More

    ನನ್ನ ಟೋಪಿ ನಂಗೇನೇ ಹಾಕಿದ ಹಕೀಮ!

    ಬೆಳ್ಳಂಬೆಳಗ್ಗೆ ಮೊಬೈಲ್ ರಿಂಗಣಿಸಿತು. ‘ಏನ್ಸಾರ್, ನಿಮ್ಗೇ ಯಾವನೋ ಟೋಪಿ ಹಾಕಿದ್ನಂತೆ..!’. ನಾನು ‘ಅದು..ಅದು..’ ಅಂತ ಹೇಳುವಷ್ಟರಲ್ಲಿ ಕರೆ ಕಟ್ಟಾಗಿ ಇನ್ನೊಂದು ಕರೆ- ‘ಏನ್ಸಾರ್, ಮೋಸ ಹೋಗ್ಬೇಡಿ ಅಂತ ಊರೆಲ್ಲ ಸಾರೋ ನೀವೇ ಮೋಸ ಹೋಗ್ಬಿಟ್ರಾ? ಅತಿ ಆಸೆ ಒಳ್ಳೆದಲ್ಲ ಅಂತ ಹೇಳೋ ನಿಮ್ಗೇ ದುರಾಸೆ ಬಂತು ಅನ್ಸುತ್ತೆ ಅಲ್ವಾ?’ ಅಂತ ಇನ್ನೊಬ್ಬ ತಿವಿದ. ಚಿತ್ರದುರ್ಗದ ಸ್ನೇಹಿತ ಸತ್ಯ, ‘ಏನ್ ಉದಯ್, ಕೊಚ್ಚಿಕೊಳ್ತಾ ಇದ್ದಿ. ನಾನು ಕೊಂಕ್ಣಿ. ಎಲ್ಲ ಕೊಂಕ್ಣಿಗಳು ನಂಬರ್ ಸೆವೆನ್ ಆದ್ರೆ ನಾನು ಡಬಲ್ ಸೆವೆನ್ ಅಂತ. ನಿನ್ಗೇ ಗೂಟ ಇಟ್ಟ ಅವ್ನು ಗ್ಯಾರೆಂಟಿ ತ್ರಿಬಲ್ ಸೆವೆನ್ ಇರ್ಬೇಕಲ್ಲ’ ಅಂತ ಲೇವಡಿ ಮಾಡಿದ.

    ನನ್ನ ಟೋಪಿ ನಂಗೇನೇ ಹಾಕಿದ ಹಕೀಮ!ಪತ್ರಿಕೆಯಲ್ಲಿ ಅಂಕಣ ಬರೆಯೋಕೆ ಆರಂಭ ಮಾಡಿದ ಮೇಲೆ ಇಂಥದ್ದೇ ಫೋನು ಕಾಲ್​ಗಳು. ಮೊನ್ನೆ ಒಬ್ಬ ‘ಏನ್ಸಾರ್, ಡ್ರೖೆವಿಂಗ್ ಮಾಡ್ಬೇಕಾದ್ರೆ ಡಿಸ್ಟನ್ಸ್ ಅಷ್ಟಿರ್ಬೇಕು ಇಷ್ಟಿರ್ಬೇಕು, ಇಲ್ಲದಿದ್ರೆ ಆಕ್ಸಿಡೆಂಟ್ ಆಗುತ್ತೆ, ಕಾರು ಜಖಂ ಆಗುತ್ತೆ ಅಂತ ಬರ್ದಿದ್ರಲ್ಲ, ನಿಮ್ಮ ಕಾರು ನೋಡಿದ್ರೆ ಅಷ್ಟೊಂದು ಖರಾಬ್ ಆಗಿದೆ ಯಾಕೆ?’ ಅಂತ ಪ್ರಶ್ನಿಸಿದ. ಪ್ರಶ್ನೆ ಸಹಜವೇ ಆಗಿತ್ತು. ಇದಕ್ಕೆ ಕಾರಣ ಏನಂದ್ರೆ ನನ್ನ ಆಫೀಸ್ ಇರೋದು ಬೆಂಗಳೂರಿನ ಬ್ಯಾಟರಾಯನಪುರದ ಕಿಷ್ಕಿಂಧೆಯಂಥ ಕಿರಿದಾದ ರಸ್ತೆಯಲ್ಲಿ, ಒಮ್ಮೊಮ್ಮೆ ಎದುರಾಗೋ ವಾಹನಗಳಲ್ಲಿ ಅನನುಭವಿ ಚಾಲಕರು ನನ್ನ ಕಾರನ್ನು ಉಜ್ಜಿಕೊಂಡೆ ಹೋಗಿಬಿಡುತ್ತಾರೆ. ಒಮ್ಮೊಮ್ಮೆ ನಿಲ್ಲಿಸಿದಲ್ಲೇ ಪುಂಡ ಹುಡುಗರು ಗೀರು ಹಾಕಿ ಖುಷಿಪಡುತ್ತಾರೆ. ಯಾರು ಏನೇ ಮಾಡಿದರೂ ನಾನು ಪ್ರತಿಕ್ರಿಯಿಸುವುದಿಲ್ಲ.

    ಇನ್ನೊಂದು ವರ್ಗದವರಿದ್ದಾರೆ. ಅವರು ಮೋಸ ಮಾಡಲು ಅವಕಾಶಗಳಿಗಾಗಿ ಹೊಂಚು ಹಾಕುತ್ತಿರುತ್ತಾರೆ. ಒಳ್ಳೆಯ ಬಟ್ಟೆಬರೆ, ಮೈ ತುಂಬ ಚಿನ್ನ, ಒಳ್ಳೆಯ ಕಾರು ಇಟ್ಟುಕೊಂಡು ಶ್ರೀಮಂತ ಸಜ್ಜನರಂತೆ ಪೋಸ್ ಕೊಡುತ್ತಾರೆ. ಇದೆಲ್ಲ ಶೋಕಿ ಯಾಕೆಂದರೆ ಅವರನ್ನು ನೋಡಿಯೇ ಬಂಡವಾಳ ಹೂಡಿಕೆದಾರರು ಅಥವಾ ಸಾಲ ಕೊಡುವವರು ‘ಇವರು ಗ್ಯಾರೆಂಟಿ ಪಾರ್ಟಿ’ ಎಂಬ ಭ್ರಮೆಗೆ ಒಳಗಾಗಿ ಬಲೆಗೆ ಬೀಳುವಂತಿರಬೇಕು. ಇತ್ತೀಚಿನ ದಿನಗಳಲ್ಲಂತೂ ಬ್ಯಾಂಕಿನ ಬಡ್ಡಿ ದರ ಕಡಿಮೆಯಾಗಿರುವ ಕಾರಣ ಫೈನಾನ್ಸ್​ಗಳು, ಚಿಟ್ ಫಂಡ್​ಗಳು ಭಾರೀ ಬಡ್ಡಿಯ ಆಮಿಷ ತೋರಿಸಿ ಗ್ರಾಹಕರನ್ನು ಸೆಳೆದು ಮೋಸದ ಜಾಲಕ್ಕೆ ಕೆಡವಿ ಬೀದಿಪಾಲು ಮಾಡುತ್ತಿರುವುದನ್ನು ಕೇಳುತ್ತಿದ್ದೇವೆ.

