ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸೆಲ್ಫಿ ತೆಗೆಯಲು ಆಕ್ಷೇಪಿಸಿದ ಆರ್​ಪಿಎಫ್​ ಅಧಿಕಾರಿಗೆ ರಿವಾಲ್ವರ್​ ತೋರಿಸಿದ ಯುವಕರು ಅರೆಸ್ಟ್​

ಹುಬ್ಬಳ್ಳಿ: ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಆಯಕಟ್ಟಿನ ಸ್ಥಳದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಆಕ್ಷೇಪಿಸಿದ ರೈಲ್ವೆ ರಕ್ಷಣಾ ಪಡೆಯ (ಆರ್​ಪಿಎಫ್​) ಅಧಿಕಾರಿಗೆ ರಿವಾಲ್ವರ್​ ತೋರಿಸಿ, ಜೀವಬೆದರಿಕೆ ಒಡ್ಡಿದ ಆರೋಪದಲ್ಲಿ ಆರ್​ಪಿಎಫ್​ ಸಿಬ್ಬಂದಿ ಇಬ್ಬರು ಯುವಕರನ್ನು ಬಂಧಿಸಿದ್ದಾರೆ.

ಮಂಟೂರು ರಸ್ತೆಯ ಬ್ಯಾಳಿ ಓಣಿ ನಿವಾಸಿ ಶರೀಫ ಅದೋನಿ ಮತ್ತು ಮಜರ್​ ಬಂಧಿತರು. ಇವರಿಬ್ಬರ ಬಳಿ ಇದ್ದ ಒಂದು ರಿವಾಲ್ವರ್​ ಅನ್ನು ವಶಕ್ಕೆ ಪಡೆದುಕೊಂಡಿರುವ ಆರ್​ಪಿಎಫ್​ ಪೊಲೀಸರು ನಂತರ ಇಬ್ಬರನ್ನೂ ಶಹರ ಠಾಣೆಯ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಅತಿಗಣ್ಯವ್ಯಕ್ತಿಗಳ ಲಾಂಜ್​ ಬಳಿ ಕೆಲ ಯುವಕರು ಮೊಬೈಲ್​ ಫೋನ್​ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಸ್ಥಳದಲ್ಲೇ ಇದ್ದ ಆರ್​ಪಿಎಫ್​ ಪೇದೆ ರವಿಕುಮಾರ್​ ಆಕ್ಷೇಪಿಸಿದ್ದಲ್ಲದೆ, ತೆಗೆದುಕೊಂಡಿರುವ ಫೋಟೋಗಳನ್ನು ಡಿಲೀಟ್​ ಮಾಡಲು ಸೂಚಿಸಿದ್ದರು. ಆದರೆ ಇದಕ್ಕೆ ಒಪ್ಪದ ಶರೀಫ ಮತ್ತತಾನ ಸಹಚರರು ರವಿಕುಮಾರ್​ ಜತೆ ವಾಗ್ವಾದಕ್ಕಿಳಿದಿದ್ದರು. ಆಗ ರವಿಕುಮಾರ್​ ತಮ್ಮ ಬಳಿಯಿದ್ದ ರಿವಾಲ್ವರ್​ ಹೊರತೆಗೆದು ಬೆದರಿಸಿದ್ದರು.

ಆಗ ಶರೀಫ ತನ್ನ ಬಳಿ ಇದ್ದ ರಿವಾಲ್ವರ್​ ಅನ್ನು ಹೊರತೆಗೆದು ರವಿಕುಮಾರ್​ ಅತ್ತ ಗುರಿ ಮಾಡಿ, ಜೀವಬೆದಕರಿಕೆ ಒಡ್ಡಿದ ಎನ್ನಲಾಗಿದೆ. ರವಿಕುಮಾರ್​ ತಕ್ಷಣವೇ ಶರೀಫ ಹಾಗೂ ಮಜರ್​ನನ್ನು ಹಿಡಿದು ಗದಗ ರಸ್ತೆಯಲ್ಲಿರುವ ಠಾಣೆಗೆ ಕರೆ ತಂದು ವಿಚಾರಣೆಗೆ ಒಳಪಡಿಸಿದರು. ಬಳಿಕ ಶಹರ ಠಾಣೆ ಪೊಲೀಸರ ವಶಕ್ಕೆ ಒಪ್ಪಿಸಿದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *