ಶೈಕ್ಷಣಿಕ ಸ್ಪರ್ಧೆಗೆ ಎರಡೇ ತಂಡ..!

ಶಶಿ ಈಶ್ವರಮಂಗಲ
ವಿದ್ಯಾರ್ಥಿಗಳಿಗೆ ಆಂಗ್ಲ ಮತ್ತು ಹಿಂದಿ ಭಾಷೆ ಬೆಳೆಸುವಲ್ಲಿ ಪರಿಣಾಮಕಾರಿಯಾಗಿರುವ ಶಿಕ್ಷಣ ಇಲಾಖೆಯ ಜನಸಂಖ್ಯಾ ಶಿಕ್ಷಣ ಯೋಜನೆಯಡಿ ನಡೆಸಲಾಗುತ್ತಿರುವ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ತಾಲೂಕಿನ 23 ಸರ್ಕಾರಿ ಪ್ರೌಢಶಾಲೆಗಳ ಪೈಕಿ ಭಾಗವಹಿಸಿದ್ದು ಕೇವಲ 2 ಪ್ರೌಢಶಾಲೆಗಳು…!

ಕೊಂಬೆಟ್ಟು ಪದವಿಪೂರ್ವ ಕಾಲೇಜಿನ ಶಿವಸದನದಲ್ಲಿ ಗುರುವಾರ ಜನಸಂಖ್ಯಾ ಶಿಕ್ಷಣ ಯೋಜನೆಯಡಿಯಲ್ಲಿ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಪಾತ್ರಾಭಿನಯ ವಿಭಾಗದಲ್ಲಿ ಎರಡು ತಂಡಗಳು ಮಾತ್ರ ಭಾಗವಹಿಸಿದ್ದವು.
ಪುತ್ತೂರು ತಾಲೂಕಿನಲ್ಲಿ 23 ಸರ್ಕಾರಿ ಪ್ರೌಢ ಶಾಲೆಗಳಿವೆ. ಈ ಎಲ್ಲ ಶಾಲೆಗಳಲ್ಲಿಯೂ ಇಂಗ್ಲಿಷ್ ಶಿಕ್ಷಕರಿದ್ದಾರೆ. ಪ್ರೌಢಶಾಲೆಯ 8 ಮತ್ತು 9 ತರಗತಿ ಮಕ್ಕಳು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲಿಸಲಾಗಿದ್ದು, ಮೂರು ವಿಭಾಗಗಳಲ್ಲಿಯೂ ಇಂಗ್ಲೀಷ್ ಅಥವಾ ಹಿಂದಿ ಭಾಷೆಯಲ್ಲಿ ಸ್ಪರ್ಧೆ ನಡೆಸಲಾಗುತ್ತದೆ. ಆದರೆ ತಾಲೂಕು ಮಟ್ಟದ ಈ ಸ್ಪರ್ಧೆಯಲ್ಲಿ ಪಾಪೆಮಜಲು ಸರ್ಕಾರಿ ಪ್ರೌಢಶಾಲೆ ಮತ್ತು ಕೊಂಬೆಟ್ಟು ಪ್ರೌಢಶಾಲೆ ಹೊರತು ಪಡಿಸಿದರೆ ಮತ್ತೆ ಯಾವ ಪ್ರೌಢಶಾಲೆಗಳು ಭಾಗವಹಿಸಿಲ್ಲ.

ಶಿಕ್ಷಣ ಇಲಾಖೆಯ ಆದೇಶದಂತೆ ಪ್ರತಿ ಶಾಲೆಯಲ್ಲಿಯೂ ಈ ಸ್ಪರ್ಧೆಗಳನ್ನು ನಡೆಸಬೇಕು. ಅಲ್ಲಿಂದ ತಾಲೂಕು, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಆದರೆ ಪುತ್ತೂರು ತಾಲೂಕಿನ ಯಾವುದೇ ಶಾಲೆಗಳಲ್ಲಿಯೂ ಇಂತಹ ಸ್ಪರ್ಧೆ ನಡೆಯದಿರುವುದು ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಸ್ಪರ್ಧಿಗಳೇ ಇಲ್ಲದಿರುವ ಮೂಲಕ ಸ್ಪಷ್ಟಗೊಂಡಿದೆ.

