ಬೀದಿ ನಾಯಿಗಳ ದಾಳಿಯಿಂದ 2 ವರ್ಷದ ಮಗು ಸಾವು

ಬೆಳಗಾವಿ: ಬೀದಿನಾಯಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ 2 ವರ್ಷದ ಮಗು ಇಲ್ಲಿನ ಕೆಎಲ್‌ಇ ಆಸ್ಪತ್ರೆಯಲ್ಲಿ ಗುರುವಾರ ಬೆಳಗ್ಗೆ ಸಾವನ್ನಪ್ಪಿದೆ.

ತಾಲೂಕಿನ ಪಂತಬಾಳೆಕುಂದ್ರಿ ಗ್ರಾಮದ ಅಬ್ಬಾಸ್‌ಅಲಿ ಈಸೂಬ್ ಸನದಿ ಮೃತಪಟ್ಟ ಮಗು. ನಾಯಿಗಳ ದಾಳಿಯಿಂದ ಬುಧವಾರ ಸಂಜೆ ಗಾಯಗೊಂಡಿದ್ದ ಮಗುವನ್ನು ಚಿಕಿತ್ಸೆಗಾಗಿ ಇಲ್ಲಿನ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆ ಹಾಗೂ ಕುತ್ತಿಗೆ ಭಾಗದಲ್ಲಿ ಆಗಿದ್ದ ಗಂಭೀರ ಗಾಯಗಳಿಗೆ ವೈದ್ಯರು ಚಿಕಿತ್ಸೆ ಆರಂಭಿಸಿದ್ದರು. ಆದರೆ ಗುರುವಾರ ಬೆಳಗ್ಗೆ ಮಗು ಸಾವನ್ನಪ್ಪಿದೆ. ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.

ಬೀದಿನಾಯಿಗಳ ಕಾಟದಿಂದ ಬೇಸತ್ತ ಜನತೆ ಇಲ್ಲಿನ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮೌಖಿಕ ಮನವಿ ಸಲ್ಲಿಸಿದರೂ ಯಾವುದೆ ಕ್ರಮ ಜರುಗಿಸಿಲ್ಲ. ಇನ್ನಾದರೂ ಬೀದಿ ನಾಯಿ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎನ್ನುವುದು ಮೃತ ಮಗುವಿನ ಸಂಬಂಧಿಕರು ಗ್ರಾಮ ಪಂಚಾಯಿತಿ ಆಡಳಿತಕ್ಕೆ ಮನವಿ ಮಾಡುತ್ತಿದ್ದಾರೆ.

ಘಟನೆ : ತಾಯಿ ಬುಧವಾರ ಕೆಲಸಕ್ಕೆ ತೆರಳಿದ್ದರು. ಸಂಜೆ 4.30ರ ಸುಮಾರಿಗೆ ಹಿತ್ತಲಿನಲ್ಲಿ ಮಗು ಶೌಚಕ್ಕೆ ತೆರಳಿದೆ. ಮಗು ಹಿತ್ತಲಕ್ಕೆ ತೆರಳಿದ್ದು ಕುಟುಂಬ ಸದಸ್ಯರ ಗಮನಕ್ಕೆ ಬಂದಿರಲಿಲ್ಲ. ಹೀಗಾಗಿ ಸಂಜೆ 5.30ರ ವರೆಗೂ ಮಗುವನ್ನು ನೆರೆಹೊರೆಯವರ ಮನೆಗಳಲ್ಲಿ ವಿಚಾರಿಸಿದ್ದಾರೆ. ಕೊನೆಗೆ ಹಿತ್ತಲಕ್ಕೆ ತೆರಳಿದಾಗ ಕಸದ ಗುಂಡಿಯೊಂದರಲ್ಲಿ ಮಗುವನ್ನು ಕೆಡವಿ ಐದಾರು ನಾಯಿಗಳು ಮಗುವನ್ನು ಎಲ್ಲೆಂದರಲ್ಲಿ ಕಚ್ಚುತ್ತಿರುವುದು ಮನೆಯವರ ಗಮನಕ್ಕೆ ಬಂದಿದೆ. ಕೂಡಲೇ ಪಾಲಕರು ಮಗುವನ್ನು ರಕ್ಷಿಸಿದ್ದಾರೆ.

ಸ್ಥಳೀಯ ನಿರ್ಮಲ ನಗರದ ಆಸ್ಪತ್ರೆಯಲ್ಲಿ ಮಗುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಇಲ್ಲಿನ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಕ್ತದೊತ್ತಡ ಕಡಿಮೆಯಾಗಿ ಗುರುವಾರ ಬೆಳಗ್ಗೆ ಮಗು ಮೃತಪಟ್ಟಿದೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.