ರಾಜಕೀಯ ಲೆಕ್ಕಕ್ಕೆ ಸಿಗದ ಅತೃಪ್ತರು: ಮುಂದೇನಾಗುತ್ತೆ ನೋಡ್ತಾ ಇರಿ ಎಂದು ಸಸ್ಪೆನ್ಸ್ ಬಾಕಿ ಇಟ್ಟ ಜಾರಕಿಹೊಳಿ

ಬೆಂಗಳೂರು: ಮರಳಿ ಯತ್ನವ ಮಾಡು, ಮರಳಿ ಯತ್ನವ ಮಾಡು ಎಂಬಂತೆ ಪರ್ಯಾಯ ಸರ್ಕಾರ ರಚನೆ ಪ್ರಯತ್ನ ಗುಟ್ಟಾಗಿ ನಡೆದಿರುವಾಗಲೇ ಮೂರೂ ಪ್ರಮುಖ ರಾಜಕೀಯ ಪಕ್ಷಗಳು ಮುಂದೇನಾಗಬಹುದೆಂಬ ವಿಚಾರದಲ್ಲಿ ಮಾತ್ರ ಕತ್ತಲಲ್ಲೇ ಉಳಿದಿವೆ.

ಕಾಂಗ್ರೆಸ್​ನ ಇಬ್ಬರು ಪ್ರಭಾವಿ ಶಾಸಕರ ರಾಜೀನಾಮೆ ಹೊರತಾಗಿ ಇನ್ನೆಷ್ಟು ಶಾಸಕರು ರಾಜೀನಾಮೆ ಸನ್ನಿಯೊಳಗೆ ಸಿಲುಕುತ್ತಾರೆಂಬ ವಿಚಾರ ಗುಟ್ಟಾಗಿದೆ. ಈ ನಡುವೆ, ‘ಮುಂದೇನಾಗುತ್ತದೆ ನೋಡುತ್ತಿರಿ, ಪ್ಲಾ್ಯನ್ ಏನೆಂದು ಈಗಲೇ ಹೇಳಲು ಆಗುತ್ತಾ?’ ಎಂದು ಸ್ಪೀಕರ್​ಗೆ ರಾಜೀನಾಮೆ ಪತ್ರ ಫ್ಯಾಕ್ಸ್ ಮಾಡಿ ದೆಹಲಿ ವಿಮಾನ ಹತ್ತುವ ಮುನ್ನ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಆ ಮೂಲಕ ರಾಜೀನಾಮೆ ಪ್ರಹಸನದ ಸಸ್ಪೆನ್ಸ್ ಕಾಯ್ದಿರಿಸುವ ಪ್ರಯತ್ನ ಮಾಡಿದ್ದಾರೆ. ಈ ಮಾತಿಗೆ ವ್ಯತಿರಿಕ್ತವಾಗಿ ಶಾಸಕ ಆನಂದ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ನಾವು ಗುಂಪುಗಾರಿಕೆ ಮಾಡುತ್ತಿಲ್ಲ, ನಮ್ಮೊಂದಿಗೆ ಯಾರೂ ಇಲ್ಲ ಎಂದಿದ್ದಾರೆ. ಆದರೆ, ಜಿಂದಾಲ್ ವಿಚಾರವಾಗಿ ರಾಜೀನಾಮೆ ಕೊಟ್ಟು ಇವರು ಸಾಧಿಸುವುದಾದರೂ ಏನನ್ನು ಎಂಬ ಪ್ರಶ್ನೆ ಇದೆ. ಈ ಬೆಳವಣಿಗೆ ನಡುವೆ ಶಾಸಕರಾದ ಭೀಮಾ ನಾಯ್್ಕ ಪ್ರತಾಪ್​ಗೌಡ ಪಾಟೀಲ್, ಅಮರೇಗೌಡ ಬಯ್ಯಾಪುರ ಅವರನ್ನು ಕಾಂಗ್ರೆಸ್ ನಾಯಕರು ಬೆಂಗಳೂರಿಗೆ ಕರೆಸಿ ಮಾತನಾಡಿದ್ದಾರೆ. ಭೀಮಾ ನಾಯ್್ಕ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ‘ಪಕ್ಷ ಬಿಡುವುದಿಲ್ಲ’ ಎಂಬುದನ್ನು ಖಾತ್ರಿಪಡಿಸಿದ್ದಾರೆ.

