ಉಡುಪಿ ಧರ್ಮಪ್ರಾಂತ್ಯದಿಂದ ಕೃಷಿ ಚಟುವಟಿಕೆ

ಉಡುಪಿ: ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯ ಪರಿಸರ ಪ್ರೀತಿಯೊಂದಿಗೆ ಕೃಷಿಗೆ ಮಹತ್ವ ನೀಡುವ ನಿಟ್ಟಿನಲ್ಲಿ ಪರಮೋಚ್ಚ ಗುರು ಪೋಪ್ ಫ್ರಾನ್ಸಿಸ್ ನೀಡಿದ ಪರಿಸರ ಸಂದೇಶ ಪಾಲಿಸುವುದರೊಂದಿಗೆ ಪಾಳು ಬಿದ್ದ ಭೂಮಿಯಲ್ಲಿ ನಾಟಿ ಮಾಡುವ ಮೂಲಕ ಕೃಷಿಯತ್ತ ಯುವಜನತೆಯನ್ನು ಆಕರ್ಷಿಸುವ ಕೆಲಸ ಮಾಡುತ್ತಿದೆ.
ಕೃಷಿ ಜೀವನ ಕೊನೆಗೊಂಡರೆ ಭೂಮಿ ಬಂಜರಾಗುತ್ತದೆ ಎಂಬ ಕೂಗು ವಿಶ್ವಮಟ್ಟಕ್ಕೆ ತಲುಪಿದೆ ಎಂದು ಪೋಪ್ ಫ್ರಾನ್ಸಿಸ್ 2015ರಲ್ಲಿ ಜಗತ್ತಿಗೆ ನೀಡಿದ ವಿಶ್ವಪತ್ರ ‘ಲಾವ್ದಾತೋ ಸಿ’ಯಲ್ಲಿ ಪರಿಸರ ಜಾಗೃತಿ ಬಗ್ಗೆ ಹೆಚ್ಚಿನ ಒತ್ತು ನೀಡಿ ಹೇಳಿದ್ದರು. ಅದರಂತೆ ಉಡುಪಿ ಧರ್ಮಪ್ರಾಂತ್ಯದ 54 ಚರ್ಚ್‌ಗಳಲ್ಲಿನ ಭಾರತೀಯ ಕೆಥೊಲಿಕ್ ಯುವ ಸಂಚಾಲನದ (ಐಸಿವೈಎಂ) ಯುವಕರ ಮೂಲಕ ಅವರವರ ಚರ್ಚ್‌ಗಳ ವ್ಯಾಪ್ತಿಯಲ್ಲಿ ಪಾಳು ಬಿದ್ದಿರುವ ಗದ್ದೆಗಳನ್ನು ಗುರುತಿಸಿ ಅಥವಾ ಕೃಷಿ ಮಾಡುತ್ತಿರುವ ಗದ್ದೆಗಳಲ್ಲಿ ಯುವಜನತೆ ಸ್ವತಃ ತಾವೇ ನೇಜಿ ನಾಟಿ ಮಾಡುವ ಮೂಲಕ ಪರಿಸರ ಜಾಗೃತಿಗಾಗಿ ಹಾಗೂ ಕೃಷಿ ಉಳಿವಿಗಾಗಿ ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ. ಈಗಾಗಲೇ 8-10 ಚರ್ಚುಗಳಲ್ಲಿ ಕೃಷಿ ಕಾರ್ಯ ನಡೆಸಲಾಗಿದೆ.

ಧರ್ಮಪ್ರಾಂತ್ಯದಾದ್ಯಂತ ಎಕರೆಗಟ್ಟಲೆ ಪಾಳು ಭೂಮಿಯಲ್ಲಿ ಕೃಷಿ ಮೂಲಕ ಹಸಿರು ಹೆಚ್ಚಿಸುವ ಕಾರ‌್ಯ ನಡೆಯುತ್ತಿದೆ. ಬೆಳಗ್ಗೆ ಚರ್ಚ್‌ನ ಪೂಜೆಯಲ್ಲಿ ಭಾಗವಹಿಸಿ ಬಳಿಕ ಗದ್ದೆಗೆ ತೆರಳಿ ಕೃಷಿಯಲ್ಲಿ ಯುವಜನತೆ ಮಧ್ಯಾಹ್ನದ ತನಕ ತೊಡಗಿಸಿಕೊಳ್ಳುತ್ತಾರೆ. ಟಿಲ್ಲರ್, ಟ್ರ್ಯಾಕ್ಟರ್, ಎತ್ತು ಮತ್ತು ನೇಗಿಲು ಇತ್ಯಾದಿ ಬಳಸಿ ಗದ್ದೆ ಹದ ಮಾಡುವ ಕಾರ್ಯದಲ್ಲಿ ಯುವಜನರೇ ಪಾಲ್ಗೊಂಡು ನೇಜಿ ನಾಟಿ ಮಾಡುತ್ತಾರೆ. ಸ್ಥಳೀಯ ಚರ್ಚ್‌ನ ಧರ್ಮಗುರುಗಳು ಕೂಡ ಗದ್ದೆಗಿಳಿದು ನೇಜಿ ನಾಟಿ ಮಾಡುತ್ತಿರುವುದು ವಿಶೇಷ.

ಯುವಜನತೆ ಕೃಷಿಯಿಂದ ವಿಮುಖರಾಗುತ್ತಿರುವ ಸಂದರ್ಭ ನಮ್ಮ ಯುವಕರನ್ನು ಕೃಷಿಯತ್ತ ಆಕರ್ಷಿಸಲು ಇದೊಂದು ಪ್ರಯತ್ನವಾಗಿದೆ. ಪ್ರತೀ ವರ್ಷ ಇದು ಮುಂದುವರಿಯುತ್ತದೆ. ಪೋಪ್ ವಿಶ್ವಪತ್ರದಲ್ಲಿ ಹಸಿರು ಕ್ರಾಂತಿಗೆ ಸೂಚನೆ ನೀಡಿದ್ದು, ಈಗಾಗಲೇ ಇಡೀ ವಿಶ್ವದಲ್ಲಿ ಕ್ರೈಸ್ತ ಸಮುದಾಯ ಉತ್ತಮ ಹೆಜ್ಜೆ ಇಟ್ಟಿದೆ. ಅಲ್ಲದೆ ಇದರ ಫಲ ನಮಗೆ ಮುಂದಿನ ವರ್ಷಗಳಲ್ಲಿ ಲಭಿಸಲಿದೆ ಎಂಬ ವಿಶ್ವಾಸ ನಮಗಿದೆ.
– ಡಿಯೊನ್ ಡಿಸೋಜ, ಅಧ್ಯಕ್ಷ, ಐಸಿವೈಎಂ ಉಡುಪಿ ಧರ್ಮಪ್ರಾಂತ್ಯ 

Leave a Reply

Your email address will not be published. Required fields are marked *