ಹರಕೆ ಪ್ರಸಾದ ಸೇವನೆ, ಮಹಿಳೆಯರಿಬ್ಬರು ಸಾವು

ಚಿಕ್ಕಬಳ್ಳಾಪುರ/ಚಿಂತಾಮಣಿ: ಚಾಮರಾಜನಗರ ಜಿಲ್ಲೆ ಸುಳ್ವಾಡಿಯ ಕಿಚ್ಚುಗತ್ತಿ ಮಾರಮ್ಮ ದೇವಾಲಯದಲ್ಲಿ ವಿಷಪ್ರಸಾದ ಪ್ರಕರಣ ಮಾಸುವ ಮುನ್ನವೇ ಚಿಂತಾಮಣಿಯಲ್ಲಿ ಹರಕೆಯ ಪ್ರಸಾದಕ್ಕೆ ಮಹಿಳೆಯರಿಬ್ಬರು ಬಲಿಯಾಗಿದ್ದಾರೆ.

ಚಿಂತಾಮಣಿಯ ನಾರಸಿಂಹಪೇಟೆಯ ಅಮ್ಮ ಗಂಗಾಭವಾನಿ ದೇವಾಲಯದಲ್ಲಿ ಶುಕ್ರವಾರ ರಾತ್ರಿ ಅವಘಡ ನಡೆದಿದೆ. ಪ್ರಸಾದ ಸೇವಿಸಿ ಅಸ್ವಸ್ಥಗೊಂಡ ಒಂದೇ ಕುಟುಂಬದ 7 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಮಕ್ಕಳಿಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಹರಕೆ ಹೊತ್ತುಕೊಂಡ ಭಕ್ತರೊಬ್ಬರು ತಯಾರಿಸಿ ತಂದಿದ್ದ ಕೇಸರಿ ಬಾತ್ ಸೇವಿಸಿ ಶಿಡ್ಲಘಟ್ಟ ತಾಲೂಕು ಗಡಿಮಂಚೇನಹಳ್ಳಿಯ ಸರಸ್ವತಮ್ಮ(56), ನಾರಸಿಂಹಪೇಟೆಯ ಕವಿತಾ (28), ಮೃತಪಟ್ಟಿದ್ದಾರೆ. ಕವಿತಾ ಪತಿ ಗಂಗಾಧರ್, ಮಕ್ಕಳಾದ ಗಾನವಿ, ಚರಣ್, ಸಹೋದರ ರಾಜು, ಅವರ ಪತ್ನಿ ರಾಧಾ ಎಂಬುವರನ್ನು ಕೋಲಾರದ ಆಸ್ಪತ್ರೆ, ಗಂಗಾಧರ್ ತಾಯಿ ನಾರಾಯಣಮ್ಮ, ಶಿವಕುಮಾರ್, ವೆಂಕಟರಮಣಪ್ಪ ಎಂಬುವರನ್ನು ಚಿಂತಾಮಣಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಡೆದಿದ್ದೇನು?: ದೇವಾಲಯದಲ್ಲಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ವಿಶೇಷ ಪೂಜೆ ನಡೆಯುತ್ತದೆ. ಇದಕ್ಕೆ ಸುತ್ತಲಿನ ಭಕ್ತಾದಿಗಳು ಆಗಮಿಸುತ್ತಾರೆ. ಅದರಂತೆ ಶುಕ್ರವಾರ ರಾತ್ರಿ ಹಲವರು ಪ್ರಸಾದ ಸ್ವೀಕರಿಸಿದ್ದರು. ಬಳಿಕ ಹೊಟ್ಟೆನೋವು, ವಾಂತಿಯಾಗಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಕವಿತಾ, ಸರಸ್ವತಮ್ಮ ಮೃತಪಟ್ಟಿದ್ದಾರೆ.

ಮಹಿಳೆ ಮೇಲೆ ಅನುಮಾನ: ಹರಕೆ ಹೊತ್ತ ಭಕ್ತರು ಮನೆಯಿಂದ ತಿಂಡಿ ತಯಾರಿಸಿ ತಂದು ಜನರಿಗೆ ಹಂಚುವುದು ವಾಡಿಕೆ. ಅದರಂತೆ ಮಂಗಳವಾರ ಮೊಸರನ್ನ, ಕೇಸರಿಬಾತ್, ಪುಳಿಯೊಗರೆ ಹಂಚಲಾಗಿದೆ. ಕೇಸರಿಬಾತ್ ಸೇವಿಸಿದವರ ಆರೋಗ್ಯದಲ್ಲಿ ಏರುಪೇರಾಗಿದೆ. ಮಹಿಳೆಯೊಬ್ಬರು ಬಲವಂತವಾಗಿ ಪ್ರಸಾದ ಹಂಚಿರುವ ಮಾಹಿತಿ ಸಿಕ್ಕಿದೆ.

ಮಹಿಳೆ ಬೆನ್ನತ್ತಿದ ಪೊಲೀಸ್: ಅನುಮಾನಾಸ್ಪದ ಮಹಿಳೆ ಬೆನ್ನತ್ತಿದ ಪೊಲೀಸರಿಗೆ ವೃದ್ಧೆಯೊಬ್ಬರು ಸಾಥ್ ನೀಡಿದ್ದು, ಆಕೆ ಹೆಸರು ಅಮರಾವತಿ ಎಂದು ಗೊತ್ತಾಗಿದೆ. ಆಕೆ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾಳೆ. ಸ್ಥಳೀಯ ಅಂಗಡಿ ಮಾಲೀಕರೊಬ್ಬರು ತಯಾರಿಕೊಟ್ಟ ಪ್ರಸಾದ ತಂದು ಹಂಚಿದ ಮಹಿಳೆ ಪರಾರಿಯಾಗಿ ರುವುದು ಏಕೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಪ್ರಯೋಗಾಲಯಕ್ಕೆ ಪ್ರಸಾದ ರವಾನೆ

ದುರಂತಕ್ಕೆ ಕಾರಣವಾದ ಪ್ರಸಾದದ ಸ್ಯಾಂಪಲ್​ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಪಕ್ಕದ ಅಂಗಡಿಗಳ ಸಿಸಿ ಕ್ಯಾಮರಾ ಫೂಟೇಜ್ ಅನ್ನೂ ವಶಕ್ಕೆ ಪಡೆಯಲಾಗಿದೆ. ಪ್ರಸ್ತುತ ದೇವಾಲಯದ ಅರ್ಚಕ ಸುರೇಶ್​ಬಾಬು ಮತ್ತು ಟ್ರಸ್ಟಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್ಪಿ ಕಾರ್ತಿಕ್​ರೆಡ್ಡಿ ತಿಳಿಸಿದ್ದಾರೆ.

ರದಿ ಬರಬೇಕಿದೆ: ದುರಂತಕ್ಕೆ ಕಲುಷಿತ ಆಹಾರ ಅಥವಾ ವಿಷಪ್ರಾಶನ ಕಾರಣವೇ ಎಂಬುದು ಗೊತ್ತಾಗಿಲ್ಲ. ಅಧಿಕಾರಿಗಳು ಸಂಗ್ರಹಿಸಿರುವ ಕೇಸರಿಬಾತ್​ನಲ್ಲಿ ವಾಸನೆ ಕಂಡುಬಂದಿಲ್ಲ. ಅಸ್ವಸ್ಥರು ಚೇತರಿಸಿ ಕೊಳ್ಳುತ್ತಿದ್ದು, ವಿಷಪ್ರಾಶನ ಸಾಧ್ಯತೆ ಕಡಿಮೆ. ನಿಖರ ಕಾರಣ ತಿಳಿಯಲು ಪ್ರಯೋಗಾಲಯದ ವರದಿ ಬರಬೇಕೆಂದು ವೈದ್ಯರು ತಿಳಿಸಿದ್ದಾರೆ.

ದೇವಾಲಯಗಳಲ್ಲಿ ಪ್ರಸಾದ ವಿತರಣೆಯಿಂದಾಗುತ್ತಿರುವ ದುರಂತಗಳನ್ನು ತಡೆಗಟ್ಟಲು ಮಾರ್ಗಸೂಚಿಗಳನ್ನು ಹೊರಡಿಸುವ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗುವುದು. ಚಿಕ್ಕಬಳ್ಳಾಪುರ ಡಿಸಿ ಹಾಗೂ ಎಸ್​ಪಿಯಿಂದ ಮಾಹಿತಿ ಪಡೆಯಲಾಗಿದೆ.

| ಎಚ್.ಡಿ. ಕುಮಾರಸ್ವಾಮಿ, ಸಿಎಂ