ನಿಧಿಗಾಗಿ ಉಚ್ಚಂಗಿದುರ್ಗದಲ್ಲಿ ವಾಮಾಚಾರ

ಹರಪನಹಳ್ಳಿ: ತಾಲೂಕಿನ ಉಚ್ಚಂಗಿದುರ್ಗದ ಕೋಟೆಯ ಹೊಂಡದ ಬಳಿಯಿರುವ ಜೈನ ದೇವಾಲಯದಲ್ಲಿ ಮಂಗಳವಾರ ವಾಮಾಚಾರ ನಡೆಸಿರುವ ದುಷ್ಕರ್ಮಿಗಳು ನಿಧಿ ಆಸೆಗೆ ಪುರಾತನ ವಿಗ್ರಹ ಧ್ವಂಸಗೊಳಿಸಿ ಪರಾರಿಯಾಗಿದ್ದಾರೆ. ದಿಗಂಬರ ದೇವಾಲಯದಲ್ಲಿ ಜೈನ ತೀರ್ಥಂಕರ ವಿಗ್ರಹದ ಎದುರು ಎರಡು ಅಡಿ ಚೌಕಾಕಾರದಲ್ಲಿ ಬಣ್ಣದ ಪುಡಿಗಳಿಂದ ರಂಗೋಲಿ ಚಿತ್ರಿಸಲಾಗಿದೆ.

ರಂಗೋಲಿಯ ನಾಲ್ಕು ದಿಕ್ಕುಗಳಲ್ಲಿ ವಿವಿಧ ಸಾಮಗ್ರಿಗಳನ್ನು ಗಂಟು ಕಟ್ಟಿ ಇಡಲಾಗಿದೆ. ದೇವಾಲಯದ ಒಳಗೂ ನಾಲ್ಕೈದು ಕಡೆ ವಾಮಾಚಾರ ಮಾಡಲಾಗಿದೆ. ಪದ್ಮಾಸನದಲ್ಲಿರುವ ವಿಗ್ರಹವನ್ನು ವಿರೂಪಗೊಳಿಸಲಾಗಿದೆ.

ವಾಮಾಚಾರ ಮಾಡಿರುವುದಕ್ಕೆ ಗ್ರಾಮಸ್ಥರು ದೇಗುಲ ಪ್ರವೇಶಿಸಲು ಭಯ ಪಡುತ್ತಿದ್ದಾರೆ. ಉಚ್ಚಂಗೆಮ್ಮ ಬೆಟ್ಟದಲ್ಲಿರುವ ದೇವಸ್ಥಾನ, ಕೋಟೆ ಪ್ರದೇಶದಲ್ಲಿ ಕಳ್ಳರು, ದುಷ್ಕರ್ಮಿಗಳ ಹಾವಳಿ ಹೆಚ್ಚಾಗಿದೆ. ಪ್ರವಾಸೋಧ್ಯಮ ಇಲಾಖೆ ಕೇವಲ ಇಬ್ಬರು ಪ್ರವಾಸಿ ಮಿತ್ರರನ್ನು ನೇಮಿಸಿದೆ.

ಪುರಾತನ ಜೈನ ದೇವಾಲಯದ ರಕ್ಷಣೆಗೆ ಪೊಲೀಸ್ ಉಪಠಾಣೆ ತೆರೆಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.