ಸ್ಪರ್ಧೆ ಮಾನದಂಡಗಳೇನು: ಶಿಕ್ಷಣ ಇಲಾಖೆ ಸೂಚನೆ ಪ್ರಕಾರ ಈ ಬಾರಿ ಆರೋಗ್ಯ ಆಹಾರ, ಮಾನಸಿಕ,ದೈಹಿಕ, ಲೈಂಗಿಕ ವಿಚಾರಗಳನ್ನೊಳಗೊಂಡ ವೈಯಕ್ತಿಕ ಸುರಕ್ಷತೆ, ಮದ್ಯಪಾನ, ಧೂಮಪಾನ, ಅಮಲು ಪದಾರ್ಥ ವಿಚಾರಗಳ ಕುರಿತಾದ ವ್ಯಸನಗಳ ಬಗೆಗಿನ ಪಾತ್ರಾಭಿನಯ ನಡೆಸಲು ವಿದ್ಯಾರ್ಥಿಗಳನ್ನು ಶಿಕ್ಷಕರು ತಯಾರು ಮಾಡಬೇಕು. ಇದರೊಂದಿಗೆ ಜನಪದ ನೃತ್ಯ, ಭಿತ್ತಿಪತ್ರ ವಿಭಾಗಗಳ ವಿಚಾರದಲ್ಲೂ ಸ್ಪರ್ಧೆ ನಡೆಯುತ್ತದೆ. ಈ ಸ್ಪರ್ಧೆಗಳಿಗೆ ಕೇವಲ 6 ನಿಮಿಷದ ಕಾಲಾವಕಾಶ ಮಾತ್ರವಿದ್ದು, ಈ ಮೂರು ವಿಭಾಗದ ಸ್ಪರ್ಧೆಗಳಿಗೆ ಮಕ್ಕಳನ್ನು ತಯಾರು ಮಾಡುವಲ್ಲಿ ಪ್ರೌಢಶಾಲಾ ಶಿಕ್ಷಕರು ಹಿಂದೇಟು ಹಾಕಿರುವುದು ಶಿಕ್ಷಕರಿಗಿರುವ ಆಸಕ್ತಿಯನ್ನು ಪ್ರಶ್ನೆ ಮಾಡುವಂತಿದೆ.

ಮಳೆಯಿಂದ ಸಮಸ್ಯೆಯಾಯಿತು: ಕಾರ್ಯಕ್ರಮದ ನೋಡಲ್ ಅಧಿಕಾರಿಯಾಗಿರುವ ಶಿಕ್ಷಕಿ ರೇವತಿ ಅವರ ಪ್ರಕಾರ ಮಾಹಿತಿ ಕೊರತೆ ಮತ್ತು ಮಳೆಯ ಕಾರಣ ರಜೆ ಇದ್ದ ಕಾರಣ ತರಬೇತಿ ನೀಡಲು ಸಾಧ್ಯವಾಗಿಲ್ಲ ಎನ್ನುವ ಹಿನ್ನೆಲೆಯಿಂದ ಸ್ಪರ್ಧಿಗಳು ಬರಲಿಲ್ಲ. ಆದರೆ ಪ್ರಭಾರ ಕ್ಷೇತ್ರಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಎಲ್ಲಾ ಸರ್ಕಾರಿ ಪ್ರೌಢಶಾಲೆಗಳಿಗೂ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಕೇವಲ 6 ನಿಮಿಷದ ಸ್ಪರ್ಧೆಯೊಂದಕ್ಕೆ ಮಕ್ಕಳನ್ನು ತಯಾರು ಮಾಡುವಲ್ಲಿ ಸರ್ಕಾರಿ ಪ್ರೌಢಶಾಲೆಗಳ ಆಂಗ್ಲ ಭಾಷಾ ಶಿಕ್ಷಕರು ನಿರ್ಲಕ್ಷ್ಯ ತೋರಿದ್ದಾರೆಯೇ ಅನುಮಾನ ಕಾಡುವಂತಾಗಿದೆ.

ಎರಡು ವಿಭಾಗದಲ್ಲಿ ಸ್ಪರ್ಧೆಯೇ ಇಲ್ಲ!: ಮೂರು ವಿಭಾಗದಲ್ಲಿ ಈ ಸ್ಪರ್ಧೆ ನಡೆಯಬೇಕಾಗಿತ್ತು. 23 ಸರ್ಕಾರಿ ಪ್ರೌಢಶಾಲೆಗಳ ಪೈಕಿ ಕನಿಷ್ಠ 10 ಪ್ರೌಢಶಾಲೆಗಳ ಮಕ್ಕಳಾದರೂ ಭಾಗವಹಿಸಬೇಕಾಗಿತ್ತು. ಆದರೆ ಪಾತ್ರಾಭಿನಯ ವಿಭಾಗದ ಸ್ಪರ್ಧೆಯಲ್ಲಿ ಮಾತ್ರ ಮಕ್ಕಳ ಎರಡು ತಂಡಗಳು ಭಾಗವಹಿಸಿ ಸ್ಪರ್ಧೆ ನಡೆಸಲಾಯಿತು. ಉಳಿದ ಎರಡು ವಿಭಾಗಗಳಾದ ಭಿತ್ತಿಪತ್ರ ಮತ್ತು ಜನಪದ ನೃತ್ಯಕ್ಕೆ ಕೇವಲ ಒಂದೊಂದು ತಂಡಗಳು ಮಾತ್ರ ಇದ್ದ ಕಾರಣ ಈ ಸ್ಪರ್ಧೆಯೇ ನಡೆಯಲಿಲ್ಲ.

Leave a Reply

Your email address will not be published. Required fields are marked *