    ಇಷ್ಟೊಂದು ಪೀಠಿಕೆಗೆ ಕಾರಣ ಏನಂದ್ರೆ ಇತ್ತೀಚೆಗೆ ಒಬ್ಬಾತ ಕರೆ ಮಾಡಿ ‘ಸರ್, ನಾನು ಹಬೀಬ್ ಅಂತ ವಿಕ್ಟೋರಿಯಾ ಹಾಸ್ಪಿಟಲ್​ನಲ್ಲಿ ಡಾಕ್ಟ್ರು, ಎಂಬಿಬಿಎಸ್, ಎಂಡಿ. ನಾನು ಕ್ರಿಟಿಕಲ್ ಕೇಸುಗಳನ್ನೇ ನೋಡೋದು. ನಿಮ್ಮ ಭಾರೀ ಅಭಿಮಾನಿ. ನಿಮ್ಮ ಸಾಕಷ್ಟು ಶೋಗಳನ್ನು ನೋಡಿದ್ದೇನೆ’ ಅಂತೆಲ್ಲ ಹೊಗಳಿದ. ನಾನು ‘ವಿಷಯ ಹೇಳಿ’ ಅಂದೆ. ‘ನನಗೆ ಮ್ಯಾಜಿಕ್ ಅಂದ್ರೆ ತುಂಬ ಇಷ್ಟ, ನಿಮ್ಮಲ್ಲಿ ಮ್ಯಾಜಿಕ್ ಕಿಟ್ ಸಿಗುತ್ತಾ?’ ಅಂದ. ಡಾಕ್ಟ್ರು ಅಂದ್ರೆ ನಂಗೆ ತುಂಬ ಪ್ರೀತಿ. ಯಾಕಂದ್ರೆ ಡಾಕ್ಟ್ರು ಆಗಬೇಕೂಂತ ತುಂಬ ಆಸೆ ಇತ್ತು. ವಿಳಾಸ ಕೇಳಿದ. ಬೆಳಗ್ಗೆ ಆಫೀಸಿಗೆ ಬಂದ. ಕುತ್ತಿಗೆಯಲ್ಲಿ ಸ್ಟೆತೋಸ್ಕೋಪ್ ನೇತಾಡುತ್ತಿದ್ದು ಕೈಯಲ್ಲಿ ಡಾಕ್ಟರ್ಸ್ ಕಿಟ್ ಇದ್ದು ಡ್ಯೂಟಿಗೆ ಹೊರಟಂತಿತ್ತು. ಆತನ ಆಸಕ್ತಿಯನ್ನು ನೋಡಿ 5 ಸಾವಿರಕ್ಕೆ ಮಾರುವ ಮ್ಯಾಜಿಕ್ ಕಿಟ್​ನ್ನು 30% ಡಿಸ್ಕೌಂಟಿನಲ್ಲಿ ಮೂರುವರೆ ಸಾವಿರಕ್ಕೆ ಕೊಟ್ಟೆ. ಮಾತ್ರವಲ್ಲ ಅದರಲ್ಲಿದ್ದ 50 ಟ್ರಿಕ್ಸನ್ನು ಸ್ವತಃ ಕಲಿಸಿಕೊಟ್ಟೆ. ಇದಕ್ಕೆ ಪ್ರತಿಯಾಗಿ ಆತ ನಿಮ್ಮನ್ನು ಟೆಸ್ಟ್ ಮಾಡ್ತೀನಿ, ಅಂತ ಹೇಳಿ ನನ್ನ ಬಿಪಿ ಚೆಕ್ ಮಾಡಿದ, ಶುಗರ್ ಚೆಕ್ ಮಾಡಲು ಸೂಜಿಯಿಂದ ರಕ್ತ ತೆಗೆದು ಅದೇನೋ ಪರೀಕ್ಷೆ ಮಾಡಿ, ಎಲ್ಲ ನಾರ್ಮಲ್ ಅಂದ. ಎದೆ ಮೇಲೆ ಸ್ಟೆತೋಸ್ಕೋಪ್ ಆಡಿಸಿ ಶ್ವಾಸಕೋಶ ಎಲ್ಲ ಸರಿ ಇದೆ ಅಂದ. ಸಾಲದ್ದಕ್ಕೆ ಕಬ್ಬಿಣದ ಸುತ್ತಿಗೆಯಿಂದ ಕಾಲಿಗೆ, ಕೈಗೆ ಹೊಡೆದು ಪರೀಕ್ಷಿಸಿದ, ಅದೇನೋ ಕಿವಿಗೆ ಇಟ್ಟು ‘ನಿಮಗೆ ಕಿವಿ ಚೆನ್ನಾಗಿ ಕೇಳಿಸುತ್ತಿದೆ. ಹೆಲ್ತ್ ಈಸ್ ಪರ್ಫೆಕ್ಟ್’ ಅಂತ ಸರ್ಟಿಫಿಕೇಟ್ ಕೊಟ್ಟು ನೀವು ನೂರು ವರ್ಷ ಬದುಕ್ತೀರಿ ಅನ್ನೋ ಗ್ಯಾರೆಂಟಿಯನ್ನೂ ಕೊಟ್ಟ! ನನ್ನ ಪರ್ಸನಲ್ ಮ್ಯಾಜಿಕ್ ಟೋಪಿಯನ್ನು ಅವನ ಫೀಸಾಗಿ ಉಚಿತವಾಗಿ ಕೊಟ್ಟೆ.

