ಬೆಂಗಳೂರು: ನಗರದ ಮೆಜೆಸ್ಟಿಕ್ನಲ್ಲಿರುವ ಕಪಾಲಿ ಚಿತ್ರಮಂದಿರದ ಹಿಂಭಾಗದಲ್ಲಿದ್ದ 4 ಅಂತಸ್ತಿನ ಕಟ್ಟಡ ಮಂಗಳವಾರ ರಾತ್ರಿ ಹಠಾತ್ತನೆ ಕುಸಿದಿದೆ.
ಕಪಾಲಿ ಚಿತ್ರಮಂದಿರದ ಜಾಗದಲ್ಲಿದ್ದ ಕಟ್ಟಡವನ್ನು ಹೊಡೆದು ಹೊಸದಾಗಿ ಕಟ್ಟಡ ಕಟ್ಟುವ ಕಾಮಗಾರಿ ಕೈಗೊಳ್ಳಲಾಗಿತ್ತು. ಟಾಕೀಸ್ನ ಹಿಂಭಾಗದಲ್ಲಿದ್ದ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಇಷ್ಟು ದಿನ ಲಾಡ್ಜಿಂಗ್ ಮತ್ತು ಹೋಟೆಲ್ ಆಗಿ ಬಳಸಲಾಗುತ್ತಿತ್ತು. ಮುಂದಿನ ದಿನಗಳಲ್ಲಿ ಈ ಕಟ್ಟಡವನ್ನು ಹೊಡೆದು ಹೊಸ ಕಟ್ಟಡ ನಿರ್ಮಿಸುವ ಬಗ್ಗೆ ಮಾಲೀಕರು ಚಿಂತನೆ ನಡೆಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಕೊಳೆಗೇರಿಯವರ ಬಳಿ ನಡೆಯಲಿಲ್ಲ ಕರೊನಾ ಆಟ; ಹೌಸಿಂಗ್ ಸೊಸೈಟಿಯವರು ದೂರವೇ ಇಟ್ಟರು…!
ಆದರೆ, ಕಪಾಲಿ ಚಿತ್ರಮಂದಿರವಿದ್ದ ಜಾಗದಲ್ಲಿ 50 ಅಡಿ ಆಳದಲ್ಲಿ ವಾಹನ ನಿಲುಗಡೆ ಸೌಲಭ್ಯ ಕಲ್ಪಿಸಲಾಗುತ್ತಿತ್ತು. ಇದಕ್ಕಾಗಿ ಅವೈಜ್ಞಾನಿಕವಾಗಿ ಭೂಮಿಯನ್ನು ಅಗೆಯಲಾಗಿತ್ತು. ಇದರ ಪರಿಣಾಮ ಅಕ್ಕಪಕ್ಕದ ಕಟ್ಟಡಗಳು ಬಿರುಕುಬಿಟ್ಟಿದ್ದವು. ಈ ಕಾರಣಕ್ಕಾಗಿ ಈ ಕಟ್ಟಡದಲ್ಲಿದ್ದ ಜನರನ್ನು ಸೋಮವಾರ ರಾತ್ರಿಯೇ ತೆರವುಗೊಳಿಸಲಾಗಿತ್ತು.
ಮಂಗಳವಾರ ರಾತ್ರಿಯ ವೇಳೆಗೆ ಬಿರುಕು ಬಿಟ್ಟಿದ್ದ 4 ಅಂತಸ್ತಿನ ಕಟ್ಟಡ ಉರುಳಿದೆ. ಕಟ್ಟಡದಲ್ಲಿ ಯಾರೂ ಇಲ್ಲದಿದ್ದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೇಶದಲ್ಲಿ 15 ಲಕ್ಷದ ಗಡಿದಾಟಿದ ಕರೊನಾ ಸೋಂಕಿತರ ಸಂಖ್ಯೆ; ಚೇತರಿಕೆ ಪ್ರಮಾಣದಲ್ಲಿ ಏರಿಕೆ