ಶಿಗ್ಗಾಂವಿ(ಗ್ರಾ): ರಸ್ತೆ ಬದಿ ನಿಂತಿದ್ದವರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಧಾರುಣವಾಗಿ ಮೃತಪಟ್ಟ ಘಟನೆ ತಾಲೂಕಿನ ಎನ್.ಎಂ. ತಡಸ(ನೀರಲಗಿ) ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಸೋಮವಾರ ನಡೆದಿದೆ.
ತಾಲೂಕಿನ ಎನ್.ಎಂ. ತಡಸ(ನೀರಲಗಿ) ಗ್ರಾಮದ ವಿರೂಪಾಕ್ಷಪ್ಪ ಪೀರಪ್ಪ ಕಾಳೆ, ಚಿದಾನಂದ ನಿಂಗಪ್ಪ ಶೆರೆವಾಡ ಮೃತ ದುರ್ದೈವಿಗಳು. ತಮ್ಮ ಗ್ರಾಮದಿಂದ ಶಿಗ್ಗಾಂವಿ ಪಟ್ಟಣಕ್ಕೆ ತೆರಳಲು ಬಸ್‌ಗಾಗಿ ರಸ್ತೆ ಬದಿಯಲ್ಲಿ ಕಾಯುತ್ತಿದ್ದರು. ಈ ವೇಳೆ ಹುಬ್ಬಳ್ಳಿ ಕಡೆಯಿಂದ ವೇಗವಾಗಿ ಬಂದ ಕಾರು ಇಬ್ಬರಿಗೂ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಾರು ಸ್ಥಳದಲ್ಲಿಯೇ ಬಿಟ್ಟು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಕುರಿತು ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ
ಅಪಘಾತದಿಂದ ಇಬ್ಬರು ಸಾವಿಗೀಡಾಗಿದ್ದರಿಂದ ಆಕ್ರೋಶಗೊಂಡ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ತಡೆದು ಕೆಲ ಕಾಲ ಪ್ರತಿಭಟನೆ ನಡೆಸಿದರು. ಗ್ರಾಮದ ಸಂಚಾರಕ್ಕಾಗಿ ಇಲ್ಲಿ ಫ್ಲೈ ಓವರ್ ನಿರ್ಮಿಸಬೇಕು. ಗ್ರಾಮಕ್ಕೆ ಬಂದು ಹೋಗಲು ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶಿವಕುಮಾರ ಗುಣಾರೆ ಮತ್ತು ಜಿಲ್ಲಾಧಿಕಾರಿ ರಘುನಂದನಮೂರ್ತಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ಅಲ್ಲದೆ, ಸಾರಿಗೆ ಸಂಸ್ಥೆ ಅಧಿಕಾರಿಗಳು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆ ಚರ್ಚಿಸಿ, ಬಸ್ ವ್ಯವಸ್ಥೆ ಮತ್ತು ಫ್ಲೈ ಓವರ್ ರಸ್ತೆ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಡಿವೈಎಸ್‌ಪಿ ಮಂಜುನಾಥ ಜಿ., ಸವಣೂರ ವಿಭಾಗಾಧಿಕಾರಿ ಮಹಮ್ಮದ ಕೈಸರ್, ಸಿಪಿಐ ಸುರೇಶ ಕುಂಬಾರ, ತಡಸ ಪಿಎಸ್‌ಐ ಗೀತಾ ಪಾಟೀಲ, ಸಂತೋಷ ಚಾಕಲಬ್ಬಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.