ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಆನ್ಲೈನ್ ಗೇಮ್ ಆಡುತ್ತಾ ಜನ ಮೊದಲು ಟೈಮ್ಪಾಸ್ ಮಾಡುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಆನ್ಲೈನ್ ಗೇಮ್ಗಳೂ ವಂಚಕ ದಂಧೆಗಳಾಗಿ ಬದಲಾಗಿವೆ. ಆನ್ಲೈನ್ ಗೇಮ್ಗಳು ಈಗಿನ ಯುವಜನತೆಯನ್ನು ಹೇಗೆ ಹಾಳು ಮಾಡುತ್ತಿವೆ? ಅದರಿಂದ ಏನೆಲ್ಲಾ ಅನಾಹುತಗಳಾಗುತ್ತಿವೆ ಎಂಬುದರ ಬಗ್ಗೆಯೇ ‘ರಮ್ಮಿ ಆಟ‘ ಎಂಬ ಸಿನಿಮಾ ಮೂಡಿಬಂದಿದ್ದು, ನಾಳೆ ರಾಜ್ಯಾದ್ಯಂತ ತೆರೆಗೆ ಬರಲಿದೆ.
ಉಮರ್ ಷರೀಫ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಬರೆದು ನಿರ್ದೇಶಿಸಿ, ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ‘ರಮ್ಮಿ ಆಟದ ಚಟಕ್ಕೆ ಕೆಲವರು ತಮ್ಮ ಮನೆ, ಮಠ ಕಳೆದುಕೊಂಡು ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ. ಹಣದಾಸೆಗೆ ಬಿದ್ದು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಆನ್ಲೈನ್ ರಮ್ಮಿ ಆಡುವುದರಿಂದ ಏನೇನು ತೊಂದರೆಗಳಾಗುತ್ತವೆ? ಜನ ಹೇಗೆಲ್ಲ ಮೋಸ ಹೋಗುತ್ತಿದ್ದಾರೆ? ಎಂಬುದರ ಕುರಿತ ಚಿತ್ರವಿದು. ಸಂಭಾಷಣೆಯೇ ನಮ್ಮ ಚಿತ್ರದ ಹೀರೋ‘ ಎಂದು ಮಾಹಿತಿ ನೀಡುತ್ತಾರವರು.
ನಿರೂಪಕ ರಾಘವ್ ಸೂರ್ಯ ಚೊಚ್ಚಲ ಬಾರಿಗೆ ನಾಯಕನಾಗಿ ನಟಿಸಿರುವ ಬಗ್ಗೆ ಅನುಭವ ಹಂಚಿಕೊಂಡರು. ಅವರಿಗೆ ಮಂಗಳೂರು ಮೂಲದ ವಿನ್ಯಾ ಶೆಟ್ಟಿ ನಾಯಕಿಯಾಗಿದ್ದು, ಅವರು ಗೌರಿ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಸೈಯದ್ ಇರ್ಫಾನ್, ಸ್ನೇಹಾ ರಾವ್, ನಂದಿನಿ ಗೌಡ, ಅಭಿ ಗೌಡ, ಶ್ರೀಕರ್ ರೋಷನ್, ಪಾವನಾ, ಗಿರೀಶ್ ತಾರಾಗಣದಲ್ಲಿದ್ದಾರೆ.