ಕಾಂಗ್ರೆಸ್ ನಾಯಕರೆಲ್ಲ ಸಿದ್ದರಾಮಯ್ಯ ಮನೆಯಲ್ಲಿ ಸಭೆ ನಡೆಸಿದ ಬಳಿಕ ನಿರುಮ್ಮಳರಾಗೇನು ಕಾಣಿಸಲಿಲ್ಲ. ಕೆಲ ಶಾಸಕರು ಸಂಪರ್ಕಕ್ಕೆ ಸಿಕ್ಕಿಲ್ಲ ಎಂಬ ಅಳುಕು ಅವರನ್ನು ಅಪ್ಪಿಕೊಂಡಿದ್ದು ಕಾಣಿಸಿತ್ತು. ಆದರೂ ಸಾವರಿಸಿಕೊಂಡು ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ‘ನಮ್ಮ ಪಕ್ಷದಲ್ಲಿ ಅತೃಪ್ತ ಶಾಸಕರು ಎಂಬುವವರೇ ಇಲ್ಲ. ನೀವೇ ಕೆಲವರನ್ನು ಸೃಷ್ಟಿಸಿ ಗೊಂದಲ ಉಂಟು ಮಾಡುತ್ತಿದ್ದೀರಿ’ ಎಂದು ಮಾಧ್ಯಮಗಳ ಮೇಲೆ ಹರಿಹಾಯ್ದರು. ಇಬ್ಬರು ಶಾಸಕರು ರಾಜೀನಾಮೆ ಕೊಟ್ಟ ಮಾತ್ರಕ್ಕೆ ಸರ್ಕಾರ ಬೀಳುವುದಿಲ್ಲ. ಹಾಗೆಂದು ಅತೃಪ್ತರು ಎಂದು ಗುರುತಿಸಿಕೊಂಡಿರುವವರನ್ನು ಸಮಾಧಾನಪಡಿಸಲು ಯತ್ನಿಸುವುದೂ ಇಲ್ಲ. ಅವರವರ ನಿರ್ಧಾರ ಕೈಗೊಳ್ಳಲು ಅವರು ಅರ್ಹರಿದ್ದಾರೆ ಎಂದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರು, ‘ಇದು ಆರಂಭ, ಇನ್ನು 4 ದಿನಗಳಲ್ಲಿ ಏನು ಬೇಕಾದರೂ ಆಗಬಹುದು’ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಅಳುಕಿಟ್ಟುಕೊಂಡ ಆತ್ಮವಿಶ್ವಾಸದ ಮಾತಿಗೆ ತದ್ವಿರುದ್ಧವಾಗಿ ಖಚಿತತೆ ಇಲ್ಲದೆ ನಿಷ್ಠುರ ಹೇಳಿಕೆ ಬಿಜೆಪಿ ಕಡೆಯಿಂದ ಬರುತ್ತಿದೆ.

ಅಧಿವೇಶನದ ಮೇಲೆ ಕರಿನೆರಳು

ಕಾಂಗ್ರೆಸ್ ಶಾಸಕರಿಬ್ಬರ ರಾಜೀನಾಮೆ ಪ್ರಹಸನ ಜು.12ರಿಂದ ಆರಂಭವಾಗುವ ವಿಧಾನಸಭೆ ಅಧಿವೇಶನದ ಮೇಲೆ ಪರಿಣಾಮ ಬೀರಲಿದೆ. ಇಬ್ಬರು ಅಧಿಕೃತವಾಗಿ ರಾಜೀನಾಮೆ ನೀಡಿದರೂ, ನೀಡದೆ ಇದ್ದರೂ ಸರ್ಕಾರದ ಇಮೇಜ್​ಗಂತೂ ಧಕ್ಕೆಯೇ. ಈ ವಿಷಯ ಇಟ್ಟುಕೊಂಡು ಪ್ರತಿಪಕ್ಷವನ್ನು ಎದುರಿಸುವುದು ಆಡಳಿತ ಪಕ್ಷಕ್ಕೆ ಸವಾಲಾಗಿದೆ.

ಸ್ಪೀಕರ್ ರಮೇಶ್​ಕುಮಾರ್ ಕೈಯಲ್ಲಿ ಭವಿಷ್ಯ

ಆನಂದ್, ರಮೇಶ್ ರಾಜೀನಾಮೆ ಪತ್ರವನ್ನು ಸ್ಪೀಕರ್​ಗೆ ಕಳುಹಿಸಿಕೊಟ್ಟಿದ್ದಾರೆ ವಿನಾ ನೇರವಾಗಿ ನೀಡಿಲ್ಲ. ನಿಯಮಗಳ ಪ್ರಕಾರ ಖುದ್ದು ಸ್ಪೀಕರ್​ಗೆ ಸಲ್ಲಿಸಬೇಕು. ಒಂದು ವೇಳೆ ಶಾಸಕರು ರಾಜೀನಾಮೆಗೆ ನೀಡಿದ ಕಾರಣ ಸಮ್ಮತವಲ್ಲವೆನಿಸಿದರೆ ಸ್ಪೀಕರ್ ತಕ್ಷಣಕ್ಕೆ ಅಂಗೀಕರಿಸದೇ ಇರಬಹುದು. ಹೀಗಾಗಿ ರಾಜೀನಾಮೆ ಘೋಷಣೆ ಕೇವಲ ಪ್ರಹಸನವಷ್ಟೆ. ಅವರಿಬ್ಬರೂ ಸ್ಪೀಕರ್ ಮುಂದೆ ಹಾಜರಾಗದ ಹೊರತು ಸರ್ಕಾರದ ಬಲ ಕಡಿಮೆಯಾಗದು.

ಬೇಡಿಕೆ ಈಡೇರಿಕೆಗೆ ಚರ್ಚೆ

ಬೆಂಗಳೂರು: ಜಿಂದಾಲ್​ಗೆ ಹಸ್ತಾಂತರ ಮಾಡಲಿರುವ ಭೂಮಿ ಮಧ್ಯದಲ್ಲಿ ಸಿಕ್ಕಿಕೊಂಡಿರುವ ತಮ್ಮ ಆಪ್ತರ ಭೂಮಿ ಬಿಟ್ಟುಕೊಡಬೇಕೆಂಬ ಶಾಸಕ ಆನಂದ ಸಿಂಗ್ ಬೇಡಿಕೆ ಈಡೇರಿಸುವ ಬಗ್ಗೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ರಾಜ್ಯ ಕಾಂಗ್ರೆಸ್ ಮುಖಂಡರು ಚರ್ಚೆ ನಡೆಸಿದ್ದಾರೆ. ಆನಂದಸಿಂಗ್ ರಾಜೀನಾಮೆ ಕುರಿತಂತೆ ಅಮೆರಿಕ ಪ್ರವಾಸದಲ್ಲಿರುವ ಸಿಎಂ ದೂರವಾಣಿ ಮೂಲಕ ಕಾಂಗ್ರೆಸ್ ಮುಖಂಡರಾದ ವೇಣುಗೋಪಾಲ್, ಸಿದ್ದರಾಮಯ್ಯ, ಡಾ.ಜಿ. ಪರಮೇಶ್ವರ್ ಹಾಗೂ ಡಿ.ಕೆ. ಶಿವಕುಮಾರ್ ಜತೆ ಚರ್ಚೆ ನಡೆಸಿದ್ದಾರೆ. ಆನಂದ್ ಸಿಂಗ್ ರಾಜೀನಾಮೆಗೂ ಬಿಜೆಪಿಯ ಆಪರೇಷನ್ ಕಮಲಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುವುದು ಸಿಎಂ ಆಪ್ತಮೂಲಗಳ ಸ್ಪಷ್ಟ ಅಭಿಪ್ರಾಯ. ಅಮೆರಿಕ ಪ್ರವಾಸದಲ್ಲಿರುವ ಸಿಎಂ ನಿಗದಿತ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿಯೇ ವಾಪಸಾಗಲಿದ್ದಾರೆ ಎನ್ನಲಾಗಿದೆ.

