More

    ಬಿಬಿಎಂಪಿ ಕಸದ ಲಾರಿಗೆ ಡಿಕ್ಕಿ ಹೊಡೆದು ದ್ವಿಚಕ್ರ ಸವಾರ ಸಾವು

    ಬೆಂಗಳೂರು: ರಸ್ತೆ ಬದಿ ನಿಲುಗಡೆ ಮಾಡಿದ್ದ ಬಿಬಿಎಂಪಿ ಕಸದ ಲಾರಿಗೆ ಹಿಂದಿನಿಂದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಪ್ರಕರಣ ಜಯನಗರದ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ.

    ಯಲಚೇನಹಳ್ಳಿ ನಿವಾಸಿ ಜಯಲಿಂಗ(೨೫) ಮೃತಪಟ್ಟವರು. ಭಾನುವಾರ ತಡರಾತ್ರಿ ೧೨.೪೫ರ ಸುಮಾರಿಗೆ ಜಯನಗರ ೭ನೇ ಬ್ಲಾಕ್‌ನ ೪ನೇ ಮುಖ್ಯರಸ್ತೆಯಿಂದ ೨೭ನೇ ಅಡ್ಡ ರಸ್ತೆ ಕಡೆಗೆ ಹೋಗುವಾಗ ಜಯನಗರ ಮೆಟ್ರೋ ನಿಲ್ದಾಣದ ಕೆಳಭಾಗದ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ.

    ಕನಕಪುರ ಮೂಲದ ಜಯಲಿಂಗ ಹೋಂ ಅಪ್ಲೈಯನೆನ್ಸ್ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಪತ್ನಿ ಹಾಗೂ ಎಂಟು ತಿಂಗಳ ಮಗುವಿನೊಂದಿಗೆ ಯಲಚೇನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಭಾನುವಾರ ರಾತ್ರಿ ಸ್ನೇಹಿತನನ್ನು ಭೇಟಿಯಾಗಿ ಬಳಿಕ ದ್ವಿಚಕ್ರ ವಾಹನದಲ್ಲಿ ಮನೆಗೆ ವಾಪಾಸ್ ಹೋಗುತ್ತಿದ್ದ. ವೇಗವಾಗಿ ದ್ವಿಚಕ್ರ ವಾಹನ ಚಾಲನೆ ಮಾಡಿಕೊಂಡು ಬಂದ ಪರಿಣಾಮ ಜಯನಗರ ಮೆಟ್ರೋ ನಿಲ್ದಾಣದ ಕೆಳ ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡು ರಸ್ತೆ ಬಿದಿ ನಿಂತಿದ್ದ ಬಿಬಿಎಂಪಿ ಕಸದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸಹಿತ ಜಯಲಿಂಗ ಲಾರಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಅಪಘಾತದ ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಜಯನಗರ ಸಂಚಾರ ಠಾಣೆ ಪೊಲೀಸರು, ಸುಮಾರು ಎರಡು ಗಂಟೆ ಕಾರ್ಯಾಚರಣೆ ನಡೆಸಿ ಲಾರಿಗೆ ಸುಲಿಕಿದ್ದ ದ್ವಿಚಕ್ರ ವಾಹನ ಹಾಗೂ ಜಯಲಿಂಗನ ಮೃತದೇಹ ಹೊರಗೆ ತೆಗೆದು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಮೃತದೇಹ ಹಸ್ತಾಂತರಿಸಿದ್ದಾರೆ.

    ಯಾವುದೇ ಸೂಚನೆ ನೀಡದೆ ಲಾರಿ ನಿಲುಗಡೆ:
    ಅಪಘಾತಕ್ಕೆ ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆ ಒಂದೆಡೆ ಕಾರಣವಾದರೆ, ಮತ್ತೊಂದೆಡೆ ಯಾವುದೇ ಸೂಚನೆ ಇಲ್ಲದೆ ಬಿಬಿಎಂಪಿ ಕಸದ ಲಾರಿಯನ್ನು ರಸ್ತೆ ಬದಿ ನಿಲುಗಡೆ ಮಾಡಿರುವುದು ಮತ್ತೊಂದು ಕಾರಣವಾಗಿದೆ. ಈ ಸಂಬಂಧ ಜಯನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರಾಜ್ಯೋತ್ಸವ ರಸಪ್ರಶ್ನೆ - 24

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts