಇದರ ಮುಂದುವರಿದ ಭಾಗ ಎಂಬಂತೆ ಉಡುಪಿ ನಗರಸಭೆ ಸದಸ್ಯರೊಬ್ಬರು ನಗರಸಭೆ ಆರೋಗ್ಯ ನಿರೀಕ್ಷಕರೊಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಹಲ್ಲೆಗೆ ಒಳಗಾಗಿರುವ ಆರೋಗ್ಯ ನಿರೀಕ್ಷಕರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ವಿಷಯ ತಿಳಿದ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಆಸ್ಪತ್ರೆ ಬಳಿ ಜಮಾಯಿಸಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಗ್ಯ ನಿರೀಕ್ಷಕ ಪ್ರಸನ್ನ ಕುಮಾರ್​ ಹಲ್ಲೆಗೆ ಒಳಗಾದವರು. ಉಡುಪಿ ನಗರಸಭೆಯ ವಡಭಾಂಡೇಶ್ವರ ವಾರ್ಡ್​ನ ಸದಸ್ಯ ಯೋಗೀಶ್​ ಹಲ್ಲೆ ಮಾಡಿದವರು. ವಡಭಾಂಡೇಶ್ವರ ಪರಿಸರದಲ್ಲಿ ರಸ್ತೆಯ ಕಲ್ಲು ತೆಗೆಯುವ ವಿಚಾರಕ್ಕೆ ಸಂಬಂಧಿಸಿದಂತೆ ನಗರಸಭೆ ಕಚೇರಿಗೆ ಮಂಗಳವಾರ ಬಂದ ಯೋಗೀಶ್​ ಇದ್ದಕ್ಕಿದ್ದಂತೆ ತಮ್ಮ ಮೇಲೆ ಹಲ್ಲೆ ಮಾಡಿದ್ದಾಗಿ ಪ್ರಸನ್ನಕುಮಾರ್​ ಹೇಳಿದ್ದಾರೆ.
ಪ್ರಸನ್ನಕುಮಾರ್​ ಅವರ ಕಣ್ಣಿನ ಭಾಗಕ್ಕೆ ಗಾಯವಾಗಿದೆ. ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಉಡುಪಿ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *