More

    TV ಮನೆ ಕತೆ|ಕಿರುತೆರೆಯೊಳಗೆ ಬರುವುದು ಹೇಗೆ?

    TV ಮನೆ ಕತೆ|ಕಿರುತೆರೆಯೊಳಗೆ ಬರುವುದು ಹೇಗೆ?

    ಧಾರಾವಾಹಿ ಜಗತ್ತಿಗೆ ಬರಲಿಚ್ಛಿಸುವ ಎಷ್ಟೋ ಮಂದಿ ನನ್ನನ್ನು ಕೇಳುತ್ತಾರೆ. ಹೇಗೆ ಬರೋದು? ಹೇಗೆ ಅವಕಾಶ ಪಡೆಯೋದು?  ಧಾರಾವಾಹಿಗಳಲ್ಲಿ ನಟನೆಯನ್ನು ವೃತ್ತಿಯಾಗಿ ಸ್ವೀಕರಿಸಬೇಕೆಂದರೆ ಹೇಗೆ? ಇತ್ಯಾದಿ. ಬಹಳಷ್ಟು ಮಂದಿಗೆ ಈ ಜಗತ್ತಿನ ಗಂಧ ಗಾಳಿ ಗೊತ್ತಿರುವುದಿಲ್ಲ. ಆದರೆ ನಟಿಸಬೇಕೆಂಬ ಆಸೆ ಇರುತ್ತದೆ. ಒಂದು ಕೈ ನೋಡೋಣ ಎಂಬ ಕುತೂಹಲವಿರುತ್ತದೆ.

    ಕಳೆದ ಒಂದು ದಶಕದಿಂದ ಧಾರಾವಾಹಿ ಜಗತ್ತು ಜನಸಾಮಾನ್ಯರಿಗೆ ಬಹಳ ಹತ್ತಿರ ಬಂದಿದೆ. ಸಾಮಾಜಿಕ ಜಾಲತಾಣಗಳು ಒಂದು ಕಾರಣವಾದರೆ, ಇದ್ದಕ್ಕಿದ್ದಂತೆ ಏರಿದ ಕಿರುತೆರೆಯ ಜನಪ್ರಿಯತೆ, ಅದರನುಸಾರ ಗಣನೀಯವಾಗಿ ಏರಿದ ವಾಹಿನಿಗಳ ಮತ್ತು ಧಾರಾವಾಹಿಗಳ ಸಂಖ್ಯೆ ಮತ್ತೊಂದು ಕಾರಣ. ಇಂದು ಧಾರಾವಾಹಿ ಜಗತ್ತಿನೊಳಗಡಿಯಿಡುವುದು ಮುಂಚಿನಷ್ಟು ಕಷ್ಟವಲ್ಲ.

    ನಟನೆ, ಭಾಷೆ ಮೊದಲಾದವುಗಳ ಬಗ್ಗೆ ಮತ್ತೊಮ್ಮೆ ಮಾತಾಡೋಣ. ಇಂದು ಮೊಟ್ಟ ಮೊದಲ ಅವಕಾಶವನ್ನು ಪಡೆಯಬೇಕೆಂದರೆ ಮಾಡಿಟ್ಟುಕೊಳ್ಳಬೇಕಾದ ತಯಾರಿಗಳು ಏನೆಂದು ನೋಡೋಣ. ನೀವು ಧಾರಾವಾಹಿಗಳಲ್ಲಿ ನಟಿಸಬೇಕೆಂದರೆ ಮೊದಲು ನಿಮ್ಮ ಅಚ್ಚುಕಟ್ಟಾದ ಕೆಲವು ಫೋಟೋಗಳನ್ನು ತಯಾರಿಟ್ಟುಕೊಳ್ಳಬೇಕು. ನಿಮ್ಮ ಎತ್ತರ ದಪ್ಪ ತಿಳಿಯುವಂಥ ಫುಲ್ ಪೊ›ಫೈಲ್ ಫೋಟೋಗಳು ಒಂದೆರೆಡು, ಅರ್ಧ ಅಂದರೆ ಎದೆಯಿಂದ ಮೇಲೆ, ಮುಖ ಸ್ಪಷ್ಟವಾಗಿ ಕಾಣುವಂಥ ಚಿತ್ರಗಳು ಕೆಲವು ತೆಗೆಸಿ ತಯಾರಾಗಿಟ್ಟುಕೊಂಡಿರಬೇಕು. ಸುಂದರವಾದ ಚಿತ್ರಗಳಿರಲಿ, ಆದರೆ ಸ್ಟುಡಿಯೋದಲ್ಲಿ ವಿಶೇಷ ಎಫೆಕ್ಟ್ ಗಳನ್ನು ಹಾಕಿ ಇನ್ನಷ್ಟು ಬೆಳ್ಳಗೋ, ತಲೆಯ ಮೇಲೆ ಇನ್ನಷ್ಟು ಕೂದಲಿರುವಂತೆಯೋ ಎಲ್ಲಾ ಮಾಡುತ್ತಾರೆ. ಅಂಥಾ ಯಾವ ಎಫೆಕ್ಟ್​ಗಳೂ ಮಾಡಿಸದೇ ಒಳ್ಳೆಯ ಹಿನ್ನೆಲೆಯಲ್ಲಿ ಇರುವ ಚಿತ್ರಗಳಾಗಿರಬೇಕು. ಮನೆಯಲ್ಲಿ ಅಡುಗೆ ಮನೆ ಮುಂದೆ, ಹಿತ್ತಿಲಲ್ಲಿ ಹೀಗೆ ತೆಗೆದ ಚಿತ್ರಗಳನ್ನು ಆದಷ್ಟು ಕಳಿಸದಿರುವುದೇ ಒಳ್ಳೆಯದು. ಮನೆಯಲ್ಲೇ ತೆಗೆಯುವುದೇ ಆದರೆ ಸೀದಾ ಸಾದಾ ಗೋಡೆಯ ಮುಂದೆ ನಿಂತು ತೆಗೆಸಿಕೊಳ್ಳುವುದು ಒಳ್ಳೆಯದು. ಚಿತ್ರಗಳಲ್ಲಿ ಆಧುನಿಕ, ಪಾಶ್ಚಾತ್ಯ ಮಾದರಿಯ ಬಟ್ಟೆಗಳನ್ನೂ ಮತ್ತು ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿದಂಥವು ಎರಡೂ ಇರಲಿ. ಇಂಥ ಚಿತ್ರಗಳು ನಿಮ್ಮ ನಿಮ್ಮ ಮೊಬೈಲುಗಳಲ್ಲಿ ಸದಾ ಸಿದ್ಧವಿರಬೇಕು. ಆದರೆ ಒಂದು ವಿಷಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾರಾದರೂ ನಿಮ್ಮ ಫೋಟೋಸ್ ಕಳಿಸಿ ಎಂದರೆ ಐದು ಅಥವಾ ಹೆಚ್ಚೆಂದರೆ ಆರು ಫೋಟೋಗಳನ್ನು ಕಳಿಸಬೇಕು. (ಅರವತ್ತನ್ನಲ್ಲ!)

    ನಟರಾಗ ಬಯಸುವವರು ಆದಷ್ಟೂ ಹಚ್ಚೆಗಳನ್ನು/ ಟ್ಯಾಟೂಗಳನ್ನು ಹಾಕಿಸಿಕೊಳ್ಳದಿರುವುದು ಸುರಕ್ಷಿತ. ಚಿಕ್ಕ ಪುಟ್ಟದ್ದಾದರೆ ಪರವಾಗಿಲ್ಲ. ದೊಡ್ಡ ದೊಡ್ಡ ಟ್ಯಾಟೂಗಳು ಕಣ್ಣಿಗೆ ಕಾಣುವಂಥ ಭಾಗಗಳಲ್ಲಿ ಅಂದರೆ ತೋಳಿನ ಮೇಲೆ ಬೆನ್ನಿನ ಮೇಲೆ, ಕತ್ತಿನ ಮೇಲೆ ಮುಂತಾದಲ್ಲಿ ಹಾಕಿಸಿಕೊಳ್ಳದಿರುವುದು ಒಳ್ಳೆಯದು. ಈ ಟ್ಯಾಟೂಗಳು ಎಲ್ಲ ಬಗೆಯ ಪಾತ್ರಗಳಿಗೂ ಹೊಂದುವುದಿಲ್ಲ. ಮೇಕಪ್​ನಿಂದ ದೊಡ್ಡ ದೊಡ್ಡ ಟ್ಯಾಟೂಗಳನ್ನು ಪ್ರತೀ ಬಾರಿಯೂ ಕವರ್ ಮಾಡುವುದು ತಲೆನೋವಿನ ಮತ್ತು ಸಮಯ ತಿನ್ನುವ ಕೆಲಸ. ಕೇವಲ ಅವುಗಳ ದೆಸೆಯಿಂದ ಬರಬಹುದಾದ ಅವಕಾಶ ತಪ್ಪಿ ಹೋಗಬಾರದು.

    ಹೆಣ್ಣು ಮಕ್ಕಳು ತೀರಾ ಚಿಕ್ಕದಾಗಿ ಕೂದಲು ಕತ್ತರಿಸಿಕೊಳ್ಳದೇ ಇರುವುದು ಒಳ್ಳೆಯದು. ಆಧುನಿಕ ಪಾತ್ರಗಳಿಗೂ ಒಪ್ಪುವಂಥ, ಹಾಗೆಯೇ ಸಾಂಪ್ರದಾಯಿಕವಾದ ಕೇಶವಿನ್ಯಾಸವೂ ಸಾಧ್ಯವಾಗುವಷ್ಟು ಉದ್ದ ಕೂದಲಿರುವಂತೆ ನೋಡಿಕೊಂಡರೆ ಉತ್ತಮ. ಗಂಡಸರೂ ಕೂಡಾ, ಉದ್ದ ಕೂದಲು ಬಿಟ್ಟು ಒಂದು ಜುಟ್ಟು ಕಟ್ಟಿಕೊಂಡಿರುವುದು, ತಲೆಯ ಮೇಲೆ ನಾಲ್ಕಿಂಚು ಹರಡುವಂತೆ ಗುಂಗುರು ಕೂದಲು ಇಟ್ಟುಕೊಂಡಿರುವುದು, ತುಂಬು ಮೀಸೆ ಗಡ್ಡ ಇಂಥವೆಲ್ಲದರ ಬಗ್ಗೆ ಎಚ್ಚರವಿರಬೇಕು. ಒಮ್ಮೊಮ್ಮೆ ಇವೇ ವಿಭಿನ್ನ ಲುಕ್​ಗಳಿಂದ ಅವಕಾಶಗಳು ಬರುತ್ತವೆ. ಇಲ್ಲವೆನ್ನುವುದಿಲ್ಲ. ಆದರೆ ಆ ಲುಕ್​ನಿಂದ ಯಾವ ರೀತಿಯ ಪಾತ್ರಕ್ಕೆ ಅವಕಾಶ ಬಂತೋ ಅವೇ ಪಾತ್ರಗಳು ಮುಂದಿಡೀ ವೃತ್ತಿ ಜೀವನದಲ್ಲಿ ಮಾಡಬೇಕಾಗಿಬಿಡುವ ಅಪಾಯವೂ ಇದೆ. ನಿಮ್ಮ ಶಕ್ತಿ ನಿಮ್ಮ ಲುಕ್ ನಿಮಗೆ ಕೊಡಿಸುವ ಪಾತ್ರದ್ದಲ್ಲದೇ ಇರಬಹುದು! ಒಟ್ಟಾರೆ ಹೇಳಬೇಕೆಂದರೆ ಎಲ್ಲರೊಳಗೊಂದಾಗಿಯೂ ಕಾಣಬಲ್ಲ ಹಾಗೆಯೇ ಅಗತ್ಯ ಬಿದ್ದರೆ ಎಲ್ಲರಿಗಿಂತ ಭಿನ್ನವಾಗಿಯೂ ಕಾಣಬಲ್ಲ ಫ್ಲೆಕ್ಸಿಬಿಲಿಟಿ ಇರುವಂತೆ ನಮ್ಮ ಹೊರನೋಟವನ್ನು ಇಟ್ಟುಕೊಂಡಿರಬೇಕಾದ್ದು ಮುಖ್ಯ.

    ಫೇಸ್​ಬುಕ್, ಇನ್ಸಾ ್ಟಗ್ರಾಂಗಳಲ್ಲಿ ಎಲ್ಲ ವಾಹಿನಿಗಳ ಅಧಿಕೃತ ಪೇಜ್​ಗಳಿರುತ್ತವೆ. ಅವುಗಳನ್ನು ನಿರಂತರವಾಗಿ ಗಮನಿಸುತ್ತಿರಬೇಕು. ತಮ್ಮ ಹೊಸ ಹೊಸ ಧಾರಾವಾಹಿಗಳಿಗೆ ನಟನಟಿಯರ ಅಗತ್ಯಗಳನ್ನು ಹಾಕುತ್ತಾರೆ. ನಮಗೆ ಹೊಂದುವಂಥ ಪಾತ್ರಗಳಿದ್ದರೆ ಅವರನ್ನು ಸಂರ್ಪಸುವ ವಿಧಾನವನ್ನೂ ಅಲ್ಲಿ ತಿಳಿಸಿರುತ್ತಾರೆ. ಅದರಂತೆ ನಡೆದರೆ ಆಯಿತು. ಈ ದಿಸೆಯಲ್ಲಿ ವಾಹಿನಿಗಳ ವೆಬ್​ಸೈಟ್​ಗಳು, ಟಿವಿಯಲ್ಲಿ ಪ್ರಸಾರವಾಗುವ ಆಡಿಷನ್ ಕರೆಗಳು ಕೂಡಾ ಸಹಾಯ ಮಾಡುತ್ತವೆ.

    ಬಹಳ ಜನ ನಟನೆಯಲ್ಲಿ ನಿಮಗೆ ಅನುಭವವಿದೆಯೇ ಎಂದು ಕೇಳಿದರೆ ತಾವು ಬೇಕಾದಷ್ಟು ‘ಟಿಕ್ ಟಾಕ್’ಗಳನ್ನೋ, ‘ಡಬ್ ಸ್ಮಾ್ಯಷ್’ಗಳನ್ನೋ ಮಾಡಿದ್ದೀವೆಂದು ಹೇಳುತ್ತಾರೆ. ಕ್ಷಮಿಸಿ. ಅವುಗಳು ನಟನೆಯಲ್ಲ. ಅವು ನಟನೆಯ ಯಾವ ಅನುಭವವನ್ನೂ ಕೊಡಲಾರವು. ರೂಮಿನೊಳಗೆ ನಮ್ಮ ಮುಂದೆ ನಾವೇ ಕ್ಯಾಮೆರಾ ಹಿಡಿದು, ಇನ್ಯಾರದೋ ಧ್ವನಿಗೆ ಮುಖ ಸೇರಿಸುವುದಕ್ಕೂ, ಸೆಟ್​ನಲ್ಲಿ ಮೂವತ್ತು ಜನರ ಮುಂದೆ, ಕ್ಯಾಮೆರಾ ಎದುರು, ಝುಗಮಗಿಸುವ ಬೆಳಕಿನಲ್ಲಿ ಇಲ್ಲಿಯವರೆಗೂ ಯಾರೂ ಹೇಳದ ಡೈಲಾಗನ್ನು ಭಾವ ತುಂಬಿ ಗೋಡೆಯನ್ನೋ, ಹೂದಾನಿಯನ್ನೋ ನೋಡಿಕೊಂಡೋ ಅಥವಾ ಅಪರಿಚಿತರೊಬ್ಬರ ಕಣ್ಣಲ್ಲಿ ಕಣ್ಣಿಟ್ಟು ಹೇಳುವುದೇ ಬೇರೆ. ಎರಡಕ್ಕೂ ಬೇಕಾಗುವ ಸ್ಕಿಲ್​ಗಳು ಬಹಳ ಭಿನ್ನ. ನಟನೆಯ ಆಪ್ತ ಮಿತ್ರ ಕನ್ನಡಿ. ಆ ಪಟ್ಟಿಗೆ ಹೊಸ

    ಸೇರ್ಪಡೆ ಮೊಬೈಲ್​ನ ವೀಡಿಯೋ ಚಿತ್ರೀಕರಣ. ನಮ್ಮನ್ನು ನಾವೇ ನೋಡಿಕೊಂಡು ತಿದ್ದಿಕೊಳ್ಳುವ ಬಹು ಸುಲಭ ಉಪಾಯಗಳು ಇವು.

    ನಟನೆಯ ಅನುಭವವನ್ನು ಎಲ್ಲರೂ ಪಡೆದಿರಲು ಸಾಧ್ಯವಿಲ್ಲ ನಿಜ. ಆದರೆ ಮಾತುಗಳನ್ನು ನೆನಪಿಟ್ಟುಕೊಳ್ಳುವ ಶಕ್ತಿಯಂತೂ ಇಲ್ಲಿ ಬಹಳ ಮುಖ್ಯ. ಒಂದೇ ಸಾಲನ್ನು ಹತ್ತು ಬಾರಿ ಚಿತ್ರೀಕರಿಸುತ್ತಾ ಕೂರುವ ವ್ಯವಧಾನ ನಿರ್ದೇಶಕರಿಂದ ಹಿಡಿದು ವಾಹಿನಿಯವರೆಗೆ ಯಾರಲ್ಲೂ ಇರುವುದಿಲ್ಲ. ಮತ್ತು ಮಾತುಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ವಿಧಾನ ಪ್ರತಿಯೊಬ್ಬರದೂ ವಿಭಿನ್ನ. ಆದ್ದರಿಂದ ಯಾವುದೇ ಸಾಹಿತ್ಯವನ್ನು ಓದಿ ನೆನಪಿನಿಂದ ಅದನ್ನು ಪುನರಾವರ್ತಿಸಿ ನಮ್ಮದೇ ಆದ ನೆನಪಿಟ್ಟುಕೊಳ್ಳುವ ವಿಧಾನವನ್ನು ಕಂಡುಕೊಂಡಿದ್ದರೆ ಬಹಳ ಅನುಕೂಲವಾಗುತ್ತದೆ.

    ‘ಕರ್ಮಣ್ಯೇವಾಧಿಕಾರಸ್ತೇ, ಮಾ ಫಲೇಷು ಕದಾಚನ’ ಎಂದು ಕೃಷ್ಣ ಗೀತೆಯಲ್ಲಿ ಹೇಳುತ್ತಾನೆ. ಕೆಲಸ ಮಾಡುವುದು ನಮ್ಮ ಕರ್ತವ್ಯ. ಫಲಾಫಲಗಳು ಕಾಣದ ಕೈಗೆ ಬಿಟ್ಟದ್ದು. ನಮ್ಮ ಕಡೆಯಿಂದ ನಮ್ಮ ತಯಾರಿಗಳನ್ನು ಮಾಡಿಟ್ಟುಕೊಳ್ಳೋಣ. ಆ ‘ಮೊದಲ’ ಅವಕಾಶವನ್ನು ದಕ್ಕಿಸಿಕೊಳ್ಳುವ ಹಾದಿಯ ತಯಾರಿಗಳು ಇವು. ಶ್ರದ್ಧೆ, ಪರಿಶ್ರಮ ದಕ್ಕಿಸಿಕೊಡಲಾಗದ್ದು ಈ ಲೋಕದಲ್ಲಿ ಏನೂ ಇಲ್ಲ.

    (ಲೇಖಕರು ಸಿನಿಮಾ, ಕಿರುತೆರೆ, ರಂಗಭೂಮಿ ಕಲಾವಿದೆ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts