ಯುಡಿಎಫ್ ವಿಜಯೋತ್ಸವಕ್ಕೆ ಅಡ್ಡಿ

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಕಾಸರಗೋಡು ಕ್ಷೇತ್ರದಲ್ಲಿ ಯುಡಿಎಫ್‌ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಮುಸ್ಲೀಂಲೀಗ್ ಕಾರ‌್ಯಕರ್ತರು ಶನಿವಾರ ಸಾಯಂಕಾಲ ತಲಪಾಡಿಯಲ್ಲಿ ವಿಜಯೋತ್ಸವ ಆಚರಿಸಲು ಮುಂದಾದಾಗ ಉಳ್ಳಾಲ ಪೊಲೀಸರು ತಡೆದಿದ್ದು, ಆಕ್ರೋಶಗೊಂಡ ಲೀಗ್ ಕಾರ‌್ಯಕರ್ತರು ಪೊಲೀಸರತ್ತ ಕಲ್ಲುತೂರಾಟ ನಡೆಸಿದರು. ಉದ್ರಿಕ್ತರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ.
ಯುಡಿಎಫ್ ಅಭ್ಯರ್ಥಿ ರಾಜಮೋಹನ್ ಉಣ್ಣಿತ್ತಾನ್ ಲೋಕಸಭೆಗೆ ಆಯ್ಕೆ ಹಿನ್ನೆಲೆಯಲ್ಲಿ ಮೊದಲಿಗೆ ತೂಮಿನಾಡು ಕಡೆಯಿಂದ ನಾಲ್ವರು ಮುಸ್ಲೀಂ ಲೀಗ್ ಧ್ವಜ ಹಿಡಿದು ತಲಪಾಡಿ ಟೋಲ್‌ಗೇಟ್ ಬಳಿ ಆಗಮಿಸಿ ವಿಜಯೋತ್ಸವ ಆಚರಿಸಲು ಮುಂದಾದರು. ಇದನ್ನು ತಲಪಾಡಿ ನಿವಾಸಿಗಳು ವಿರೋಧಿಸಿದ ಹಿನ್ನೆಲೆಯಲ್ಲಿ ಯುವಕರು ಸ್ಥಳದಿಂದ ಕಾಲ್ಕಿತ್ತಿದ್ದರು.

ಇದಾದ ಕೆಲವೇ ಹೊತ್ತಿನಲ್ಲಿ 50ಕ್ಕೂ ಹೆಚ್ಚು ಬೈಕ್‌ಗಳಲ್ಲಿ ಮುಸ್ಲೀಂಲೀಗ್ ಕಾರ‌್ಯಕರ್ತರು ತಲಪಾಡಿಯತ್ತ ಬರುತ್ತಿರುವ ಬಗ್ಗೆ ಮಾಹಿತಿ ಪಡೆದ ಕೆಎಸ್‌ಆರ್‌ಪಿ ಪೊಲೀಸರು ತಲಪಾಡಿಗೆ ಆಗಮಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡರು. ಇದರಿಂದ ಹತಾಶರಾದ ಕಾರ್ಯಕರ್ತರು, ಉಳ್ಳಾಲ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದು, ಸ್ಥಳದಲ್ಲಿ ಬಿಗು ವಾತಾವರಣ ನಿರ್ಮಾಣವಾಯಿತು. ಉಳ್ಳಾಲ ಠಾಣೆಗೆ ಸೇರಿದ ಸಾಗರ ರಕ್ಷಾ ಕವಚ ವಾಹನಕ್ಕೆ ಕಲ್ಲು ತೂರಿ ಜಖಂಗೊಳಿಸಲು ತಂಡ ಯತ್ನಿಸಿತು. ಇದರಿಂದ ಕೆರಳಿದ ಪೊಲೀಸರು ಲಾಠಿ ಚಾರ್ಜ್‌ಗೆ ಮುಂದಾಗುತ್ತಿದ್ದಂತೆ ಮುಸ್ಲೀಂಲೀಗ್ ಕಾರ‌್ಯಕರ್ತರು ತಾವು ಬಂದಿದ್ದ ವಾಹನ ಅಲ್ಲೇ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳದಲ್ಲಿದ್ದ ಬೈಕ್‌ಗಳು ಹಾಗೂ ಮುಸ್ಲೀಂ ಲೀಗ್ ಧ್ವಜಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬಸ್ಸಿಗೆ ಕಲ್ಲು ತೂರಾಟ
ಚಿಕ್ಕಮಗಳೂರು ಮೂಡಿಗೆರೆಯಿಂದ ತ್ರಿಕ್ಕರಿಪುರ ವಿವಾಹ ಸಮಾರಂಭಕ್ಕೆ ತೆರಳುತ್ತಿದ್ದ ಕರ್ನಾಟಕ ಸಾರಿಗೆ ಬಸ್ಸಿಗೆ ಗಡಿಪ್ರದೇಶದಲ್ಲಿ ದುಷ್ಕರ್ಮಿಗಳು ಕಲ್ಲೆಸೆದು ಗಾಜು ಪುಡಿಗಟ್ಟಿದ್ದಾರೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕೈಯಲ್ಲಿ ಮುಸ್ಲಿಂ ಲೀಗ್ ಧ್ವಜ ಹಿಡಿದುಬಂದ ಯುವಕರ ತಂಡ ಬಸ್ಸಿನ ಗಾಜಿಗೆ ಕಲ್ಲು ತೂರಾಟ ನಡೆಸಿದ್ದು, ಬಸ್ಸಿನಲ್ಲಿ ಮಹಿಳೆಯರು ಹಾಗೂ ಮಕ್ಕಳಿದ್ದರು.ಸ್ಥಳಕ್ಕಾಗಮಿಸಿದ ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇರಳ ಮತ್ತು ಉಳ್ಳಾಲ ಪೊಲೀಸರಿಗೆ ಸೂಚಿಸಿದರು.
ಸ್ಥಳದಲ್ಲಿ ಡಿಸಿಪಿ ಹನುಮಂತರಾಯ, ಎಸಿಪಿ ರಾಮರಾರ್, ಎಸ್.ಐ ಗೋಪಿಕೃಷ್ಣ, ಎಸ್.ಐ ಗುರುವಪ್ಪ ಕಾಂತಿ ಸಹಿತ ನಾಲ್ಕು ಕೆಎಸ್ ಆರ್‌ಪಿ ಪಡೆಯನ್ನು ಸೂಕ್ತ ಬಂದೋಬಸ್ತಿಗೆ ನಿಯೋಜಿಸಲಾಗಿದೆ.

Leave a Reply

Your email address will not be published. Required fields are marked *