22 ಉಪನ್ಯಾಸಕರಿಗೆ ಕುತ್ತು?

| ದೇವರಾಜ್ ಎಲ್.

ಬೆಂಗಳೂರು: ಅರ್ಹತೆ ಇಲ್ಲದಿದ್ದರೂ ಕಾಯಂ ಉಪನ್ಯಾಸಕರಾಗಿ ಬಡ್ತಿ ಪಡೆದ ಅತಿಥಿ ಉಪನ್ಯಾಸಕರು ಇದೀಗ ಕೆಲಸ ಕಳೆದುಕೊಂಡು ವಿಶ್ವವಿದ್ಯಾಲಯಕ್ಕೆ ವೇತನ ಮರಳಿಸಬೇಕಾದ ಸ್ಥಿತಿಗೆ ತಲುಪಿದ್ದಾರೆ.

ಅಕ್ರಮವಾಗಿ ಕಾಯಂ ಮಾಡಿದ ತಪ್ಪಿಗೆ ಮೈಸೂರಿನ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್​ಒಯು)ಕ್ಕೆ 7 ಕೋಟಿ ರೂ. ನಷ್ಟ ಉಂಟಾಗಿದೆ. ಜತೆಗೆ ಅಕ್ರಮ ನೇಮಕಾತಿಯಲ್ಲಿ ಕಾಯಂ ಬಡ್ತಿ ಪಡೆದ ಉಪನ್ಯಾಸಕರಿಗೆ ಇದೀಗ ಆತಂಕ ಶುರುವಾಗಿದೆ.

22 ಅಭ್ಯರ್ಥಿಗಳು ಅತಿಥಿ ಉಪನ್ಯಾಸಕರಾಗಿ ನೇಮಕವಾಗಿ ಲಕ್ಷೋಪಲಕ್ಷ ರೂ. ಲಂಚ ನೀಡಿ ಹುದ್ದೆ ಕಾಯಂಗೊಳಿಸಿಕೊಂಡು ಎಲ್ಲ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಇದೀಗ ಅವರನ್ನು ಸೇವೆಯಿಂದ ವಿಮುಕ್ತಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಈ ನೋಟಿಸ್​ಗೆ ಉತ್ತರಿಸಲು 15 ದಿನಗಳ ಕಾಲಾವಕಾಶ ನೀಡಿದ್ದು, ಲಿಖಿತವಾಗಿ ಉತ್ತರ ಬರದಿದ್ದಲ್ಲಿ ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ಕೆಎಸ್​ಒಯು ಕುಲಸಚಿವರು ನೋಟಿಸ್​ನಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ.

ಏನಿದು ಪ್ರಕರಣ?: 28 ಅತಿಥಿ ಉಪನ್ಯಾಸಕರು ಕೆಎಸ್​ಒಯುನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹಣಕಾಸು ಮತ್ತು ವ್ಯವಸ್ಥಾಪನಾ ಮಂಡಳಿ ಅನುಮೋದನೆ ಮೇರೆಗೆ ರಚಿಸಲ್ಪಟ್ಟ ಪರಿನಿಯಮಾವಳಿ 2012ರ ಪ್ರಕಾರ ಇವರನ್ನು ಕಾಯಂಗೊಳಿಸಲಾಯಿತು. ವಿಶ್ವವಿದ್ಯಾಲಯ ಧನ ಸಹಾಯ ಆಯೋಗ(ಯುಜಿಸಿ) ವೇತನ ಶ್ರೇಣಿ ಪ್ರಕಾರ ಮಾಸಿಕ 60,700 ರೂ. ನಿಗದಿ ಮಾಡಿತ್ತು. ಈ ಸಂದರ್ಭ ಪ್ರೊ.ಕೆ.ಎಸ್. ರಂಗಪ್ಪ ಕೆಎಸ್​ಒಯು ಕುಲಪತಿಯಾಗಿದ್ದರು. ಕಾಯಮಾತಿಗಾಗಿ ಪ್ರತಿಯೊಬ್ಬರೂ ಲಕ್ಷೋಪಲಕ್ಷ ಲಂಚ ನೀಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ಆಗ ರಾಜ್ಯಪಾಲರು ನ್ಯಾ.ಕೆ. ಭಕ್ತವತ್ಸಲ ಅವರ ಏಕಸದಸ್ಯ ಸತ್ಯಶೋಧನಾ ಸಮಿತಿ ರಚಿಸಿ ವಿಚಾರಣೆಗೆ ಆದೇಶಿಸಿದ್ದರು. ಆರು ಜನರ ಹೊರತು ಪಡಿಸಿ 22 ಜನರು ಕಾಯಂ ಮಾಡಲು ಅನರ್ಹರು ಎಂದು ಅವರನ್ನು ಹುದ್ದೆಯಿಂದ ವಿಮುಕ್ತಿಗೊಳಿಸುವಂತೆ ವರದಿ ನೀಡಿತ್ತು. ಅನರ್ಹರಿಗೂ ಯುಜಿಸಿ ಶ್ರೇಣಿ ವೇತನ ನೀಡಿದ್ದನ್ನು ಭಾರತೀಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆ ಆಕ್ಷೇಪಣೆ ಸಲ್ಲಿಸಿತ್ತು. ಒಟ್ಟಾರೆ ಈ 22 ಉಪನ್ಯಾಸಕರಿಗೆ ವಿವಿ 7,37,23,082 ರೂ. ವೇತನವಾಗಿ ನೀಡಿದೆ.

ವ್ಯವಸ್ಥಾಪನಾ ಮಂಡಳಿ ನಿರ್ಧಾರ

2018ರಲ್ಲೇ ರಾಜ್ಯಪಾಲರು ಭಕ್ತವತ್ಸಲ ವರದಿಯ ಆಧಾರದ ಮೇಲೆ ಅನರ್ಹರನ್ನು ವಿಮುಕ್ತಿಗೊಳಿಸುವಂತೆ ಸೂಚನೆ ನೀಡಿದ್ದರು. ಎರಡು ಬಾರಿ ಸೂಚನೆ ನೀಡಿದರೂ ವಿಮುಕ್ತಿಗೊಳಿಸುವಲ್ಲಿ ವಿವಿ ಸೋತಿತ್ತು. ಬಳಿಕ ಕಾನೂನು ಸಲಹೆ ಕೇಳಿದ ವಿವಿಗೆ, ಅನರ್ಹರನ್ನು ಆಯ್ಕೆ ಮಾಡಿರುವುದು ಕಾನೂನಿಗೆ ವಿರುದ್ಧ ಎಂದು ಕಾನೂನು ಸಲಹೆಗಾರರು ಅಭಿಪ್ರಾಯ ನೀಡಿದ್ದರು. ಈ ಎಲ್ಲ ಆಧಾರದ ಮೇಲೆ 151ನೇ ವ್ಯವಸ್ಥಾಪನಾ ಆಡಳಿತ ಸಭೆಯಲ್ಲಿ ವಿಷಯ ಮಂಡನೆ ಮಾಡಿ ಶೋಕಾಸ್ ನೋಟಿಸ್ ನೀಡಿ ಅವರಿಂದ ಉತ್ತರ ಪಡೆದು ಮುಂದಿನ ಕ್ರಮ ಜರುಗಿಸಲು ವಿವಿ ನಿರ್ಧರಿಸಿದೆ.

ವೆಬ್​ಸೈಟ್​ನಲ್ಲಿ ಶುಲ್ಕ ವಿವರ ಕಡ್ಡಾಯ

ಖಾಸಗಿ ಶಾಲೆಗಳು ಪ್ರವೇಶ ಶುಲ್ಕವನ್ನು ಇನ್ನು ಮುಂದೆ ಶಾಲಾ ವೆಬ್​ಸೈಟ್​ನಲ್ಲಿ ಪ್ರಕಟಿಸುವುದು ಕಡ್ಡಾಯ. ಖಾಸಗಿ ಶಾಲೆಗಳು ಮನಸೋಇಚ್ಛೆ ಶುಲ್ಕ ನಿಗದಿ ಮಾಡಿಕೊಂಡು ಪಾಲಕರಿಂದ ಹಣ ವಸೂಲಿಗೆ ಮುಂದಾಗಿವೆ ಎಂಬ ಆರೋಪ ಕೇಳಿ ಬಂದಿದ್ದರಿಂದ ಶುಲ್ಕದ ಮಾಹಿತಿ ಶಾಲಾ ವೆಬ್​ಸೈಟ್​ನಲ್ಲಿ ಪ್ರಕಟಿಸುವುದನ್ನು ಕಡ್ಡಾಯ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಲು ತೀರ್ವನಿಸಿದೆ. ಹೀಗಾಗಿ ಶುಲ್ಕದ ಸಂಪೂರ್ಣ ಮಾಹಿತಿ ಪಡೆದ ನಂತರವೇ ಪಾಲಕರು ತಮ್ಮ ಅನುಕೂಲಕ್ಕೆ ತಕ್ಕ ಶಾಲೆ ಆಯ್ಕೆ ಮಾಡಿಕೊಂಡು ಮಕ್ಕಳನ್ನು ಸೇರಿಸಬಹುದು. ಇದು 2019-20ನೇ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿದೆ. ಶುಲ್ಕದ ವಿವರ ಮಾಹಿತಿ ಫಲಕದಲ್ಲಿ ಪ್ರಕಟಿಸದ ಶಾಲೆಗಳ ಬಗ್ಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಜ. 23ರೊಳಗೆ ಅಳವಡಿಸುವಂತೆ ಡೆಡ್​ಲೈನ್ ನಿಗದಿ ಪಡಿಸಿ ಅರ್ಜಿ ವಿಚಾರಣೆ ಮುಂದೂಡಿದೆ.