    ಕಿಟ್​ಗೆ 3500 ರೂಪಾಯಿ ಕೊಡ ಬೇಕಾಗಿತ್ತಲ್ಲ, ಅದಕ್ಕೆ ಆತ ‘ನಿಮ್ಮ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಕೊಡಿ, ಹಣ ಕಳುಹಿಸುತ್ತೇನೆ’ ಅಂದ. ಅಕೌಂಟ್ ನಂಬರನ್ನು ಮೂರು ಮೂರು ಬಾರಿ ಕೇಳಿ ಖಚಿತಪಡಿಸಿಕೊಂಡ. ಯಾಕೆ ಅಂತ ಕೇಳಿದ್ದಕ್ಕೆ ‘ನಾನು ಯಾರಿಗೋ ದುಡ್ಡು ಕಳ್ಸೋಕೆ ಹೋಗಿ, ಯಾರದ್ದೋ ಅಕೌಂಟ್​ಗೆ

    ಹೋಗಿ 60 ಸಾವಿರ ಕಳ್ಕೊಂಡಿದ್ದೀನಿ, ಅದಕ್ಕೇ ಇಷ್ಟೊಂದು ಕೇರ್​ಫುಲ್ ಆಗಿರೋದು’ ಅಂತ ಕಾರಣವನ್ನೂ ಕೊಟ್ಟ. ಆಸ್ಪತ್ರೆಯಿಂದ ಅರ್ಜಂಟ್ ಬನ್ನಿ ಅಂತ ಕರೆ ಬಂದಿದೆ ಅಂತ ಹೇಳಿ ಹೋದ.

    ಮೂರು ದಿನವಾದರೂ ದುಡ್ಡು ಬಂದಿಲ್ಲ. ಮೆಸೇಜ್ ಮಾಡಿದ್ದಕ್ಕೆ ‘ನಿನ್ನೆನೇ ಕಳುಹಿಸಿದ್ದೇನೆ’ ಅಂತ ಉತ್ತರ ಬಂತು. ಒಮ್ಮೊಮ್ಮೆ ಚಿಕ್ಕ ಮೊತ್ತ ಬ್ಯಾಂಕ್ ಖಾತೆಗೆ ಬಂದರೆ ಮೊಬೈಲ್ ಮೆಸೇಜ್ ಬರೋದಿಲ್ಲ. ಮರುದಿನ ಬ್ಯಾಂಕಲ್ಲಿ ವಿಚಾರಿಸಲಾಗಿ ಹಣ ಬಂದಿಲ್ಲ ಅನ್ನೋದು ಖಚಿತವಾಯ್ತು. ಅವನಿಗೆ ತಿಳಿಸಿದಾಗ ‘ಕಳುಹಿಸಿದ್ದೇನೆ, ನಿಮ್ಮ ಅಕೌಂಟ್ ಚೆಕ್ ಮಾಡಿ’ ಅಂತ ಮೆಸೇಜ್ ಮಾಡಿದ. ಮತ್ತೊಮ್ಮೆ ತಿಳಿಸಿದಾಗ ‘ನನ್ನ ಪಾಸ್ ಶೀಟ್ ಫೋಟೋ ಕಳುಹಿಸ್ತೀನಿ’ ಅಂದ. ಕಳುಹಿಸಿಲ್ಲ ಅನ್ನೋದು ಬೇರೆ ಮಾತು. ಕರೆ ಮಾಡಿದ್ದಕ್ಕೆ ಉತ್ತರವಿಲ್ಲ. ‘ಏನ್ರೀ, ಡಾಕ್ಟ್ರಾಗಿ ನಾನು ಮೋಸ ಮಾಡ್ತೀನಾ, ಪಾಸ್ ಶೀಟ್ ಫೋಟೋ ಕಳುಹಿಸಿದ ಮೇಲೇನೇ ಇನ್ನು ಮಾತಾಡೋದು, ಸದ್ಯ ನನ್ನ ಮೊಬೈಲ್ ಅಪ್​ಡೇಟ್ ಆಗ್ತಾ ಇದೆ, ಮೆಸೇಜ್​ಗಳಿಗೆ ಉತ್ತರ ಕೊಡೋದಕ್ಕೆ ಆಗೋಲ್ಲ’ ಅಂತ ಸ್ವಲ್ಪ ಖಾರವಾಗಿಯೇ ಬರೆದ. ಇದ್ಯಾಕೋ ನನಗೆ ಸರಿ ತೋರಲಿಲ್ಲ. ಇವನು ಮೋಸಗಾರನೇ ಇರಬೇಕು ಎಂಬ ಸಂಶಯ ಬರತೊಡಗಿತು. ನನ್ನ ಸ್ನೇಹಿತ ನಿವೃತ್ತ ಐಪಿಎಸ್

