ಕಿವೀಸ್​ ಮಹಿಳಾ ಕ್ರಿಕೆಟರ್​ ಜತೆ ವಿವಾಹವಾದ ಆಸಿಸ್​ ಮಹಿಳಾ ಕ್ರಿಕೆಟರ್!​

ಸಿಡ್ನಿ: ನ್ಯೂಜಿಲೆಂಡ್​ನ ಮಹಿಳಾ ಕ್ರಿಕೆಟರ್​ ಹೇಯ್ಲೆ ಜೆನ್ಸನ್​ ಹಾಗೂ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟರ್​ ನಿಕೊಲಾ ಹ್ಯಾನ್ಕಾಕ್ ನಡುವೆ ಕಳೆದ ವೀಕೆಂಡ್​ನಲ್ಲಿ ವಿವಾಹ ನೆರವೇರಿದೆ.

ಆಲ್​ ರೌಂಡರ್ ಹೇಯ್ಲೆ ಜೆನ್ಸನ್​ ಅವರು ಮಹಿಳಾ ಬಿಗ್​ ಬ್ಯಾಷ್​ ಲೀಗ್​ನ ಮೊದಲೆರಡು ಆವೃತ್ತಿಯಲ್ಲಿ ಮೆಲ್ಬೋರ್ನ್​ ತಂಡವನ್ನು​ ಪ್ರತಿನಿಧಿಸಿದ್ದರು. ಮೂರನೇ ಆವೃತ್ತಿಯಲ್ಲಿ ಮೆಲ್ಬೋರ್ನ್​ ರೆನೆಗೇಡ್ಸ್​ಕ್ಕೆ ಸೇರ್ಪಡೆಯಾಗಿದ್ದರು.

ನಿಕೊಲಾ ಹ್ಯಾನ್ಕಾಕ್ ಅವರು ಆಸ್ಟ್ರೇಲಿಯನ್​ ಟಿ20 ಲೀಗ್​ನಲ್ಲಿ ಟೀಂ ಗ್ರೀನ್​ ತಂಡವನ್ನು ಪ್ರತಿನಿಧಿದ್ದಾರೆ. ಮೆಲ್ಬೋರ್ನ್​ ಸ್ಟಾರ್ಸ್​ ಎಂಬ ಟ್ವಿಟರ್​ ಖಾತೆಯಲ್ಲಿ ಇವರಿಬ್ಬರು ವಿವಾಹವಾಗಿರುವುದನ್ನು ಬಹಿರಂಗಪಡಿಸಿದ್ದು, ಅದಕ್ಕೆ ಸಾಕ್ಷಿಯಾಗಿ ಇಬ್ಬರ ವಿವಾಹ ಸಮಾರಂಭದ ಫೋಟೋವನ್ನು ಶೇರ್​ ಮಾಡಿದೆ.

ಟೀಂ ಗ್ರೀನ್​ ತಂಡದವರು ಸ್ಟಾರ್​ ಬೌಲರ್​ ನಿಕೊಲಾ ಹ್ಯಾನ್ಕಾಕ್ ಅವರಿಗೆ ಮದುವೆಯ ಶುಭ ಕೋರಿರುವುದಾಗಿ ಮೆಲ್ಬೋರ್ನ್​ ಸ್ಟಾರ್ಸ್​ ಟ್ವಿಟರ್​ನಲ್ಲಿ ತಿಳಿಸಿದೆ.

2017/18ರ ವಿಕ್ಟೋರಿಯಾ ಮಹಿಳಾ ಪ್ರೀಮಿಯರ್​ ಕ್ರಿಕೆಟ್​ ಸ್ಪರ್ಧೆಯಲ್ಲಿ ಉತ್ತಮ ಆಟಗಾರ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಜೆನ್ಸನ್​, ಉನ ಪೈಸ್ಲೆ ಮೆಡಲ್​ ಅನ್ನು ಜಯಿಸಿದ್ದಾರೆ. 2014ರಲ್ಲಿ ಮೊದಲ ಬಾರಿಗೆ ನ್ಯೂಜಿಲೆಂಡ್​ ಮಹಿಳಾ ತಂಡವನ್ನು ಸೇರಿಕೊಂಡ ಅವರು ಮಾರ್ಚ್​ 2015ರಲ್ಲಿ ಪ್ರರ್ಹಾನ್​ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಮೆಲ್ಬೋರ್ನ್​ ಕ್ರಿಕೆಟ್​ ಕ್ಲಬ್​ ಪರ ಆಡಿ 122 ರನ್​ ಗಳಿಸಿದ್ದರು. ಈ ಮೂಲಕ ಮೆಲ್ಬೋರ್​ ಕ್ರಿಕೆಟ್​ ಕ್ಲಬ್​ನಲ್ಲಿ ಮೊದಲ ಶತಕ ಸಿಡಿಸಿದ ಆಟಗಾರ್ತಿ ಎಂಬ ದಾಖಲೆಯನ್ನು ಸೃಷ್ಟಿಸಿದ್ದಾರೆ.

ಹ್ಯಾನ್ಕಾಕ್ ಇತ್ತೀಚೆಗಷ್ಟೇ ಮಹಿಳಾ ಬಿಗ್​ ಬ್ಯಾಷ್​ ಲೀಗ್​ ಅನ್ನು ಮುಗಿಸಿದ್ದು, ಮೆಲ್ಬೋರ್ನ್​ ಸ್ಟಾರ್ಸ್​ ಪರ ಆಡಿದ್ದಾರೆ. ಒಟ್ಟು 14 ಪಂದ್ಯಗಳನ್ನು ಆಡಿ 13 ವಿಕೆಟ್​ ಪಡೆದು ಹೆಚ್ಚು ವಿಕೆಟ್​ ಪಡೆದ ಎರಡನೇ ಆಟಗಾರ್ತಿ ಎಂಬ ಖ್ಯಾತಿಯನ್ನು ಪಡೆದಿದ್ದಾರೆ. ಲೀಗ್​ನಲ್ಲಿ 19.92 ಸರಾಸರಿಯಲ್ಲಿ ಬೌಲಿಂಗ್​ ಮಾಡಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಸಿಡ್ನಿ ಸಿಕ್ಸರ್​ ತಂಡದ ವಿರುದ್ಧ 22 ರನ್​ಗೆ 4 ವಿಕೆಟ್​ ಉರುಳಿಸಿ ತಂಡದ ಜಯಕ್ಕೆ ಕಾರಣವಾಗಿದ್ದು ಲೀಗ್​ನಲ್ಲಿನ ಗಮನಾರ್ಹ ಆಟವಾಗಿದೆ.

ಆ. 19, 2013ರಿಂದ ಒಂದೇ ಲಿಂಗದವರು ವಿವಾಹವಾಗುವುದು ನ್ಯೂಜಿಲೆಂಡ್​ನಲ್ಲಿ ಕಾನೂನುಬದ್ಧವಾಗಿದೆ. ಈ ಸಂಬಂಧ ನಡೆದ ಒಂದೇ ಲಿಂಗದವರು ಮದುವೆಯಾಗುವ ಕಾನೂನುಬದ್ದಗೊಳಿಸುವಿಕೆಯ ಮಸೂದೆಯನ್ನು ಮತದಾನದ ಮೂಲಕ ನಿರ್ಧರಿಸಲಾಯಿತು. ಏ. 17ರಂದು ನ್ಯೂಜಿಲೆಂಡ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ನಲ್ಲಿ ನಡೆದ ಮತದಾನದಲ್ಲಿ 77ರಲ್ಲಿ 44 ಮತಗಳು ಪರವಾಗಿ ಬಂದಿದ್ದರಿಂದ ಏ. 19 ರಂದು ರಾಯಲ್ ಅಸೆಂಬ್ಲಿಯ ಮಸೂದೆಯನ್ನು ಅಂಗೀಕರಿಸಿತು.

ಕಳೆದ ವರ್ಷ ದಕ್ಷಿಣ ಆಫ್ರಿಕಾದ ಮಹಿಳಾ ಕ್ರಿಕೆಟ್​ ತಂಡದ ನಾಯಕಿ ಡೇನ್​ ವ್ಯಾನ್​ ನೈಕರ್ಕ್​ ಮತ್ತು ತಂಡದ ಸಹ ಆಟಗಾರ್ತಿ ಮಾರಿಝನ್ನೆ ಕಪ್ಪ್​ ಜತೆ ವಿವಾಹವಾಗಿದ್ದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *