More

    ಅಪಾಯದ ಮಟ್ಟದಲ್ಲಿ ಹರಿಯುವ ತುಂಗಭದ್ರಾ; ಹೊನ್ನಾಳಿಯಲ್ಲಿ 20 ಕುಟುಂಬಗಳು ಸುರಕ್ಷಿತ ಸ್ಥಳಕ್ಕೆ, ಕಾಳಜಿ ಕೇಂದ್ರದಲ್ಲಿ 110 ಜನಕ್ಕೆ ಆಶ್ರಯ

    ಹೊನ್ನಾಳಿ: ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದರಿಂದ ತುಂಗಭದ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಹೀಗಾಗಿ ಪಟ್ಟಣದ 20 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

    ಪಟ್ಟಣದ ಬಾಲ್‌ರಜ್‌ಘಾಟ್ ಪಕ್ಕದಲ್ಲೇ ಇರುವ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಕಾಳಜಿ ಕೇಂದ್ರ ಸ್ಥಾಪಿಸಿದ್ದು, ಇಲ್ಲಿಗೆ 20 ಕುಟುಂಬಗಳ ಸುಮಾರು 110 ಜನರಿಗೆ ಆಶ್ರಯ ನೀಡಲಾಗಿದೆ ಎಂದು ತಹಸೀಲ್ದಾರ್ ರಶ್ಮಿ ವಿಜಯವಾಣಿಗೆ ತಿಳಿಸಿದ್ದಾರೆ.

    ಬಾಲ್‌ರಾಜ್ ಘಾಟ್‌ನ ಸುಮಾರು 20 ಮನೆಗಳಿಗೆ ನೀರು ನುಗ್ಗಿದೆ. ಎಡಬಿಡದೆ ಮಳೆ ಸುರಿಯುತ್ತಿದ್ದರಿಂದ ನದಿ ನೀರಿನ ಮಟ್ಟ ಮೂರನೇ ಬಾರಿ ಅಪಾಯದಮಟ್ಟ ತಲುಪುತ್ತಿದೆ. ಹೊನ್ನಾಳಿ, ನ್ಯಾಮತಿ ಮತ್ತು ಸಾಸ್ವೆಹಳ್ಳಿ ಭಾಗದಲ್ಲಿ ಎಲ್ಲಿ ನೋಡಿದರೂ ನೀರೇ ನೀರು ಸದೃಶ್ಯವಾಗುತ್ತಿದೆ.

    ತುಂಬಿದ ತುಂಗಭದ್ರೆ: ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಹಾಗೂ ದಾವಣಗೆರೆ ಜಿಲ್ಲೆಯ ಹೊನ್ನಾಳಿ, ನ್ಯಾಮತಿ ತಾಲೂಕಿನಾದ್ಯಂತ ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಣಾಮ ನದಿ ನೀರಿನ ಮಟ್ಟ ಹೆಚ್ಚುತ್ತಲೇ ಇದೆ.

    ತುಂಗಾದಿಂದ 45 ಸಾವಿರ ಕ್ಯೂಸೆಕ್ ಹಾಗೂ ಭದ್ರಾದಿಂದ 55 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಹೀಗಾಗಿ ತುಂಗಭದ್ರಾದಿಂದ ಹೊರ ಹರಿವು ಹೆಚ್ಚಾಗಿದೆ. ಹೊನ್ನಾಳಿ, ನ್ಯಾಮತಿ ತಾಲೂಕುಗಳ ನದಿಪಾತ್ರದ ಗ್ರಾಮಸ್ಥರಿಗೆ ಟಾಂ ಟಾಂ ಹೊಡೆಸಿ ಯಾರೂ ನದಿಯಲ್ಲಿ ಇಳಿಯದಂತೆ ಎಚ್ಚರಿಕೆ ನೀಡಿದ್ದೇವೆ ಎಂದು ತಾಪಂ ಇಒ ರಾಮಬೋವಿ ತಿಳಿಸಿದರು.

    ಜನತೆ ಜರ್ಜರಿತ:
    ಹೊನ್ನಾಳಿ, ನ್ಯಾಮತಿ ತಾಲೂಕಿನಲ್ಲಿ ಧಾರಾಕಾರ ಮಳೆಯಿಂದಾಗಿ ಜನತೆ ಜರ್ಜರಿತರಾಗಿದ್ದಾರೆ. ಮನೆಗಳು ಯಾವಾಗ ಬೀಳುತ್ತವೋ? ಎಂಬ ಆತಂಕ ಒಂದೆಡೆಯಾದರೆ, ಸಾಲ ಮಾಡಿ ಬಿತ್ತನೆ ಮಾಡಿದ ಬೆಳೆ ಜಲಾವೃತ ಆಗಿರುವುದು ರೈತರನ್ನು ಕಂಗೆಡಿಸಿದೆ. ಈ ಮಧ್ಯೆ ಶಾಸಕ ಎಂ.ಪಿ.ರೇಣುಕಾಚಾರ್ಯ ಕ್ಷೇತ್ರದಲ್ಲಿ ಸುತ್ತಾಡಿ ಸಂತ್ರಸ್ತರಿಗೆ ಆತ್ಮಸ್ಥೈರ್ಯ ತುಂಬುವ ಜತೆಗೆ ಅಧಿಕಾರಿಗಳಿಗೆ ಸಲಹೆ, ಸೂಚನೆ, ನಿರ್ದೇಶನ ನೀಡುತ್ತ ಅತಿವೃಷ್ಟಿ ನಿಭಾಯಿಸುವಲ್ಲಿ ಮುಂಚೂಣಿ ವಹಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts