More

    ಪ್ರತ್ಯೇಕ ಅಪಘಾತ ಇಬ್ಬರು ಸಾವು, ಓರ್ವನಿಗೆ ಗಾಯ

    ಬೆಂಗಳೂರು: ಎರಡು ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವ ಪ್ರಕರಣ ನಡೆದಿದೆ.
    ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ದ್ವಿಚಕ್ರ ವಾಹನ ಸವಾರನ ಮೇಲೆ ಬುಲೆಟ್ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ದೇಹದ ಮೇಲೆ ಚಕ್ರ ಹರಿದ ಪರಿಣಾಮ ಆಕ್ಟೀವಾ ಹೋಂಡಾ ಸವಾರ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವ ಪ್ರಕರಣ ವಿದ್ಯಾರಣ್ಯಪುರದಲ್ಲಿ ನಡೆದಿದೆ.
    ಬಳ್ಳಾರಿ ಮೂಲದ ಚಂದ್ರಪ್ಪ ಮೇಟಿ(೩೭) ಮೃತ ಸವಾರ. ಸೋಮವಾರ ಬೆಳಗ್ಗೆ ೮.೨೦ರ ಸುಮಾರಿಗೆ ವಿದ್ಯಾರಣ್ಯಪುರ ಮುಖ್ಯರಸ್ತೆಯ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್ ಬಳಿ ಈ ಅಪಘಾತ ಸಂಭವಿಸಿದೆ.


    ಮೃತ ಸವಾರ ಚಂದ್ರಪ್ಪ ಕೋರಮಂಗಲದ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದರು. ವೀರಸಾಗರದಲ್ಲಿ ಕುಟುಂಬದೊಂದಿಗೆ ನೆಲೆಸಿದ್ದರು. ಬೆಳಗ್ಗೆ ಎಂದಿನಂತೆ ತಮ್ಮ ಹೋಂಡಾ ಆಕ್ಟೀವಾ ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ತೆರಳುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಇದೇ ಸಮಯಕ್ಕೆ ಎದುರಿನಿಂದ ವೇಗವಾಗಿ ಬರುತ್ತಿದ್ದ ಬುಲೆಟ್ ದ್ವಿಚಕ್ರ ವಾಹನ ಚಂದ್ರಪ್ಪಗೆ ಡಿಕ್ಕಿ ಹೊಡೆದು ಚಕ್ರ ದೇಹದ ಮೇಲೆ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಅಪಘಾತದ ಬಳಿಕ ಬುಲೆಟ್ ಸವಾರ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನಾ ಸ್ಥಳ ಹಾಗೂ ಸುತ್ತಮುತ್ತಲ ಕಟ್ಟಡಗಳ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ಬುಲೆಟ್ ಸವಾರನ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


    ಸವಾರ ಸಾವು-ಹಿಂಬದಿ ಸವಾರಿಗೆ ಗಾಯ:
    ಮತ್ತೊಂದು ಪ್ರಕರಣದಲ್ಲಿ ಅತಿವೇಗವಾಗಿ ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ ಬಲಭಾಗದಲ್ಲಿ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಸವಾರ ಮೃತಪಟ್ಟು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶೇಷಾದ್ರಿಪುರದಲ್ಲಿ ನಡೆದಿದೆ.
    ವೈಯಾಲಿಕಾವಲ್‌ನ ಮುನೇಶ್ವರ ಬ್ಲಾಕ್ ನಿವಾಸಿಗಳಾದ ವಿನಯ್(೧೭) ಮೃತ ಸವಾರ. ೧೭ ವರ್ಷದ ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಭಾನುವಾರ ಮಧ್ಯರಾತ್ರಿ ೧ ಗಂಟೆ ಸುಮಾರಿಗೆ ಶೇಷಾದ್ರಿಪುರ ಶಿರೂರು ಪಾರ್ಕ್ ರಸ್ತೆಯಲ್ಲಿ ಮಂತ್ರಿಮಾಲ್‌ನ ಜೈಭೀಮನಗರ ಕಡೆಯಿಂದ ಶ್ರೇಷಾದ್ರಿಪುರ ೨ನೇ ಮುಖ್ಯರಸ್ತೆ ಕಡೆಗೆ ದ್ವಿಚಕ್ರ ವಾಹನ ಚಾಲನೆ ಮಾಡಿಕೂಂಡು ಹೋಗುವಾಗ ಮಾರ್ಗದ ಶ್ರೀಸಾಗರ್ ಹೋಟೆಲ್ ಬಳಿ ಈ ಅಪಘಾತ ಸಂಭವಿಸಿದೆ. ಮೃತ ಸವಾರ ವಿನಯ್ ಮತ್ತು ಗಾಯಾಳು ಹಿಂಬದಿ ಸವಾರ ಸಣ್ಣಪುಟ್ಟ ವ್ಯಾಪಾರ ಮಾಡುತ್ತಿದ್ದರು.


    ಇಬ್ಬರು ಹೆಲ್ಮೆಟ್ ಧರಿಸಿರಲಿಲ್ಲ:
    ಭಾನುವಾರ ರಾತ್ರಿ ತಮ್ಮ ಏರಿಯಾದಲ್ಲಿ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ದ್ವಿಚಕ್ರ ವಾಹನದಲ್ಲಿ ಶೇಷಾದ್ರಿಪುರ ಕಡೆಗೆ ಬರುತ್ತಿದ್ದರು. ಈ ವೇಳೆ ವೇಗವಾಗಿ ದ್ವಿಚಕ್ರ ವಾಹನ ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿ ತಮ್ಮ ಬಲಭಾಗದಲ್ಲಿ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಸವಾರರಿಬ್ಬರು ರಸ್ತೆಗೆ ಬಿದ್ದಿದ್ದಾರೆ. ಹೆಲ್ಮೆಟ್ ಧರಿಸದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಹಾಗೂ ಪೊಲೀಸರು ಇಬ್ಬರು ಗಾಯಾಳುಗಳನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಸಾಗಿಸಿದ್ದಾರೆ. ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿದ್ದ ಪರಿಣಾಮ ಸವಾರ ವಿನಯ್ ಚಿಕಿತ್ಸೆ ಫಲಿಸದೆ ಮುಂಜಾನೆ ೪.೩೦ರ ಸುಮಾರಿಗೆ ಮೃತಪಟ್ಟಿದ್ದಾನೆ. ಹಿಂಬದಿ ಸವಾರನಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಈ ಸಂಬಂಧ ಹೈಗ್ರೌಂಡ್ಸ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರಾಜ್ಯೋತ್ಸವ ರಸಪ್ರಶ್ನೆ - 23

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts