ತುಮಕೂರು: ಮೂರು ತಿಂಗಳಲ್ಲಿ ಮೂವತ್ತು ಬೈಕ್ಗಳನ್ನು ಕದ್ದಿದ್ದ ಖದೀಮನನ್ನು ಹೊಸ ಬಡಾವಣೆ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 11,23,390 ರೂ., ಮೌಲ್ಯದ ಒಟ್ಟು 30 ವಿವಿಧ ಮಾದರಿಯ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಆಂಧ್ರಪ್ರದೇಶದ ಮಡಕಶಿರಾ ಮೂಲದ ಚಿತ್ತಪ್ಪಗಾರಿ ಆನಂದ (32) ಬಂಧಿತ ಆರೋಪಿ. ಈತ ನಗರದ ರೈಲ್ವೆ ಸ್ಟೇಷನ್ ಮುಂಭಾಗದ ರಸ್ತೆಯ ಪಾರ್ಕಿಂಗ್ ಹಾಗೂ ತುಮಕೂರು ವಿವಿ ಮುಂಭಾಗದ ಪಾರ್ಕಿಂಗ್ನಲ್ಲಿ ನಿಲ್ಲಿಸುತ್ತಿದ್ದ ವಾಹನಗಳನ್ನು ಕದ್ದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಈತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಏಪ್ರಿಲ್ 20 ರಂದು ಸುಮುಖ ಎಂಬುವರು ಡಿಯೋ ದ್ವಿಚಕ್ರವಾಹನವನ್ನು ಸರ್ಕಾರಿ ಪ್ರಥಮದರ್ಜೆ ಕಾಲೇಜು ಮುಂಭಾಗ ನಿಲ್ಲಿಸಿ ಬೆಂಗಳೂರಿಗೆ ಕೆಲಕ್ಕೆ ಹೋಗಿ ಸಂಜೆ ಬಂದು ನೋಡಿದಾಗ ವಾಹನ ಕಾಣೆಯಾಗಿದ್ದಾಗಿ ಹೊಸ ಬಡಾವಣೆ ಠಾಣೆಗೆ ದೂರು ನೀಡಿದ್ದು ಈ ದೂರಿನ ಬೆನ್ನತ್ತಿದ ಪೊಲೀಸರಿಗೆ ಕುಖ್ಯಾತ ಬೈಕ್ ಕಳ್ಳ ಬಲೆಗೆ ಬಿದ್ದಿದ್ದಾನೆ. ಮೂರೇ ತಿಂಗಳಲ್ಲಿ 30 ಬೈಕ್ಗಳನ್ನು ಕಳುವು ಮಾಡಿರುವುದು ತನಿಖೆ ವೇಳೆ ಬಯಲಾಗಿದೆ.
ತಿಲಕ್ ಪಾರ್ಕ್ ಸಿಪಿಐ ಪುರುಷೋತ್ತಮ್, ಎನ್ಇಪಿಎಸ್ ಪಿಎಸ್ಐಗಳಾದ ಚೇತನ್ ಕುಮಾರ್, ಮಂಗಳಮ್ಮ, ಎಎಸ್ಐ ಸೈಯದ್ ಮುಕ್ತಿಯಾರ್, ಪೇದೆಗಳಾದ ಕೆ.ಟಿ.ನಾರಾಯಣ, ನೀಲಕಂಠಯ್ಯ, ಕುಮಾರಸ್ವಾಮಿ, ಟಿ.ಎಚ್.ಮಂಜುನಾಥ್ ಮತ್ತಿತರರ ತಂಡವು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆನ್ಲೈನ್ ಚಟ, ಬೈಕ್ಗಳ ಕಳವು !
ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ವಾಸಿಸುತ್ತಿದ್ದ ಆನಂದ, ಮಾರ್ಚ್ನಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಬಂಧಿಕರೊಬ್ಬರನ್ನು ನೋಡಲು ಬಂದಿದ್ದ ವೇಳೆ ನಗರದ ರೈಲ್ವೆ ನಿಲ್ದಾಣದ ಬಳಿಯ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮುಂಭಾಗ ರಸ್ತೆಯಲ್ಲಿ ಪಾರ್ಕಿಂಗ್ ಮಾಡಿದ್ದ ಬೈಕ್ ಅನ್ನು ನಕಲೀ ಕೀ ಬಳಸಿ ಸಲೀಸಾಗಿ ಕದ್ಯೊಯ್ಯಿದಿದ್ದ. ಇದನ್ನೇ ಅಭ್ಯಾಸ ಮಾಡಿಕೊಂಡ ಆನಂದ ನಗರದ ವಿವಿಧೆಡೆ ರಸ್ತೆಬದಿಯಲ್ಲಿ ನೂರಕ್ಕು ಹೆಚ್ಚು ವಾಹನಗಳನ್ನು ನಿಲ್ಲಿಸುವ ಪಾರ್ಕಿಂಗ್ ಸ್ಥಳಗಳನ್ನು ಆಯ್ದುಕೊಂಡು ಕಳ್ಳತನ ಮಾಡಲು ಶುರು ಮಾಡಿಕೊಂಡಿದ್ದ. ಕದ್ದ ಬೈಕ್ಗಳನ್ನು 15 ರಿಂದ 25 ಸಾವಿರ ರೂ.,ವರೆಗೆ ಮಾರಾಟ ಮಾಡಿ ಆ ಹಣವನ್ನು ಆನ್ಲೈನ್ ರಮ್ಮಿ ಆಡಿ ಕಳೆದಿರುವುದು ತನಿಖೆ ವೇಳೆ ಬಯಲಿಗೆ ಬಂದಿದೆ.