ಆಂಧ್ರ ಕರಾವಳಿಗೆ ಅಪ್ಪಳಿಸಿದ ಪೆಥಾಯಿ ಚಂಡಮಾರುತ: ಇಬ್ಬರ ಸಾವು

ಅಮರಾವತಿ: ಬಂಗಾಳ ಕೊಲ್ಲಿಯಲ್ಲಿ ಎದ್ದಿದ್ದ ಪೆಥಾಯಿ ಚಂಡಮಾರುತ ಸೋಮವಾರ ಮಧ್ಯಾಹ್ನ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲೆಗೆ ಅಪ್ಪಳಿಸಿದ್ದು, ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಮಳೆಯಿಂದ ಸಂಭವಿಸಿದ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಚಂಡಮಾರುತದಿಂದಾಗಿ ವಿಜಯವಾಡ ನಗರದಲ್ಲಿ ಭಾರಿ ಮಳೆಯಾಗುತ್ತಿದ್ದು, ಕೆಲವಡೆ ಭೂಕುಸಿತ ಉಂಟಾಗಿದೆ. ಇದುವರೆಗೆ ಇಬ್ಬರು ಮೃತಪಟ್ಟಿರುವ ವರದಿ ಬಂದಿದೆ. ಇದನ್ನು ಹೊರತುಪಡಿಸಿದರೆ ರಾಜ್ಯದ ಮತ್ತಾವುದೇ ಭಾಗದಿಂದ ಪ್ರಾಣಹಾನಿ ಸಂಭವಿಸಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ರಾಜ್ಯ ವಿಪತ್ತ ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

ಪೆಥಾಯಿ ಚಂಡಮಾರುತದಿಂದಾಗಿ ಹೆಚ್ಚಿನ ಹಾನಿಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದ ಸರ್ಕಾರ, ಕರಾವಳಿ ಜಿಲ್ಲೆಗಳಲ್ಲಿ ಶಾಲಾಕಾಲೇಜುಗಳಿಗೆ ರಜೆ ಘೋಷಿಸಿತ್ತು. ದಕ್ಷಿಣ ಮಧ್ಯ ರೈಲ್ವೆ ವಿಭಾಗ ಬಹುತೇಕ ರೈಲುಗಳ ಸಂಚಾರವನ್ನು ರದ್ದುಗೊಳಿಸಿತ್ತು. ಅಂತೆಯೇ ಬಂದರು ನಗರಿ ವಿಶಾಖಪಟ್ಟಣದಲ್ಲಿ ವಿಮಾನ ಸಂಚಾರವನ್ನು ಸಂಪೂರ್ಣ ರದ್ದುಗೊಳಿಸಲಾಗಿತ್ತು. ಜತೆಗೆ ಮುನ್ನೆಚ್ಚರಿಕೆ ಕ್ರಮವಾಗಿ 20 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿತ್ತು. (ಏಜೆನ್ಸೀಸ್​)