ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಕೆಲವರು ಟ್ರಕ್ ಮೇಲೆ ಕಲ್ಲೆಸೆದು ಡ್ರೈವರ್ನನ್ನು ಕೊಂದಿದ್ದರು. ಈ ಘಟನೆ ಸಂಬಂಧ ಇಬ್ಬರು ಯುವಕರನ್ನು ಬಂಧಿಸಲಾಗಿದೆ.
ಅನಂತ್ನಾಗ್ ಜಿಲ್ಲೆಯ ಬಿಜ್ಬೆಹರಾ ಪ್ರದೇಶದ ಉರ್ನಹಲ್ನಲ್ಲಿ ಭಾನುವಾರ ಸಂಜೆ ಕಲ್ಲು ತೂರಾಟಗಾರರು ಟ್ರಕ್ವೊಂದರ ಮೇಲೆ ಕಲ್ಲು ಎಸೆದಿದ್ದರು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಟ್ರಕ್ ಚಾಲಕ 42 ವರ್ಷದ ನೂರ್ ಮೊಹಮದ್ ದರ್ ಎಂಬುವವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದರು.
ಈ ಘಟನೆ ಸಂಬಂಧ ಪೊಲೀಸರು ಸೋಮವಾರ ಬೆಳಗ್ಗೆ ಇಬ್ಬರು ಯುವಕರನ್ನು ಬಂಧಿಸಿದ್ದಾರೆ. ಇತರೆ 6 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಂಧಿತ ಯುವಕರು ಯಾವುದೇ ಅಪರಾಧದ ಹಿನ್ನೆಲೆ ಹೊಂದಿಲ್ಲ. ಆದರೂ ಅವರು ಟ್ರಕ್ ಮೇಲೆ ಏಕೆ ಕಲ್ಲು ತೂರಾಟ ನಡೆಸಿದರು. ಇದಕ್ಕೆ ಪ್ರಚೋದನೆ ನೀಡಿದವರು ಯಾರು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲಿಸರು ತಿಳಿಸಿದ್ದಾರೆ.
ಕಲ್ಲು ತೂರಾಟಗಾರರು ನೂರ್ ಮೊಹಮದ್ ದರ್ ಚಲಾಯಿಸುತ್ತಿದ್ದ ಟ್ರಕ್ ಅನ್ನು ಭದ್ರತಾ ಪಡೆಗಳ ಟ್ರಕ್ ಎಂದು ತಿಳಿದು ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಶ್ರೀನಗರದಲ್ಲಿ ನಡೆದಿದ್ದ ಕಲ್ಲುತೂರಾಟ ಘಟನೆಯಲ್ಲಿ ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡಿದ್ದಳು. (ಏಜೆನ್ಸೀಸ್)