************************************************************

ಕರಗುತ್ತಿದೆ ಬೆಳಗಾವಿ ಸೋದರರ ಪ್ರಾಬಲ್ಯ

| ರಾಯಣ್ಣ ಆರ್.ಸಿ. ಬೆಳಗಾವಿ

ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಡೆಸುತ್ತಿದ್ದ ‘ರಾಜಕೀಯ ಪ್ರಹಸನ ’ಅಂತ್ಯಗೊಂಡಿದೆ. ಕೊನೆಗೂ ಸೋಮವಾರ ವಿಧಾನಸಭೆ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದು, ಜಿಲ್ಲೆಯಲ್ಲಿ ಮತ್ತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ರಾಜಕೀಯ ಲಾಭಕ್ಕಾಗಿ ರಮೇಶ್ ಕಾಂಗ್ರೆಸ್​ಗೆ ಗುಡ್ ಬೈ ಹೇಳಿದ್ದಾರೆ.

ಈ ಮೊದಲು ಜಿಲ್ಲೆಯ ರಾಜಕಾರಣ ದಲ್ಲಿ ರಾಷ್ಟ್ರೀಯ ಪಕ್ಷಗಳ ವರ್ಚಸ್ಸಿಗಿಂತ ವೈಯಕ್ತಿಕ ವರ್ಚಸ್ಸಿನ ಮೇಲೆ ಚುನಾವಣೆಗಳು ನಡೆಯುತ್ತಿದ್ದವು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಬಿಜೆಪಿಗೆ ಭಾರಿ ಜನಪ್ರಿಯತೆ ತಂದುಕೊಟ್ಟಿದ್ದಾರೆ. ಈಗ ಹೊಂದಾಣಿಕೆ ರಾಜಕೀಯದ ಜತೆಗೆ ರಾಷ್ಟ್ರೀಯ ಪಕ್ಷ ಬಿಜೆಪಿ ಆಶೀರ್ವಾದವಿದ್ದರೆ ಮಾತ್ರ ಚುನಾವಣೆಯಲ್ಲಿ ಗೆಲ್ಲುವುದು ಸಾಧ್ಯ ಎಂಬುವುದನ್ನು ಜಿಲ್ಲೆಯ ಜನಪ್ರತಿಧಿಗಳು ಅರಿತಿದ್ದಾರೆ. ಮತ್ತೊಂದೆಡೆ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಜಿಲ್ಲಾ ರಾಜಕಾರಣದಲ್ಲಿದ್ದ ಹಿಡಿತವನ್ನು ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ರಾಜಕೀಯ ಪ್ರಾಬಲ್ಯ ಕುಸಿಯುತ್ತಿದೆ. ಮತ್ತೊಬ್ಬ ಸಹೋದರ ಲಖನ್ ಜಾರಕಿಹೊಳಿಯನ್ನು ರಾಜಕೀಯವಾಗಿ ಬೆಳೆಸುವುದಕ್ಕಾಗಿ ಜಾರಕಿಹೊಳಿ ಸಹೋದರರು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ.

ಹೆಚ್ಚುತ್ತಿರುವ ವಿರೋಧ: ಸ್ವಕ್ಷೇತ್ರ ಗೋಕಾಕ ನಗರದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ನಿರ್ವಣಗೊಂಡಿದ್ದರಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ 15 ಸಾವಿರ ಮತಗಳಿಂದ ಗೆದ್ದು ಬಂದಿದ್ದರು. ಯಮಕನಮರಡಿ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ ಕೂಡ ಕೇವಲ 2,800 ಮತಗಳಿಂದ ಜಯಿಸಿದ್ದರು. ಹಾಗಾಗಿ ಬಿಜೆಪಿ ಸೇರ್ಪಡೆ ಆಗದಿದ್ದರೆ, ತಮಗೆ ರಾಜಕೀಯವಾಗಿ ಉಳಿಗಾಲವಿಲ್ಲ ಎಂಬ ಆತಂಕ ಜಾರಕಿಹೊಳಿ ಸಹೋದರರನ್ನು ಕಾಡುತ್ತಿದೆ. ಅದಕ್ಕಾಗಿ ರಮೇಶ್ ಪಕ್ಷಕ್ಕೆ ಗುಡ್ ಬೈ ಹೇಳಿ, ಕಮಲ ಹಿಡಿಯುವುದು ಖಚಿತವಾಗಿದೆ.

