ಬೆಳಗಾವಿ: ಇಬ್ಬರು ಅತ್ಯಾಚಾರಿಗಳಿಗೆ ಶಿಕ್ಷೆ ಕಾದಿರಿಸಿ ತೀರ್ಪು

ಬೆಳಗಾವಿ: ರಾಮದುರ್ಗ ತಾಲೂಕಿನ ಮುದಕವಿ ಗ್ರಾಮದಲ್ಲಿ ನಡೆದ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸಿದ 8ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ, ಇಬ್ಬರು ಆರೋಪಿಗಳು ದೋಷಿ ಎಂದು ಮಂಗಳವಾರ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಬುಧವಾರ ಪ್ರಕಟಿಸಲಿದೆ.

ರಾಮದುರ್ಗ ತಾಲೂಕಿನ ಮುದಕವಿ ಗ್ರಾಮದಲ್ಲಿ ತನ್ನ ಗಂಡನಿಗೆ ಬುತ್ತಿ ಕೊಡಲು ಹೊರಟಿದ್ದ ವಿವಾಹಿತ ಮಹಿಳೆ ಮೇಲೆ 1ನೇ ಏಪ್ರಿಲ್ 2017ರಂದು ಮಧ್ಯಾಹ್ನ 3 ಗಂಟೆಗೆ ಕಬ್ಬಿನ ತೋಟದಲ್ಲಿ ಖಾನಾಪುರದ ರವಿ ಯಲ್ಲಪ್ಪ ಧರೆನ್ನವರ(19) ಅತ್ಯಾಚಾರ ಮಾಡಿದ್ದನು. ಮತ್ತೊಬ್ಬ ಆರೋಪಿ ಲಕ್ಷ್ಮಣ ಸಿದ್ದಪ್ಪ ಜಾಲಾಪುರ(43) ಪ್ರಚೋದನೆ ನೀಡಿದ್ದನು.

ಅನತಿ ದೂರದಲ್ಲಿ ಕುರಿ ಮೇಯಿಸುತ್ತಿದ್ದ ತನ್ನ ಪತಿಗೆ ಅತ್ಯಾಚಾರಕ್ಕೆ ಒಳಗಾದ ಪತ್ನಿ ಘಟನೆಯನ್ನು ವಿವರಿಸಿದ್ದಾರೆ. ಇದನ್ನು ಪ್ರಶ್ನಿಸಿದ ಆಕೆಯ ಪತಿಯನ್ನು ಇಬ್ಬರು ಆರೋಪಿಗಳು ಹಿಗ್ಗಾಮಗ್ಗಾ ಥಳಿಸಿದ್ದಾರೆ. ಈ ಅತ್ಯಾಚಾರ ಪ್ರಕರಣದ ತನಿಖೆ ನಡೆಸಿದ ರಾಮದುರ್ಗ ಪೊಲೀಸರು ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಬೆಳಗಾವಿ 8ನೇ ಅಪರ ಹಾಗೂ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ವಿ.ಬಿ.ಸೂರ್ಯವಂಶಿ ಅವರು, ಎಲ್ಲ ಸಾಕ್ಷಾಧಾರಗಳ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳು ದೋಷಿ ಎಂದು ತೀರ್ಪು ನೀಡಿದ್ದಾರೆ. ಕಕ್ಷಿದಾರರ ಪರವಾಗಿ ಸರ್ಕಾರಿ ಅಭಿಯೋಜಕ ಕಿರಣ ಪಾಟೀಲ ವಕಾಲತ್ತು ವಹಿಸಿ, ವಾದ ಮಂಡಿಸಿದ್ದರು. ಆರೋಪಿಗಳನ್ನು ಹಿಂಡಲಗಾ ಜೈಲಿಗೆ ರವಾನಿಸಲಾಗಿದೆ.