ಬೆಂಗಳೂರು: ಕರೊನಾ ವೈರಸ್ ತಗಲಿರುವ ಶಂಕೆ ಹಿನ್ನೆಲೆಯಲ್ಲಿ ಚೀನಾ ಪ್ರವಾಸ ಮುಗಿಸಿಕೊಂಡು ಬಂದಿರುವ ಇಬ್ಬರ ರಕ್ತದ ಮಾದರಿಯನ್ನು ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ) ಸಂಸ್ಥೆಗೆ ಕಳುಹಿಸಿದ್ದು, ವರದಿಗೆ ಕಾಯಲಾಗುತ್ತಿದೆ. ಜ. 18ರಂದು ವಾಪಸಾಗಿದ್ದ ಈ ಇಬ್ಬರ ಆರೋಗ್ಯದಲ್ಲೂ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಭಾನುವಾರ ರಾತ್ರಿ ನಗರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಚೀನಾದಿಂದ ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಯಾಣಿಕರ ಮೇಲೆ ನಿಗಾ ವಹಿಸಲಾಗಿದೆ. ಇದಕ್ಕಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ವತಿಯಿಂದ ಸಹಾಯ ಕೇಂದ್ರ ಆರಂಭಿಸಿದ್ದು, ಕಳೆದೊಂದು ವಾರದಲ್ಲಿ ಚೀನಾದಿಂದ ಬಂದ 2,572 ಪ್ರಯಾಣಿಕರನ್ನು ಥರ್ಮಲ್ ಸ್ಕ್ಯಾನರ್ಗೆ ಒಳಪಡಿಸಲಾಗಿದೆ. ವಿದೇಶಿ ಪ್ರವಾಸಿಗರು ಹಾಗೂ ವಿದೇಶಗಳಿಗೆ ಹೋಗಿ ಬರುವ ಭಾರತೀಯರನ್ನು ಆರೋಗ್ಯ ಇಲಾಖೆ ಅಧಿಕಾರಿಗಳೆ ತಪಾಸಣೆಗೆ ಒಳಪಡಿಸುತ್ತಿದ್ದಾರೆ.
ರೋಗ ಹರಡುವ ರೀತಿ
- ಸೋಂಕಿತ ವ್ಯಕ್ತಿ ಸೀನಿದಾಗ ಮತ್ತು ಕೆಮ್ಮಿದಾಗ
- ಸೋಂಕಿತ ರೊಂದಿಗೆ ನಿಕಟ ಸಂಪರ್ಕದಲ್ಲಿದ್ದಾಗ
- ಹಸ್ತ ಲಾಘವ ಮತ್ತು ಅವರನ್ನು ಮುಟ್ಟಿದಾಗ
- ಸೋಂಕಿತರ ವಸ್ತುಗಳನ್ನು ಬಳಸಿದಾಗ
ಚೀನಾ ಪ್ರವಾಸಿಗರ ಮೇಲೆ ನಿಗಾ
ಇತ್ತೀಚೆಗೆ ಚೀನಾದಿಂದ ಆಗಮಿಸಿದ್ದ ವ್ಯಕ್ತಿಯೊಬ್ಬರಿಗೆ ಕೆಮ್ಮು, ನೆಗಡಿ ಕಾಣಿಸಿಕೊಂದ್ದರಿಂದ ಆಸ್ಪತ್ರೆಗೆ ದಾಖಲಿಸಿ ರಕ್ತ ಪರೀಕ್ಷೆ ನಡೆಸಲಾಗಿತ್ತು. ವರದಿಯಲ್ಲಿ ಸೋಂಕು ಇಲ್ಲದಿರುವುದು ದೃಢಪಟ್ಟಿದ್ದು ಆತಂಕ ದೂರಾಗಿದೆ. ನಾಲ್ವರು ಚೀನಾ ನಾಗರಿಕರು ರಾಜ್ಯಕ್ಕೆ ಆಗಮಿಸಿದ್ದು, ಚೀನಾ ಪ್ರವಾಸಕ್ಕೆ ತೆರಳಿದ್ದ ಇಬ್ಬರು ಭಾರತೀಯರು ರಾಜ್ಯಕ್ಕೆ ವಾಪಸ್ಸಾಗಿದ್ದಾರೆ. ಈ ಎಲ್ಲ ಒಂಬತ್ತು ಮಂದಿಯೊಂದಿಗೆ ಆರೋಗ್ಯ ಇಲಾಖೆಯು ನಿರಂತರ ಸಂಪರ್ಕದಲ್ಲಿದೆ.
ರೋಗ ಲಕ್ಷಣ: ವಿಪರೀತ ಜ್ವರ, ಎದೆ ನೋವಿ ನಿಂದ ಕೂಡಿದ ಉಸಿರಾಟದ ತೊಂದರೆ, ಶೀತ, ನೆಗಡಿ, ಕೆಮ್ಮು, ಗಂಟಲು ಕೆರೆತ, ನ್ಯುಮೋನಿಯ.
ಚಿಕಿತ್ಸಾ ವ್ಯವಸ್ಥೆ
ಸೋಂಕಿತರ ಚಿಕಿತ್ಸೆಗಾಗಿ ಬೆಂಗಳೂರಿನ ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆ ಹಾಗೂ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಹಾಸಿಗೆಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ಕರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಎಲ್ಲ ರಾಜ್ಯಗಳ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಹಾಗೂ ವೈದ್ಯಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ನಡೆಸಿದೆ.
| ಡಾ. ಬಿ.ಜಿ. ಪ್ರಕಾಶ್ ಕುಮಾರ್ ಸಹ ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಎಚ್ಚರಿಕೆ ಕ್ರಮಗಳೇನು?
- ಸೋಂಕಿತರ ಸಂಪರ್ಕದಿಂದ ದೂರವಿರುವುದು
- ಶಂಕಿತರನ್ನು ಪ್ರತ್ಯೇಕವಾಗಿಸಿ, ಮೂರು ಪದರವುಳ್ಳ ಮಾಸ್ಕ್ ಬಳಸುವುದು
- ಕೆಮ್ಮುವಾಗ ಮತ್ತು ಸೀನುವಾಗ ಕರವಸ್ತ್ರ ಅಥವಾ ಮಾಸ್ಕ್ ಬಳಸುವುದು
- ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು
- ಉಸಿರಾಟದ ತೊಂದರೆ ಇದ್ದರೆ ಕೂಡಲೇ ವೈದ್ಯರಲ್ಲಿ ಚಿಕಿತ್ಸೆ ಪಡೆಯುವುದು
- ಮಾಂಸ, ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ಸೇವಿಸುವುದು
- ಆಹಾರ ಸೇವನೆಗೆ ಮುನ್ನ ಕೈಗಳನ್ನು ಶುಭ್ರವಾಗಿ ತೊಳೆದುಕೊಳ್ಳುವುದು