ಬೆಂಗಳೂರು: ಕರ್ನಾಟಕದ ವಿವಿಧ ರೈಲು ನಿಲ್ದಾಣಗಳಲ್ಲಿ ಪ್ರತಿ 2 ದಿನಕ್ಕೆ ಸರಾಸರಿ 3 ಅನಾಥ ಮಕ್ಕಳು ಪತ್ತೆಯಾಗುತ್ತಿದ್ದಾರೆ. ಇದರಲ್ಲಿ ಆಂಧ್ರಪ್ರದೇಶ, ತಮಿಳುನಾಡು, ಕೋಲ್ಕತ, ಮುಂಬೈ, ಉತ್ತರ ಪ್ರದೇಶದಿಂದ ಮನೆ ತೊರೆದು ಬರುವ ಮಕ್ಕಳ ಸಂಖ್ಯೆಯೇ ಜಾಸ್ತಿ ಎಂಬುದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ರೈಲ್ವೆ ಭದ್ರತಾ ಪಡೆ (ಆರ್ಪಿಎಫ್) ಪೊಲೀಸರು ‘ಆಪರೇಷನ್ ನನ್ಹೇ ಫರಿಸ್ತೇ’ ಕಾರ್ಯಾಚರಣೆಯಲ್ಲಿ 3 ವರ್ಷಗಳಲ್ಲಿ 1,307 ಮಕ್ಕಳನ್ನು ರಕ್ಷಿಸಿದ್ದಾರೆ. ಶಾಲೆಗೆ ಹೋಗಲು ಪಾಲಕರು ಒತ್ತಡ ಹಾಕುವುದನ್ನು ತಾಳಲಾರದೆ ದೇಶದ ವಿವಿಧೆಡೆಯಿಂದ ಅಪ್ರಾಪ್ತರು ರಾಜ್ಯ ರಾಜಧಾನಿ ಕಡೆ ಮುಖ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ರಾಜ್ಯದ ವಿವಿಧ ರೈಲು ನಿಲ್ದಾಣಗಳಲ್ಲಿ ಎರಡು ದಿನಕ್ಕೆ ಸರಾಸರಿ ಮೂವರು ಮಕ್ಕಳು ಆರ್ಪಿಎಫ್ ಸಿಬ್ಬಂದಿ ಕೈಗೆ ಸಿಕ್ಕಿ ಬೀಳುತ್ತಿದ್ದಾರೆ.
ಪೇಚಿನಿಂದ ಪಾರು ಮಾಡುವ ಕಾರ್ಯಾಚರಣೆ: ಮನೆ ಬಿಟ್ಟು ಬಂದು ನಡು ದಾರಿಯಲ್ಲಿ ಭಾಷೆ ತಿಳಿಯದೆ, ಊಟ ತಿಂಡಿ ಇಲ್ಲದೆ ಪೇಚಿಗೆ ಸಿಲುಕುವ ಮಕ್ಕಳನ್ನು ರಕ್ಷಿಸುವಲ್ಲಿ ‘ಆಪರೇಷನ್ ನನ್ಹೇ ಫರಿಸ್ತೇ’ ಯಶಸ್ವಿಯಾಗಿದೆ. ಈ ಕಾರ್ಯಾಚರಣೆಯ ಮೂಲಕ 2017ರಿಂದ ಇದುವರೆಗೆ 1,307 ಅಪ್ರಾಪ್ತರನ್ನು ರಕ್ಷಿಸಿ ಮತ್ತೆ ಪಾಲಕರ ಮಡಿಲಿಗೆ ಸೇರಿಸಲಾಗಿದೆ. 2019ರಲ್ಲಿ 397 ಮಕ್ಕಳನ್ನು ರಕ್ಷಿಸಿರುವುದಾಗಿ ಆರ್ಪಿಎಫ್ನ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೊಡೆತ ತಾಳಲಾರದೆ ಮನೆಬಿಟ್ಟ!: ಕಲಿಕೆಯಲ್ಲಿ ಸದಾ ಹಿಂದಿದ್ದ ಉತ್ತರ ಕರ್ನಾಟಕ ಮೂಲದ 13 ವರ್ಷದ ಬಾಲಕನಿಗೆ ಪಾಲಕರು ಪ್ರತಿನಿತ್ಯ ಹೊಡೆದು ಓದುವಂತೆ ಒತ್ತಾಯಿಸುತ್ತಿದ್ದರು. ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಬಾಲಕ ತನ್ನೂರಿನಿಂದ ರೈಲಿನಲ್ಲಿ ಬೆಂಗಳೂರಿಗೆ ಬಂದಿದ್ದ. ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಆತ ತಿರುಗಾಡುತ್ತಿದ್ದದ್ದನ್ನು ಗಮನಿಸಿದ ಆರ್ಪಿಎಫ್ ಸಿಬ್ಬಂದಿ ಬಾಲಕನನ್ನು ರಕ್ಷಿಸಿದರು. ಬಳಿಕ ಆತನ ಬಳಿ ಮಾಹಿತಿ ತೆಗೆದು, ಆತನ ಪಾಲಕರನ್ನು ಪತ್ತೆ ಮಾಡಿ ಅವರ ವಶಕ್ಕೆ ಒಪ್ಪಿಸಿದರು.
