ಔರಾದ್: ಬರ್ತ್ಡೇ ಪಾರ್ಟಿ ತಂದ ಆಪತ್ತಿಗೆ ಇಬ್ಬರು ಗೆಳೆಯರು ಬಲಿಯಾದರೆ, ಇಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಶನಿವಾರ ರಾತ್ರಿ ಬರ್ತ್ಡೇ ಪಾರ್ಟಿ ಮಾಡಿದ ನಂತರ ಒಂದೇ ಬೈಕ್‌ನಲ್ಲಿ ನಾಲ್ವರು ಗೆಳೆಯರು ಸ್ವಗ್ರಾಮಕ್ಕೆ ಬರುವಾಗ ಜಂಬಗಿ ಹತ್ತಿರದ ದಿಗಂಬರ ಡೇರಿ ಫಾರ್ಮ್ ಕ್ರಾಸ್ ಬಳಿ ಗಿಡಕ್ಕೆ ಡಿಕ್ಕಿ ಹೊಡೆದಿದ್ದಾರೆ. ಬೇಲೂರ(ಎನ್) ಗ್ರಾಮದ ಬರ್ತ್ಡೇ ಬಾಯ್ ಹಣಮಂತ ತೇಗಂಪುರೆ (೨೦) ಹಾಗೂ ಗಣೇಶ ಎಕ್ಕೆಳ್ಳೆ (೨೦) ಸ್ಥಳದಲ್ಲೇ ಮೃತಪಟ್ಟಿದ್ದು, ವಿಷ್ಣು ಕೊಳೇಕರ (೨೦) ಮತ್ತು ಆಲೂರ(ಕೆ) ಗ್ರಾಮದ ಪ್ರಜ್ವಲ್ ಮೇತ್ರೆ (೧೯) ತಲೆಗೆ ಬಲವಾದ ಪೆಟ್ಟಾಗಿದ್ದು, ಬೀದರ್ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂವರು ಗೆಳೆಯರು ಸೇರಿ ಹಣಮಂತನ ಜನ್ಮದಿನ ಆಚರಿಸಲು ಸಮೀಪದ ಧಾಬಾಗೆ ಹೋಗಿದ್ದರು. ಅತಿ ವೇಗವಾಗಿ ದ್ವಿಚಕ್ರ ವಾಹನ ಚಲಾಯಿಸಿದ್ದೇ ಅವಘಡಕ್ಕೆ ಕಾರಣ ಎನ್ನಲಾಗಿದೆ.
ಸ್ಥಳಕ್ಕೆ ಹೆಚ್ಚುವರಿ ಎಸ್‌ಪಿ ಚಂದ್ರಕಾಂತ ಪೂಜಾರಿ, ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟಿ, ಸಿಪಿಐ ರಘುವೀರಸಿಂಗ್ ಠಾಕೂರ್, ಪಿಎಸ್‌ಐ ನಂದಕುಮಾರ ಭೇಟಿ ನೀಡಿ ಪರಿಶೀಲಿಸಿದ್ದು, ಸಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.