ರಾಜ್ಯದಲ್ಲಿ ಒಟ್ಟು 16,737 ಶಾಲೆಗಳಿದ್ದು, ಆ ಪೈಕಿ 2,129 ಶಾಲೆಗಳಲ್ಲಿ ಇನ್ನೂ ಫಲಕ ಅಳವಡಿಸಿಲ್ಲ. ಶಾಲಾ ಆಡಳಿತ ಮಂಡಳಿ ಶುಲ್ಕದ ಮಾಹಿತಿಯನ್ನು ಮುಖಪುಟದಲ್ಲೇ ಪ್ರಕಟಿಸಬೇಕಿದೆ. ಜತೆಗೆ ಶಿಕ್ಷಕರ ಮಾಹಿತಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ 3 ವರ್ಷದ ಫಲಿತಾಂಶ ಪ್ರಕಟಿಸಬೇಕಿದೆ.

ಬಡ್ಡಿ ಸಹಿತ ಹೆಚ್ಚುವರಿ ಶುಲ್ಕ ಕೊಡಿ

ವೃತ್ತಿಪರ ಕೋರ್ಸ್​ಗಳ ಪ್ರವೇಶಕ್ಕಾಗಿ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ಪಡೆದಿದ್ದ ಕಾಲೇಜುಗಳು ಇದೀಗ ವಿದ್ಯಾರ್ಥಿಗಳಿಗೆ ಶೇ.6 ಬಡ್ಡಿ ಸಮೇತ ಹಣ ಹಿಂದಿರುಗಿಸಬೇಕಾಗಿದೆ. ಈ ಬಗ್ಗೆ ಹೆಚ್ಚುವರಿ ಶುಲ್ಕ ಪಡೆದ ಕಾಲೇಜುಗಳಿಗೆ ಪ್ರವೇಶ ಮೇಲ್ವಿಚಾರಣಾ ಸಮಿತಿ ಅಧ್ಯಕ್ಷ ನ್ಯಾ.ಬಿ. ಮನೋಹರ್ ನೋಟಿಸ್ ಜಾರಿ ಮಾಡಿ, ರಾಜ್ಯ ಸರ್ಕಾರಕ್ಕೂ ವರದಿ ಸಲ್ಲಿಸಿದ್ದಾರೆ. ಪ್ರವೇಶ ಮೇಲ್ವಿಚಾರಣಾ ಸಮಿತಿ ಅಧ್ಯಕ್ಷರಾಗಿದ್ದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆನಂದ್ ಭೈರಾರೆಡ್ಡಿ ಶೇ.18ರ ಬಡ್ಡಿ ಸಹಿತ ಶುಲ್ಕವನ್ನು 1 ತಿಂಗಳೊಳಗೆ ಹಿಂದಿರುಗಿಸಬೇಕೆಂದು ರಾಜ್ಯ ಸರ್ಕಾರಕ್ಕೆ 2017 ಸೆಪ್ಟೆಂಬರ್​ನಲ್ಲಿ ವರದಿ ನೀಡಿದ್ದರು. ಅದು ಧೂಳು ಹಿಡಿಯುತ್ತಿರುವ ಮಧ್ಯೆ ಮನೋಹರ್ ಕೂಡ ಮತ್ತೆ ಸರ್ಕಾರಕ್ಕೆ ವರದಿ ನೀಡಿದ್ದಾರೆ.

ಪ್ರತಿಷ್ಠಿತ 2 ವೈದ್ಯಕೀಯ ಕಾಲೇಜುಗಳು ವಿದ್ಯಾರ್ಥಿಯಿಂದ ಶುಲ್ಕದ ಹೊರತಾಗಿ ಹೆಚ್ಚುವರಿ 40ರಿಂದ 80 ಸಾವಿರ ರೂ. ವರೆಗೆ ಪಾವತಿಸುವಂತೆ ಸೂಚಿಸಿದ್ದವು. ಇದನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಪ್ರವೇಶ ಮೇಲ್ವಿಚಾರಣಾ ಸಮಿತಿಗೆ ದೂರು ನೀಡಿದ್ದರು. ದೂರಿನನ್ವಯ ಕಾಲೇಜುಗಳಿಗೆ ನೋಟಿಸ್ ನೀಡಲಾಗಿತ್ತು.