ಕುಮಠಳ್ಳಿ ಗೈರು!: ಸೋಮವಾರ ನಗರಕ್ಕೆ ಆಗಮಿಸಿದ್ದ ಗೃಹಸಚಿವ ಎಂ.ಬಿ. ಪಾಟೀಲ್ ಕಾರ್ಯಕ್ರಮಕ್ಕೆ ಶಾಸಕ ಮಹೇಶ್ ಕುಮಠಳ್ಳಿ ಆಗಮಿಸಿರಲಿಲ್ಲ.

****************************************************************

ಬಿಜೆಪಿ ಮೌನ ತಂತ್ರ

| ವಿವೇಕ ಮಹಾಲೆ ಬೆಂಗಳೂರು

ರಾಜ್ಯ ರಾಜಕೀಯದಲ್ಲಿ ಸೋಮವಾರ ನಡೆದ ದಿಢೀರ್ ಬೆಳವಣಿಗೆಯಲ್ಲಿ ಕಾಂಗ್ರೆಸ್​ನ ಇಬ್ಬರು ಶಾಸಕರು ರಾಜೀನಾಮೆ ನೀಡಿದರೂ, ಬಿಜೆಪಿ ಮಾತ್ರ ಮೌನಕ್ಕೆ ಶರಣಾಗಿದೆ. ರಾಜೀ ನಾಮೆಗೆ ಬಿಜೆಪಿ ಪಾಳಯದಲ್ಲಿ ಸಂತಸ ಮನೆ ಮಾಡಿದ್ದರೂ ಬಹಿರಂಗವಾಗಿ ತೋರ್ಪಡಿಸಿ ಕೊಳ್ಳದೆ ಕಾದು ನೋಡುವ ತಂತ್ರ ಅನುಸರಿಸಿದೆ.

ಕಳೆದೊಂದು ವರ್ಷದಿಂದ ಸರ್ಕಾರ ಉರುಳಿ ಸುವ ಪ್ರಯತ್ನ ಮಾಡಿ ಕೈ ಸುಟ್ಟುಕೊಂಡಿದ್ದು ಬಿಜೆಪಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದ್ದಲ್ಲದೆ, ಸಾರ್ವಜನಿಕವಾಗಿ ಅಪಹಾಸ್ಯಕ್ಕೂ ಎಡೆ ಮಾಡಿಕೊಟ್ಟಿತ್ತು. ಹೈಕಮಾಂಡ್ ಸೂಚನೆ ಬಳಿಕ ಆಪರೇಷನ್ ಕಮಲದಿಂದ ದೂರವುಳಿದು ಲೋಕಸಭಾ ಚುನಾವಣೆಯಲ್ಲಿ ಸಕ್ರಿಯವಾಗಿ ಯಶಸ್ಸು ಕಂಡಿತು. ಬಿಜೆಪಿ ಯಾವ ಸಮಯದಲ್ಲಾದರೂ ಸರ್ಕಾರ ಉರುಳಿಸಬಲ್ಲದು ಎಂಬ ಭೀತಿ ಮೈತ್ರಿ ಪಕ್ಷಗಳಿಗಿದೆ. ಆದರೆ, ಸರ್ಕಾರ ರಚಿಸುವಷ್ಟು ಸಂಖ್ಯಾಬಲ ಪಡೆಯುವುದು ಅಷ್ಟು ಸುಲಭವಲ್ಲ ಎಂಬ ಕಾರಣಕ್ಕೆ ಸುಮ್ಮನಾಗಿತ್ತು. ದೆಹಲಿ ನಾಯಕರ ಸೂಚನೆ ನಡುವೆಯೂ ಮೈತ್ರಿ ಸರ್ಕಾರ ಬೀಳಿಸಲು ಸಾಧ್ಯವಾಗದಿರುವುದು ಬಿಜೆಪಿಗೂ ತಲೆನೋವು ಉಂಟುಮಾಡಿತ್ತು.

ಹೈಕಮಾಂಡ್ ನಿರ್ದೇಶನ: ಕೇಂದ್ರದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಹೈಕಮಾಂಡ್ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವಂತೆ ಈಚೆಗೆ ಸೂಚಿಸಿತ್ತು ಎಂದು ಬಲ್ಲ ಮೂಲಗಳು ತಿಳಿಸಿವೆ. ಬಹುಮತಕ್ಕೆ ಅಗತ್ಯ ಸಂಖ್ಯೆಯ ಶಾಸಕರಿಂದ ರಾಜೀನಾಮೆ ಕೊಡಿಸುವಂತೆ ನಿರ್ದೇಶನ ನೀಡಿತ್ತೆನ್ನಲಾಗಿದೆ. ಅದರ ಮುಂದುವರಿದ ಭಾಗವೇ ಇಬ್ಬರು ಕೈ ಶಾಸಕರ ರಾಜೀನಾಮೆ ಎಂದು ಹೇಳಲಾಗುತ್ತದೆ. ಇವರ ಬೆನ್ನಲ್ಲೇ ಇನ್ನಷ್ಟು ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬುದು ನಂಬಲರ್ಹ ಮೂಲಗಳ ಹೇಳಿಕೆ.

ಸ್ಪೀಕರ್​ಗೆ ಫ್ಯಾಕ್ಸ್ ಮಾಡಿದ ಜಾರಕಿಹೊಳಿ

ನಾಲ್ಕೈದು ತಿಂಗಳಿನಿಂದ ‘ರಾಜೀನಾಮೆ ಸ್ಟಾರ್’ ರೀತಿ ಬಿಂಬಿತವಾದ, ಕೋಟ್ಯಂತರ ರೂ.ಗಳ ಸಾಲದ ಸುಳಿಗೆ ಸಿಲುಕಿರುವ ರಮೇಶ್ ಜಾರಕಿಹೊಳಿ ಸ್ಪೀಕರ್ ಭೇಟಿ ಮಾಡದೆ ಫ್ಯಾಕ್ಸ್ ಮೂಲಕ ರಾಜೀನಾಮೆ ಪತ್ರ ಸಲ್ಲಿಸಿ ಅಚ್ಚರಿ ಮೂಡಿಸಿದ್ದಾರೆ. ಫ್ಯಾಕ್ಸ್​ನಲ್ಲಿ ಕಳಿಸುವ ರಾಜೀನಾಮೆ ಅಂಗೀಕಾರವಾಗದು ಎಂಬುದು 6 ಬಾರಿ ಗೆದ್ದಿರುವ ಅವರಿಗೂ ಗೊತ್ತಿರುವ ಸಾಮಾನ್ಯ ಜ್ಞಾನ. ರಾಜೀನಾಮೆ ಕೊಟ್ಟಂತಾಗಿರಬೇಕು, ಆದರೆ ಅಂಗೀಕಾರವಾಗಬಾರದು ಎಂಬುದೆ ಇವರ ಉದ್ದೇಶ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ.

ಅತೃಪ್ತರಿಗೆ ಸ್ಪಷ್ಟ ಸಂದೇಶ

ಇನ್ನಷ್ಟು ಅತೃಪ್ತರು ಬಿಜೆಪಿ ಬಾಗಿಲು ತಟ್ಟುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಮತ್ತೊಮ್ಮೆ ತಪು್ಪ ಹೆಜ್ಜೆ ಇಡಲು ಬಯಸದ ಬಿಜೆಪಿ ಮುಖಂಡರು ಮೋದಲು ರಾಜೀನಾಮೆ ನೀಡಿ ಬನ್ನಿ, ಆಮೇಲೆ ಚರ್ಚೆ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಪಕ್ಷಕ್ಕೆ ಬಂದವರಿಗೆಲ್ಲ ಯಾವ ಸ್ಥಾನ, ಹುದ್ದೆ ಎಂಬ ಪ್ರಶ್ನೆ ಉದ್ಭವಿಸುತ್ತಿದೆಯಲ್ಲದೆ ಇದ್ದವರನ್ನೂ ನಿಭಾಯಿಸಬೇಕಾದ ಅನಿವಾರ್ಯತೆ ಹಿನ್ನೆಲೆ ಈ ಸ್ಪಷ್ಟ ಸಂದೇಶ ರವಾನೆ ಎನ್ನಲಾಗುತ್ತಿದೆ.

*******************************************************

ಜಿಂದಾಲ್ ಭೂ ನೆಪ, ಕಮಲ ಪಕ್ಷದ್ದೇ ಜಪ!

| ಅಶೋಕ ನೀಮಕರ್ ಬಳ್ಳಾರಿ

ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಆನಂದ್​ಸಿಂಗ್ ಮುಂದಿನ ರಾಜಕೀಯ ನಡೆ ನಿಗೂಢವಾಗಿದೆ. ಕೈ ಬಿಟ್ಟು ಮತ್ತೆ ಕಮಲ ಹಿಡಿಯುವುದು ನಿಶ್ಚಿತ ಎಂಬ ಮಾತು ಜಿಲ್ಲೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಮೇಲ್ನೋಟಕ್ಕೆ ರಾಜೀನಾಮೆಗೆ ಜಿಂದಾಲ್​ಗೆ ಭೂ ಪರಭಾರೆ ಕಾರಣ ಎಂಬ ಮಾತುಗಳಿದ್ದರೂ ಕಾಂಗ್ರೆಸ್​ನಲ್ಲಿನ ಬೆಳವಣಿಗೆಗಳಿಂದ ಆನಂದ್ ಸಿಂಗ್ ಬೇಸತ್ತಿದ್ದರು ಎಂದು ಹೇಳಲಾಗುತ್ತಿದೆ.

ಕಳೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ತೊರೆದ ಆನಂದ್ ಸಿಂಗ್, ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದರು. ಆ ವೇಳೆ ಅವರಿಗೆ ಸಚಿವ ಸ್ಥಾನ, ಜಿಲ್ಲಾ ಉಸ್ತುವಾರಿ ಹಾಗೂ ಕ್ಷೇತ್ರಕ್ಕೆ ವಿಶೇಷ ಅನುದಾನದ ಭರವಸೆ ನೀಡಲಾಗಿತ್ತು. ಮೈತ್ರಿ ಸರ್ಕಾರ ರಚನೆಯಾದರೂ ಮಂತ್ರಿಗಿರಿ ಸಿಗಲಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಅನುದಾನವೂ ಲಭ್ಯವಾಗಲಿಲ್ಲ. ಜತೆಗೆ ಕಾಂಗ್ರೆಸ್​ನಲ್ಲಿ ಅವರ ಮಾತಿಗೆ ಮನ್ನಣೆ ಇರಲಿಲ್ಲ. 2018ರ ಅಕ್ಟೋಬರ್​ನಲ್ಲಿ ನಡೆದ ಹೊಸಪೇಟೆ ಹಾಗೂ ಕಮಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕದಲ್ಲೂ ಇವರನ್ನು ಕಡೆಗಣಿಸಲಾಗಿತ್ತು ಎನ್ನಲಾಗಿದೆ.

2018ರ ಡಿಸೆಂಬರ್​ನಲ್ಲಿ ಹನುಮ ಜಯಂತಿಯಲ್ಲಿ ಮಾಲಾಧಾರಿಗಳ ಮೆರವಣಿಗೆ ವೇಳೆ ನರ್ತಿಸಿದ್ದ ಆನಂದ್ ಸಿಂಗ್, ಆಬಳಿಕ ಹಂಪಿಗೆ ಭೇಟಿ ನೀಡಿದ್ದ ಕೇಂದ್ರ ಸಚಿವ ಪಿಯೂಷ್ ಗೋಯೆಲ್ ಜತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಜನವರಿಯಲ್ಲಿ ಬಿಡದಿ ರೆಸಾರ್ಟ್​ನಲ್ಲಿ ಶಾಸಕ ಗಣೇಶ್ ಜತೆಗಿನ ಗಲಾಟೆ ನಂತರ ಕಾಂಗ್ರೆಸ್ ನಾಯಕರಿಂದ ನಿರೀಕ್ಷಿತ ಬೆಂಬಲ ವ್ಯಕ್ತವಾಗದಿರುವುದು ಹಾಗೂ ಮೇ ತಿಂಗಳಲ್ಲಿ ಶಾಸಕ ಗಣೇಶ್ ಅಮಾನತನ್ನು ಕೆಪಿಸಿಸಿ ಹಿಂಪಡೆದಿದ್ದು ಆನಂದ್​ಸಿಂಗ್ ಬೇಸರಕ್ಕೆ ಕಾರಣವಾಗಿತ್ತು. ರೆಸಾರ್ಟ್ ಗಲಾಟೆ ಬಳಿಕ ಕ್ಷೇತ್ರದಲ್ಲಿ ತಟಸ್ಥರಾದ ಕಾರಣ ಲೋಕಸಭಾ ಚುನಾವಣೆಯಲ್ಲಿ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ

18,494 ಮತಗಳ ಮುನ್ನಡೆ ಸಿಕ್ಕಿತ್ತು.

ಆನಂದ್ ಸಿಂಗ್ ರಾಜೀನಾಮೆ ನನಗೆ ದೊಡ್ಡ ಶಾಕ್. ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಅವರು ಪಕ್ಷ ಬಿಟ್ಟು ಹೋಗು ವುದಿಲ್ಲ ಅಂತ ಹೇಳಿದ್ದರು. ವೈಯಕ್ತಿಕವಾಗಿ ಏನೇನು ಸಮಸ್ಯೆ ಇದ್ದವೋ ಗೊತ್ತಿಲ್ಲ.

| ಡಿ.ಕೆ.ಶಿವಕುಮಾರ್ ಸಚಿವ

ಶಾಸಕ ಆನಂದ್ ಸಿಂಗ್ ರಾಜೀನಾಮೆ ಮಾಸ್ಟರ್​ವೆುೖಂಡ್ ನಾನಲ್ಲ. ರಾಜೀನಾಮೆಗೂ ನನಗೂ ಸಂಬಂಧವಿಲ್ಲ. ಜೆಡಿಎಸ್ ಶಾಸಕರ ರಾಜೀನಾಮೆ ವಿಚಾರ ಎಷ್ಟು ನಿಜವೋ ಗೊತ್ತಿಲ್ಲ.

| ಅಡಗೂರು ವಿಶ್ವನಾಥ್ ಶಾಸಕ

ಆನಂದ್ ಸಿಂಗ್ ಪುತ್ರ ಉಪ ಅಖಾಡಕ್ಕೆ?

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ತುದಿಗಾಲಲ್ಲಿ ನಿಂತಿದ್ದ ಆನಂದ್ ಸಿಂಗ್​ಗೆ ಜಿಂದಾಲ್​ಗೆ ಭೂ ಮಾರಾಟ ವಿಚಾರ ವರವಾಯಿತು ಎಂದು ಹೇಳಲಾಗುತ್ತಿದೆ. 2018ರ ಸೆಪ್ಟೆಂಬರ್​ನಲ್ಲಿ ಆನಂದ್ ಸಿಂಗ್ ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು. ಇದರಿಂದಾಗಿ ಅವರ ಪುತ್ರ ಸಿದ್ಧಾರ್ಥ ಸಿಂಗ್ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸರ್ಕಾರ ಮಾತು ಕೇಳದ್ದಕ್ಕೆ ರಾಜೀನಾಮೆ

ವಿಜಯನಗರ ಶಾಸಕ ಆನಂದ್ ಸಿಂಗ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೆ, ರಾಜೀನಾಮೆಗೆ ಎರಡು ಪ್ರಮುಖ ಕಾರಣವನ್ನು ಸಾರ್ವಜನಿಕವಾಗಿ ಉಲ್ಲೇಖಿಸಿದ್ದಾರೆ. ‘ವಿಜಯನಗರ ಪ್ರತ್ಯೇಕ ಜಿಲ್ಲೆಯಾಗಬೇಕು ಮತ್ತು ಜಿಂದಾಲ್​ಗೆ ಭೂಮಿ ಪರಭಾರೆ ಮಾಡಬೇಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೆ. ಅದಕ್ಕೆ ಬೆಲೆ ಸಿಗದ ಹಿನ್ನೆಲೆ ರಾಜೀನಾಮೆ ನೀಡಿದ್ದೇನೆ’ ಎಂದವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಜಿಂದಾಲ್​ಗೆ ಭೂಮಿ ಪರಭಾರೆ ಮಾಡುವುದರಿಂದ ನನ್ನ ಜಿಲ್ಲೆಗೆ ಅನ್ಯಾಯ ಆಗುತ್ತಿದೆ. ಸರ್ಕಾರ ಅದನ್ನು ಸರಿಪಡಿಸಿಲ್ಲ. ಅದರ ವಿರುದ್ಧ ಧ್ವನಿ ಎತ್ತದೇ ಇದ್ದರೆ ನಾನು ಇದ್ದು ಇಲ್ಲದಂತೆ. ಅನಿಲ್ ಲಾಡ್ ಕೂಡ ಈ ವಿಚಾರದಲ್ಲಿ ಬೆಂಬಲಿಸಿ ದ್ದಾರೆ ಎಂದ ಸಿಂಗ್, ಬಳ್ಳಾರಿಯ ಶಾಸಕರು ಪಕ್ಷಾತೀತವಾಗಿ ಹೋರಾಟಕ್ಕೆ ಕೈ ಜೋಡಿಸಬೇಕು. ಭೂಮಿ ಮಾರಾಟ ಮಾಡೋದು ಬೇಡ. ಬೇಕಾದ್ರೆ ಲೀಸ್ ಮುಂದುವರೆಸಲಿ ಎಂದರು. ಇದು ಯಾವುದೇ ಆಪರೇಷನ್ ಕಮಲ ಅಲ್ಲ. ನನ್ನ ಜಿಲ್ಲೆ ಉಳಿಯಬೇಕೆಂದು ರಾಜೀನಾಮೆ ನೀಡಿದ್ದೇನೆ ಅಷ್ಟೆ ಎಂದು ಸ್ಪಷ್ಟಪಡಿಸಿದರು.

ಆನಂದ್​ಸಿಂಗ್ ರಾಜೀನಾಮೆ ಹಿಂದಿನ ಕಾರಣ ನನಗೆ ಗೊತ್ತಿಲ್ಲ. ಬಂಡಾಯ ಶಾಸಕರ ಪಟ್ಟಿಯಲ್ಲಿ ಅನವಶ್ಯಕವಾಗಿ ಮಾಧ್ಯಮಗಳು ನನ್ನ ಹೆಸರು ಬಿತ್ತರಿಸುತ್ತಿವೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ತೊರೆಯುವುದಿಲ್ಲ.

| ಜೆ.ಎನ್.ಗಣೇಶ್ ಕಂಪ್ಲಿ ಶಾಸಕ

ಎಲ್ಲರ ಚಿತ್ತ ಕೌರವನತ್ತ

ಹಾವೇರಿ: ಸಚಿವ ಸ್ಥಾನ ಸಿಗದಿದ್ದರಿಂದ ಈಗಾಗಲೇ ಸಾಕಷ್ಟು ಬಾರಿ ಅಸಮಾಧಾನ ಹೊರಹಾಕಿದ್ದ ಶಾಸಕ ಬಿ.ಸಿ. ಪಾಟೀಲ್, ಜು. 2ರಂದು ಹಿರೇಕೆರೂರನಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ತ್ರೖೆಮಾಸಿಕ ಕೆಡಿಪಿ ಸಭೆ ಹಾಗೂ ಲೋಕೋಪಯೋಗಿ ಇಲಾಖೆ ನೌಕರರ ವಸತಿಗೃಹ ಉದ್ಘಾಟನೆ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ.

ರಾಜೀನಾಮೆಗೆ ಪ್ರತಾಪಗೌಡ ಸಿದ್ಧ?

ಮಸ್ಕಿ: ಶಾಸಕ ಪ್ರತಾಪಗೌಡ ಪಾಟೀಲರೂ ರಾಜೀನಾಮೆ ನೀಡುತ್ತಾರೆಂಬ ಸುದ್ದಿ ಹರಡಿದೆ. ಈ ಕುರಿತು ವಿಜಯವಾಣಿ ಜತೆ ಪ್ರತಿಕ್ರಿಯಿಸಿದ ಅವರು, ನಾನು ಕಾಂಗ್ರೆಸ್​ನಲ್ಲಿದ್ದೇನೆ. ರಾಜಕೀಯ ಬೆಳವಣಿಗೆ ಗಮನಿಸಿ ನಿರ್ಧಾರ ಪ್ರಕಟಿಸುವೆ ಎನ್ನುವ ಮೂಲಕ ಜಾಣ ನಡೆ ಪ್ರದರ್ಶಿಸಿದ್ದಾರೆ.

ಅವಿಶ್ವಾಸ ಗೊತ್ತುವಳಿ ಇಲ್ಲ

ದುರಾಡಳಿತ ನಡೆಸುತ್ತಿರುವ, ಅತಂತ್ರ ಸ್ಥಿತಿಯಲ್ಲಿರುವ ಈಗಿನ ಸಮ್ಮಿಶ್ರ ಸರ್ಕಾರದ ವಿರುದ್ಧ ಮುಂಬರುವ ಅಧಿವೇಶನದಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸುವ ಯಾವುದೇ ಯೋಚನೆ ಪಕ್ಷಕ್ಕಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಸರ್ಕಾರ ಬೀಳಿಸುವ ಕಾರ್ಯಕ್ಕೆ ನಾವು ಹೋಗುವುದಿಲ್ಲ. ಆದರೆ ಸರ್ಕಾರವನ್ನು ಎಚ್ಚರಿಸುವ ಕಾರ್ಯ ಪ್ರತಿಪಕ್ಷವಾಗಿ ಮಾಡುತ್ತೇವೆ. ಒಂದು ವೇಳೆ ಸರ್ಕಾರ ಬಹುಮತ ಕಳೆದುಕೊಂಡರೆ ಅಧಿಕಾರ ನಡೆಸಲು ಸಿದ್ಧರಿದ್ದೇವೆ. ನಾವ್ಯಾರೂ ರಾಜಕೀಯ ಸನ್ಯಾಸಿಗಳಲ್ಲ. ಮತ್ತೆ ಚುನಾವಣೆ ನಡೆದರೆ ರಾಜ್ಯದ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಆನಂದ್ ಸಿಂಗ್ ರಾಜೀನಾಮೆ ವಿಚಾರ ಮಾಧ್ಯಮಗಳಿಂದ ತಿಳಿದುಕೊಂಡಿದ್ದೇನೆ. ಅವರು ನಮ್ಮ ಸಂಪರ್ಕದಲ್ಲಿಲ್ಲ. ಮತ್ತೆ ಯಾರು ರಾಜೀನಾಮೆ ನೀಡುತ್ತಾರೆ ಎಂಬುದೂ ಗೊತ್ತಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ 20ಕ್ಕೂ ಹೆಚ್ಚು ಅತೃಪ್ತ ಶಾಸಕರಿರುವುದು ಮಾತ್ರ ಗೊತ್ತು ಎಂದರು.