ಬಾಸ್ಕೋ ವಶದಲ್ಲಿ ಮಕ್ಕಳು
‘ಆಪರೇಷನ್ ನನ್ಹೇ ಫರಿಸ್ತೇ’ ಕಾರ್ಯಾಚರಣೆಯಲ್ಲಿ ರಕ್ಷಿಸಲ್ಪಟ್ಟ ಮಕ್ಕಳನ್ನು ಆರ್ಪಿಎಫ್ ಸಿಬ್ಬಂದಿ ಕಾನೂನು ಪ್ರಕ್ರಿಯೆ ಮೂಲಕ ಡಾನ್ ಬಾಸ್ಕೋ ಎನ್ಜಿಓ ಸಂಸ್ಥೆಯ ಸುಪರ್ದಿಗೆ ಒಪ್ಪಿಸುತ್ತಾರೆ. ನಾವು ಮಕ್ಕಳಿಗೆ ಮೂಲಸೌಕರ್ಯಗಳನ್ನು ಒದಗಿಸುತ್ತೇವೆ. ನಂತರ ಪಾಲಕರು ಹಾಗೂ ಮಕ್ಕಳಿಗೆ ಕೌನ್ಸೆಲಿಂಗ್ ಮಾಡಿ, ಕಾನೂನು ಪ್ರಕ್ರಿಯೆ ಮೂಲಕವೇ ಮಕ್ಕಳನ್ನು ಪಾಲಕರ ವಶಕ್ಕೆ ಒಪ್ಪಿಸುತ್ತೇವೆ ಎಂದು ಡಾನ್ ಬಾಸ್ಕೋ ಎನ್ಜಿಓ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಫಾದರ್ ಮ್ಯಾಥ್ಯೂ ವಿಜಯವಾಣಿಗೆ ತಿಳಿಸಿದ್ದಾರೆ. ಪಾಲಕರು ಮಕ್ಕಳನ್ನು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ದಾಖಲಿಸಿರುತ್ತಾರೆ. ಅವರ ಒತ್ತಡಕ್ಕೆ ಮಣಿದು ಮಕ್ಕಳು ಶಾಲೆಗೆ ಹೋಗುತ್ತಿರುತ್ತಾರೆ. ಅದರೆ ಅದೊಂದು ದಿನ ಒತ್ತಡ ಹೆಚ್ಚಾಗುತ್ತಲೇ ಬೇರೆ ದಾರಿ ಕಾಣದೆ ತಮ್ಮೂರಿನ ರೈಲು ನಿಲ್ದಾಣಕ್ಕೆ ಬಂದು ನಿಂತಿರುವ ರೈಲು ಹತ್ತಿ ಮನೆಯಿಂದ ದೂರಾಗುತ್ತಾರೆ. ಆರ್ಪಿಎಫ್ ಸಿಬ್ಬಂದಿ ರಕ್ಷಿಸಿರುವ ಶೇ.80 ಮಕ್ಕಳು ಈ ಕಾರಣ ಕ್ಕಾಗಿಯೇ ಮನೆ ಬಿಟ್ಟು ಬಂದಿರುವುದು ಸಮೀಕ್ಷೆ ಯಲ್ಲಿ ಗೊತ್ತಾಗಿದೆ. ಇದರಲ್ಲಿ ಶೇ.60 ಪ್ರಕರಣ ಗಳು ಬೆಳಕಿಗೆ ಬರುವುದಿಲ್ಲ ಎಂದು ಆರ್ಪಿಎಫ್ನ ಸಿಬ್ಬಂದಿಯೊಬ್ಬರು ವಿಜಯವಾಣಿಗೆ ತಿಳಿಸಿದ್ದಾರೆ.
ಪ್ರಮುಖ ಕಾರಣ
- ಪಾಲಕರು, ಸಂಬಂಧಿಕರು ಹಾಗೂ ಶಾಲೆಯಲ್ಲಿ ಇತರ ಮಕ್ಕಳ ಕಿರುಕುಳ
- ಆಸಕ್ತಿ ಇಲ್ಲದ ವಿಷಯ ಕಲಿಯುವಂತೆ ಒತ್ತಡ ಹೇರುವುದು
- ಓದಿನಲ್ಲಿ ಆಸಕ್ತಿಯಿಲ್ಲದೇ ಕಲಿಕೆಯಲ್ಲಿ ಹಿಂದೆಬೀಳುವುದು
- ಪಾಲಕರ ಗದರಿಕೆಯಿಂದ ಬೇಸರ
- ಸದಾ ನಕಾರಾತ್ಮಕ ಚಿಂತನೆ, ಕೀಳರಿಮೆ
- 13 ರಿಂದ 15 ವರ್ಷ ಮೇಲ್ಪಟ್ಟ ಮಕ್ಕಳು ಮನೆಬಿಟ್ಟು ಬರುವ ಪ್ರಕರಣ ಹೆಚ್ಚು
ಮಕ್ಕಳ ಮನಸ್ಸು ಬಹಳ ಸೂಕ್ಷ್ಮವಾಗಿರುತ್ತದೆ. ಇದನ್ನು ಅರಿತುಕೊಂಡು ಪಾಲಕರು ತಮ್ಮ ಮಕ್ಕಳಿಗೆ ಬುದ್ಧಿಮಾತು ಹೇಳಬೇಕು. ಅನಗತ್ಯವಾಗಿ ಮಕ್ಕಳ ಮೇಲೆ ಹೆಚ್ಚಿನ ಒತ್ತಡ ಹೇರಬಾರದು.
| ಫಾದರ್ ವರ್ಗೀಸ್ ರೈಲ್ವೆ ಚೈಲ್ಡ್ ಲೈನ್ ಪ್ರಾಜೆಕ್ಟ್ ನಿರ್ದೇಶಕ
ಮುಂಬೈನಿಂದ ಬಂದು ಕಂಗಾಲಾದರು
ಬೆಂಗಳೂರಿನ ಕೆಎಸ್ಆರ್ ರೈಲು ನಿಲ್ದಾಣದಲ್ಲಿ ಇತ್ತೀಚೆಗೆ 14-15 ವರ್ಷದ ಇಬ್ಬರು ಬಾಲಕರು ಎತ್ತಕಡೆ ಹೋಗಬೇಕೆಂಬುದು ತೋಚದೇ ಅಳುತ್ತಾ ನಿಂತಿದ್ದರು. ರೈಲ್ವೆ ನಿಲ್ದಾಣದಲ್ಲಿದ್ದವರು ವಿಚಾರಿಸಿದಾಗ ಬಾಲಕರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದರು. ವಿಷಯ ತಿಳಿದ ಆರ್ಪಿಎಫ್ ಸಿಬ್ಬಂದಿ ಸ್ಥಳಕ್ಕೆ ಬಂದು ಬಾಲಕರನ್ನು ತಮ್ಮೊಂದಿಗೆ ಕರೆದೊಯ್ದರು. ಊಟ ಕೊಡಿಸಿ, ಪೂರ್ವಾಪರ ವಿಚಾರಿಸಿದಾಗ ಮುಂಬೈನಿಂದ ಓಡಿ ಬಂದ ಸಂಗತಿ ಗೊತ್ತಾಗಿತ್ತು. ಪಾಲಕರು ಸದಾ ಓದುವಂತೆ ಒತ್ತಡ ಹಾಕುತ್ತಿದ್ದರು. ಕಲಿಕೆಯಲ್ಲಿ ಹಿಂದುಳಿದಿದ್ದರಿಂದ ಶಾಲೆಯಲ್ಲೂ ಶಿಕ್ಷಕರು ಹೀಯಾಳಿಸುತ್ತಿದ್ದರು. ಇದರಿಂದ ನೊಂದು ಮುಂಬೈ ರೈಲು ನಿಲ್ದಾಣದಿಂದ ಸಿಕ್ಕಿದ ರೈಲಿಗೆ ಹತ್ತಿ ಬೆಂಗಳೂರಿಗೆ ಬಂದಿದ್ದಾಗಿ ಬಾಲಕರು ತಿಳಿಸಿದ್ದರು. ಕೂಡಲೇ ಇವರ ಪಾಲಕರನ್ನು ಸಂರ್ಪ ಸಿದ ಆರ್ಪಿಎಫ್ ಮತ್ತು ಡಾನ್ ಬಾಸ್ಕೋ ಸಂಸ್ಥೆ ಸಿಬ್ಬಂದಿ, ಇಬ್ಬರು ಬಾಲಕರನ್ನು ಪಾಲಕರ ವಶಕ್ಕೆ ಒಪ್ಪಿಸಿದರು.
| ಅವಿನಾಶ ಮೂಡಂಬಿಕಾನ