    ಅಧಿಕಾರಿ ಸುಭಾಶ್ ಭರಣಿಯವರಿಗೆ ಫೋನ್ ಮಾಡಿದೆ. ಅವರು ‘ಅಸಲಿಗೆ ಆತ ಡಾಕ್ಟರ್ ಅಲ್ಲ. ಎಂತೆಂತಹ ವೇಷದಲ್ಲಿ ಬಂದು ಮೋಸ ಮಾಡುವವರಿದ್ದಾರೆ ನಿಮಗೆ ಊಹಿಸೋದಕ್ಕೂ ಆಗೊಲ್ಲ. ನೀವು ಮೊದಲು ಪೊಲೀಸ್ ಕಂಪ್ಲೇಂಟ್ ಕೊಡಿ, ಮಿಕ್ಕಿದ್ದನ್ನು ನಾನು ನೋಡಿಕೊಳ್ತೇನೆ’ ಅಂದ್ರು. ನಾನು ‘ಅಲ್ಪ ದುಡ್ಡಿಗೆ ಯಾಕೆ ಸರ್ ಸ್ಟೇಶನ್​ಗೆ ಹೋಗ್ಬೇಕು’ ಅಂದದ್ದಕ್ಕೆ ‘ನಿಮ್ಮಂಥ ಸೆಲೆಬ್ರಿಟಿಗೇ

    ಟೋಪಿ ಇಟ್ಟವ ಬೇರೆಯವರನ್ನು ಬಿಟ್ಟಾನಾ, ಕೊಡಿ ಕಂಪ್ಲೇಂಟ್’ ಅಂತ ಒತ್ತಾಯಿಸಿದರು. ಬ್ಯಾಟರಾಯನಪುರ ಠಾಣೆಯಲ್ಲಿ ದೂರು ದಾಖಲಿಸಿದೆ, ಹಾಗೆಯೇ ಅಲ್ಲಿಯ ಮುಖ್ಯಾಧಿಕಾರಿಯವರೊಡನೆ ಭರಣಿಯವರೂ ಮಾತಾಡಿದರು. ಅಲ್ಲಿಂದ ಮೊಬೈಲ್​ಗೆ ಕರೆ ಮಾಡಿದಾಗ ಕಾಲರ್

    ಐಡಿಯಲ್ಲಿ ಆತನ ಹೆಸರು ಸೈಯದ್ ಸಫಿಯಾನ್ ಅಂತ ತೋರಿಸುತ್ತಿತ್ತು. ಈ ಬಗ್ಗೆ ವಿಜಯವಾಣಿಗೆ ಹೇಳಿದಾಗ ಮರುದಿನ ‘ಜಾದುಗಾರಗೆ ವಂಚನೆ’ ಅಂತ ಸುದ್ದಿ ಮಾಡಿದರು. ನಂತರ ನನಗೆ ಕರೆಗಳ ಸುರಿಮಳೆ.

    ಅಸಲಿಗೆ ನಾನು ಮೋಸಹೋದದ್ದು ದುರಾಸೆಯಿಂದಲ್ಲ. ಡಾಕ್ಟರ್ ಅನ್ನುವ ಗೌರವದಿಂದ ನಂಬಿದೆ. ಇದು ಬೇರೆಯವರಿಗೆ ಆಗಬಾರದೆನ್ನುವ ಕಳಕಳಿಯಿಂದ ಬರೆದಿದ್ದೇನೆ. ಕಾರ್ಕಳದ ಇಎನ್​ಟಿ ಡಾಕ್ಟರ್ ಮಧುಕರ್ ಅವರಿಗೆ ಒಬ್ಬ ಮೆಡಿಕಲ್ ರೆಪ್ರೆಸೆಂಟೆಟಿವ್ ಮೋಸ ಮಾಡಿದ ಕಥೆಯನ್ನು ಮುಂದೆ ಹೇಳ್ತೀನಿ.

    ಜೋಕು: ಡಾಕ್ಟ್ರು ಪೇಶೆಂಟ್​ಗೆ ಮಾತ್ರೆ ಕೊಡುತ್ತಾ- ‘ರಾತ್ರಿ ಮಲಗ್ತಾ ಈ ಮಾತ್ರೆ ತಗೊಳ್ಳಿ, ಬೆಳಗ್ಗೆ ಎದ್ರೆ ಇದನ್ನು ತಗೊಳ್ಳಿ!’

    (ಲೇಖಕರು ಖ್ಯಾತ ಜಾದೂಗಾರರು, ಬರಹಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts