ಗಂಗಮ್ಮ ಗುಡಿ ವಿಷ ಪ್ರಸಾದ ದುರಂತ: ಎರಡಕ್ಕೇರಿದ ಮೃತರ ಸಂಖ್ಯೆ

ಚಿಕ್ಕಬಳ್ಳಾಪುರ: ಚಿಂತಾಮಣಿ ಗಂಗಮ್ಮ ದೇವಸ್ಥಾನ ವಿಷ ಪ್ರಸಾದ ದುರಂತ ಪ್ರಕರಣದಲ್ಲಿ ಸಾವಿಗೀಡಾದವರ ಸಂಖ್ಯೆ ಎರಡಕ್ಕೇರಿದೆ. ಅಸ್ವಸ್ಥಗೊಂಡಿದ್ದ ಮತ್ತೋರ್ವ ಮಹಿಳೆ ಶನಿವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಸರಸ್ವತಮ್ಮ (56) ಕೋಲಾರ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಪ್ರಸಾದ ತಿಂದು ಅಸ್ವಸ್ಥಗೊಂಡು ಮಧ್ಯಾಹ್ನ ಆಸ್ಪತ್ರೆಗೆ ದಾಖಲಾಗಿದ್ದರು. ಸರಸ್ವತಮ್ಮ ಶಿಡ್ಲಘಟ್ಟ ತಾಲೂಕಿನ ಗಡಿಮಿಂಚೇನಹಳ್ಳಿ ನಿವಾಸಿ. ಮಗಳು ಗೌರಿ ಮನೆಗೆ ಬಂದಿದ್ದ ಸರಸ್ವತಮ್ಮ, ಗಂಗಮ್ಮ ದೇವಸ್ಥಾನದಲ್ಲಿ‌ ನೀಡಿದ್ದ ಪ್ರಸಾದ ಸೇವಿಸಿದ್ದರು.

ಇಂದು ಬೆಳಗ್ಗೆ ಚಿಂತಾಮಣಿ ನಗರದ ನಾರಸಿಂಹ ಪೇಟೆಯಲ್ಲಿರುವ ಗಂಗಮ್ಮ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ ಕವಿತಾ(28) ಎಂಬಾಕೆ ಮೃತಪಟ್ಟಿದ್ದರು. ಅಲ್ಲದೆ, ಗಂಗಾಧರ, ಗಾನವಿ, ಚರಣ್, ನಾರಾಯಣಮ್ಮ ಮತ್ತು ವೆಂಕಟರಮಣಪ್ಪ ಸೇರಿ ಇತರೆ 9 ಜನರ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 30 ಮಂದಿ ಪ್ರಸಾದ ಸೇವಿಸಿದ್ದರು ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್​​)