ಸಿಟ್ಟಿಗೆ ಕಾರಣವಾಯ್ತು ಅಭಿನಂದನ್​ ತದ್ರೂಪಿ​ ಜಾಹೀರಾತು: ಟ್ವೀಟ್​ ಮೂಲಕ ಪಾಕ್​ಗೆ ಭಾರತೀಯರು ತಿವಿದಿದ್ದು ಹೀಗೆ…

ನವದೆಹಲಿ: ವಿಶ್ವಕಪ್​ ಟೂರ್ನಿ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಜಾಹಿರಾತಿಗೆ ಟಕ್ಕರ್​ ಕೊಡಲು ವಿಂಗ್​ ಕಮಾಂಡರ್​ ಅಭಿನಂದನ್​ ರೀತಿಯ ತದ್ರೂಪಿಯನ್ನು ಬಳಸಿಕೊಂಡು ಭಾರತವನ್ನು ಅಣಕಿಸಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮಾಡಿದ್ದ ಜಾಹೀರಾತಿಗೆ ಭಾರತೀಯರು ವಿರೋಧ ವ್ಯಕ್ತಪಡಿಸಿ, ಇದೊಂದು ಕೆಳಮಟ್ಟದ ಹಾಗೂ ನಾಚಿಕೆ ತರಿಸುವಂತದ್ದು ಎಂದು ಟ್ವೀಟ್​ ಮೂಲಕ ಕಿಡಿಕಾರಿದ್ದಾರೆ.

ವಿಶ್ವಕಪ್​ ಟೂರ್ನಿಯಲ್ಲಿ ಪಾಕ್​ ವಿರುದ್ಧ ಗೆಲುವು ದಾಖಲಿಸುವಂತೆ ತಂಡವನ್ನು ಹುರಿದುಂಬಿಸಲು, ಮೌಕಾ, ಮೌಕಾ.. ಎಂಬ ಜಾಹೀರಾತನ್ನು ಭಾರತ ಬಿಡುಗಡೆ ಮಾಡಿದೆ. ಇದಕ್ಕೆ ಪ್ರತಿಯಾಗಿ ಪಾಕ್​ ಕೂಡ ಜಾಹೀರಾತು ವಿಡಿಯೋ ಬಿಡುಗಡೆ ಮಾಡಿ, ಭಾರತೀಯರನ್ನು ಅಣುಕಿಸಿರುವುದು ಕೋಪಕ್ಕೆ ಕಾರಣವಾಗಿದೆ.