ಸಚಿವರ ರಾಜೀನಾಮೆ?

ಸರ್ಕಾರವನ್ನು ಉಳಿಸಿಕೊಳ್ಳಲು ಅತೃಪ್ತರಿಗೆ ಸಚಿವ ಸ್ಥಾನ ನೀಡುವ ಬಗ್ಗೆಯೂ ಕಾಂಗ್ರೆಸ್ ಹಾಗೂ ಜೆಡಿಎಸ್ ಆಪ್ತವಲಯದಲ್ಲಿ ಚರ್ಚೆ ನಡೆದಿದೆ. ಹಾಲಿ ಸಚಿವರಲ್ಲಿ ಕೆಲವರ ರಾಜೀನಾಮೆ ಕೊಡಿಸಿ ನಂತರ ಅತೃಪ್ತರಿಗೆ ಸಚಿವ ಸ್ಥಾನ ಕೊಡಲಾಗುತ್ತದೆ ಎಂಬ ವದಂತಿಗಳಿವೆ. ಆದರೆ ಈ ಬಗ್ಗೆ ಖಚಿತತೆ ಇಲ್ಲ.

ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಆಯಸ್ಸಿಲ್ಲ. ಬೆಳೆದ ಫಸಲನ್ನು ಪರರು ಕೊಯ್ದಾರು. ಬಿತ್ತಿದ ಬೀಜ ಒಂದು, ಫಸಲು ಇನ್ನೊಂದು. ಸರ್ಕಾರ ಒಂದು ವರ್ಷದಿಂದ 18 ತಿಂಗಳೊಳಗಾಗಿ ಪತನವಾಗಲಿದೆ. ರಾಜ್ಯದಲ್ಲಿ ಈ ಬಾರಿ ಮಳೆಯ ಕೊರತೆಯಾಗುವುದಿಲ್ಲ.

| ಡಾ.ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹಾರನಹಳ್ಳಿ ಕೋಡಿಮಠ

ರಾಜೀನಾಮೆಗೆ ವ್ಯವಹಾರಿಕ ನಂಟು?

ಬಳ್ಳಾರಿ: ಮೂಲತಃ ಗಣಿ ಉದ್ಯಮಿಯಾಗಿದ್ದ ಆನಂದ್ ಸಿಂಗ್ ರಾಜೀನಾಮೆಯನ್ನು ವ್ಯವಹಾರದ ದೃಷ್ಟಿಕೋನದಿಂದಲೂ ನೋಡಲಾಗುತ್ತಿದೆ. ಸಂಡೂರಿನ ರಾಮಘಡ ಅರಣ್ಯ ಪ್ರದೇಶದಲ್ಲಿರುವ ಸಿ ಕೆಟಗಿರಿಯ ರಾಮರಾವ್ ಪೋಳ (ಆರ್​ಆರ್​ಪಿ) ಮೈನಿಂಗ್ ಪ್ರದೇಶದ ಸುಮಾರು 33 ಹೆಕ್ಟೇರ್ ಅನ್ನು ಜಿಂದಾಲ್ ಕಂಪನಿ ಇ-ಟೆಂಡರ್​ನಲ್ಲಿ ಗುತ್ತಿಗೆ ಪಡೆದಿದೆ. ಸುಶೀಲಾನಗರ ಗ್ರಾಪಂನಿಂದ ಗ್ರಾಮಸಭೆಯ ಅನುಮತಿ ಸಿಗದ್ದರಿಂದ ಜಿಂದಾಲ್ ಇನ್ನೂ ಗಣಿಗಾರಿಕೆ ಆರಂಭಿಸಿಲ್ಲ. ಆರ್​ಆರ್​ಪಿ ಸಂಸ್ಥೆಯವರ ಕಾನೂನು ಹೋರಾಟ, ಸ್ಥಳೀಯರ ಉದ್ಯೋಗ ಬೇಡಿಕೆಯೂ ಗಣಿಗಾರಿಕೆ ನನೆಗುದಿಗೆ ಬೀಳಲು ಕಾರಣ ಎನ್ನಲಾಗುತ್ತಿದೆ. ಭೂ ಮಾರಾಟ ವಿಚಾರದಲ್ಲಿ ಆನಂದ್ ಸಿಂಗ್ ಜಿಂದಾಲ್ ವಿರುದ್ಧ ತಿರುಗಿ ಬಿದ್ದಿರುವುದಕ್ಕೆ ಈ ಪ್ರಕರಣವನ್ನೂ ತಳಕು ಹಾಕಲಾಗುತ್ತಿದೆ. ಈ ಹಿಂದೆ ಆರ್​ಆರ್​ಪಿ ಗಣಿಯನ್ನು ಪ್ರಭಾವಿಗಳು ನಿರ್ವಹಿಸುತ್ತಿದ್ದರು. ಅದರಲ್ಲಿ ಇವರ ಹೆಸರೂ ಇತ್ತು ಎಂಬ ಗುಮಾನಿಯಿದೆ.