ನಮ್ಮ ಹೀರೋ ಅಭಿನಂದನ್​​ ಅವರನ್ನು ಅಣುಕಿಸಲು ಪಾಕ್​ಗೆ ನಾಚಿಕೆಯಾಗಬೇಕು. ನಾವು ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲೇಬೇಕು ಎಂದು ಅನೇಕ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರೆ, ನಿಮಗೆ ಕಾಫಿ ಕಪ್​ ಮಾತ್ರ ಯೋಗ್ಯ, ನಿಮ್ಮಿಂದ ವಿಶ್ವಕಪ್​ ಹಿಡಿಯಲು ಸಾಧ್ಯವಿಲ್ಲ. ಅಭಿನಂದನ್​ ಅವರನ್ನು ಅಣಕಿಸಲು ನೀವು ಯೋಗ್ಯರಲ್ಲ. ನಾವು ಟೀ ಕಪ್​ ಗೆಲ್ಲಲು ಮಾತ್ರ ಅರ್ಹರು ಎಂದು ಪಾಕ್​ ಸ್ವತಃ ಒಪ್ಪಿಕೊಂಡಿದೆ ಎಂದು ಕೆಲ ಟ್ವಿಟ್ಟಿಗರು ಪಾಕ್​ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಆಕ್ರೋಶಕ್ಕೆ ಕಾರಣವಾದ ವಿಡಿಯೋದಲ್ಲಿ ಏನಿದೆ?
ಜೂನ್​ 16ರಂದು ನಡೆಯುವ ಭಾರತ ಹಾಗೂ ಪಾಕ್​ ನಡುವಿನ ಪಂದ್ಯದಲ್ಲಿ ತಮ್ಮ ತಮ್ಮ ತಂಡಗಳನ್ನು ಹುರಿದುಂಬಿಸಲು ಉಭಯ ತಂಡಗಳು ವಿಡಿಯೋ ಜಾಹೀರಾತನ್ನು ಬಿಡುಗಡೆ ಮಾಡಿವೆ. ಪಾಕ್​ ಬಿಡುಗಡೆಗೊಳಿಸಿರುವ ಜಾಹೀರಾತಿನ ವಿಡಿಯೋದಲ್ಲಿರುವಂತೆ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ತದ್ರೂಪಿ ನೀಲಿ ಬಣ್ಣದ ಟೀಶರ್ಟ್​ ಹಾಕಿಕೊಂಡು ಚಹಾ ಕುಡಿಯುತ್ತಿರುತ್ತಾನೆ. ಹಿನ್ನೆಲೆಯಲ್ಲಿ ಒಬ್ಬ ವ್ಯಕ್ತಿ ಟಾಸ್​ ಆದರೆ ಏನು ಮಾಡುತ್ತೀರಿ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಅಭಿನಂದನ್​ ತದ್ರೂಪಿ ‘ಅದನ್ನು ಹೇಳುವಂತಿಲ್ಲ’ ಎಂದು ಉತ್ತರಿಸುತ್ತಾನೆ. ನಂತರ ಆಡುವ ಹನ್ನೊಂದರ ಬಳಗದಲ್ಲಿ ಯಾರು ಇರುತ್ತಾರೆ ಎಂಬ ಮತ್ತೊಂದು ಪ್ರಶ್ನೆ ಕೇಳಲಾಗುತ್ತದೆ. ಅದಕ್ಕೂ ತದ್ರೂಪಿ ‘ಅದನ್ನು ಹೇಳುವಂತಿಲ್ಲ’ ಎನ್ನುತ್ತಾನೆ. ಬಳಿಕ ಚಹಾ ಹೇಗಿದೆ ಎಂಬ ಹಿನ್ನೆಲೆಯ ಧ್ವನಿಯ ಪ್ರಶ್ನೆಗೆ ತುಂಬಾ ಚೆನ್ನಾಗಿದೆ ಎಂದು ತದ್ರೂಪಿ ಉತ್ತರಿಸುತ್ತಾನೆ. ಆನಂತರದಲ್ಲಿ ಹೋಗುವಂತೆ ಹಿನ್ನೆಲೆ ಧ್ವನಿ ಅಭಿನಂದನ್​ ತದ್ರೂಪಿಗೆ ಸೂಚಿಸುತ್ತದೆ. ಅದರಂತೆ ಕಪ್​ ಸಹಿತ ಎದ್ದುಹೋಗುತ್ತಿರುವ ತದ್ರೂಪಿಯನ್ನು ಕೈಯಿಂದ ತಡೆಯುವ ವ್ಯಕ್ತಿಯೊಬ್ಬ, ಕಪ್​ ಅನ್ನು ಎಲ್ಲಿಗೆ ಕೊಂಡೊಯ್ಯುತ್ತಿದ್ದೀಯಾ ಎಂದು ಪ್ರಶ್ನಿಸುತ್ತಾ, ಅದನ್ನು ಕಸಿದುಕೊಳ್ಳುತ್ತಾನೆ. ಈ ಮೂಲಕ ಪಾಕ್​ ಈ ಬಾರಿ ಕಪ್​ ನಮ್ಮದೇ ಎಂದು ಹೇಳುವ ಪ್ರಯತ್ನ ಮಾಡಿದೆ.

ಧೀರ ಯೋಧ​ ಅಭಿನಂದನ್​
ಭಾರತ ವಾಯುಗಡಿಯನ್ನು ಉಲ್ಲಂಘಿಸಿದ ಪಾಕ್​ ಯುದ್ಧ ವಿಮಾನಗಳನ್ನು ಬೆನ್ನಟ್ಟಿ ಹೋಗಿ ಪಾಕ್​ನ ಎಫ್​-16 ಯುದ್ಧವಿಮಾನವನ್ನು ಹೊಡೆದುರುಳಿಸಿ, ಆಕಸ್ಮಿಕವಾಗಿ ಪಾಕ್​ ಗಡಿಯಲ್ಲಿ ಬಿದ್ದಿದ್ದ, ಭಾರತೀಯ ವಾಯುಪಡೆಯ ವೀರಯೋಧ ಅಭಿನಂದನ್​ ಅವರನ್ನು ಸೆರೆಹಿಡಿದಿದ್ದ ಪಾಕ್​ ಬಳಿಕ ಅವರನ್ನು ನಡೆಸಿಕೊಂಡ ರೀತಿಯನ್ನು ಕ್ರಿಕೆಟ್​ಗೆ ತಳುಕು ಹಾಕಿ ಲೇವಡಿ ಮಾಡಿರುವುದು ಭಾರತೀಯರ ಅಸಮಾಧಾನಕ್ಕೆ ಕಾರಣವಾಗಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *