ಮುಂಡರಗಿ: ಕಳೆದ ವರ್ಷದ ಸೆಪ್ಟೆಂಬರ್ ಹಾಗೂ ಅಕ್ಟೋಬರ್ನಲ್ಲಿ ಸುರಿದ ಭಾರಿ ಮಳೆಗೆ ಹಾಗೂ ತುಂಗಭದ್ರಾ ನದಿಯ ಪ್ರವಾಹದಿಂದ ತಾಲೂಕಿನ ಹಲವಾರು ಗ್ರಾಮಗಳ ಜನ ಅಕ್ಷರಶ ನಲುಗಿದ್ದಾರೆ. ನೂರಾರು ಎಕರೆಯ ಬೆಳೆ ನಾಶವಾಗಿದ್ದಲ್ಲದೆ ಹಲವಾರು ಮನೆಗಳು ಕುಸಿದುಬಿದ್ದು ಸಂಕಷ್ಟ ಅನುಭವಿಸಿದ್ದಾರೆ. ಆದರೆ, ಕುಸಿದ ಮನೆಗಳನ್ನು ದುರಸ್ತಿ ಮಾಡಿಸಿಕೊಳ್ಳಲು ಹಣವಿಲ್ಲದೆ ಹೆಣಗಾಡುತ್ತಿದ್ದಾರೆ.
ಹಾನಿಯಾದ ಮನೆಗಳಿಗೆ ಸರ್ಕಾರ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್ಡಿಆರ್ಎಫ್) ಪ್ರತಿ ಮನೆಗೆ 3,200 ರೂ. ಪರಿಹಾರ ನೀಡಿ ಕೈ ತೊಳೆದುಕೊಂಡಿದೆಯೇ ಹೊರತು ಬೇರಾವುದೇ ರೀತಿಯ ಸಹಾಯಕ್ಕೆ ಬಂದಿಲ್ಲ. ನಿರಂತರವಾಗಿ ಸುರಿದ ಭಾರಿ ಮಳೆಯಿಂದ ಕೆಲ ಮನೆಗಳಿಗೆ ಅಲ್ಪಮಟ್ಟಿಗೆ ಹಾನಿಯಾದರೆ ಇನ್ನು ಕೆಲವು ಮನೆಗಳು ಸಂಪೂರ್ಣವಾಗಿ ಹಾನಿಯಾಗಿದ್ದವು. ಕಂದಾಯ ಇಲಾಖೆ ಅಧಿಕಾರಿಗಳು ಹಾನಿಯಾದ ಮನೆಗಳನ್ನು ಪರಿಶೀಲಿಸಿ ವರದಿ ತಯಾರಿಸಿತ್ತು.
ವರದಿ ಪ್ರಕಾರ ತಾಲೂಕಿನಲ್ಲಿ ಅತಿವೃಷ್ಟಿ ಮತ್ತು ತುಂಗಭದ್ರಾ ನದಿ ಪ್ರವಾಹದಿಂದಾಗಿ 604 ಮನೆಗಳು ಹಾನಿಯಾಗಿದ್ದವು. ತಾಲೂಕು ಆಡಳಿತದಿಂದ 604 ಮನೆಗಳ ಪೈಕಿ 543 ಮನೆಗಳಿಗೆ 3,200 ರೂ.ನಂತೆ ಪರಿಹಾರ ನೀಡಿದರೆ, ಇನ್ನುಳಿದ ಮನೆಗಳಿಗೆ ತಾಂತ್ರಿಕ ತೊಂದರೆಯಿಂದಾಗಿ ಇದುವರೆಗೂ ಪರಿಹಾರದ ಹಣ ಸಿಕ್ಕಿಲ್ಲ.
ಸೂಕ್ತ ಪರಿಹಾರ ನೀಡಿ: ತಾಲೂಕಿನಲ್ಲಿ ಪ್ರವಾಹ ಮತ್ತು ಅತಿವೃಷ್ಟಿಯಿಂದ ಅಪಾರ ಹಾನಿಯಾಗಿತ್ತು. ಆದರೂ ಸರ್ಕಾರ ತಾಲೂಕನ್ನು ಪ್ರವಾಹ ಪೀಡಿತ ಪ್ರದೇಶಕ್ಕೆ ಒಳಪಡಿಸಿಲ್ಲ. ಹಾಗೆಯೇ ಅತಿವೃಷ್ಟಿಯಿಂದ ನೂರಾರು ಮನೆಗಳು ಕುಸಿದು ಬಿದ್ದಿದ್ದವು. ಆದ್ದರಿಂದ ಸರ್ಕಾರ ಪುನಃ ಪರಿಶೀಲನೆ ನಡೆಸಿ ತಾಲೂಕನ್ನು ಅತಿವೃಷ್ಟಿ ಹಾಗೂ ಪ್ರವಾಹ ಪೀಡಿತ ಪ್ರದೇಶಕ್ಕೆ ಒಳಪಡಿಸುವ ಮೂಲಕ ಸೂಕ್ತ ಪರಿಹಾರ ನೀಡಬೇಕು ಎಂದು ಸಂತ್ರಸ್ತರು ಒತ್ತಾಯಿಸುತ್ತಿದ್ದಾರೆ.
ಬೇಸರಗೊಂಡ ಸಂತ್ರಸ್ತರು: ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ಮನೆಗಳ ಪುನರ್ ನಿರ್ಮಾಣ ಕಾರ್ಯಕ್ಕೆ 5 ಲಕ್ಷ ರೂ. ಪರಿಹಾರ ಹಾಗೂ ಮನೆಯ ದುರಸ್ತಿ ಮಾಡಿಕೊಳ್ಳುವುದಾದರೆ 1 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ ಎಂದು ಸರ್ಕಾರ ಘೊಷಣೆ ಮಾಡಿತ್ತು. ಆದರೆ ತಾಲೂಕನ್ನು ಪ್ರವಾಹ ಪೀಡಿತ ಪ್ರದೇಶಕ್ಕೆ ಒಳಪಡಿಸದ ಕಾರಣ ಮನೆ ನಿರ್ವಿುಸಿಕೊಳ್ಳಲು ಸರ್ಕಾರದಿಂದ ಬರುವ ಪರಿಹಾರದ ನಿರೀಕ್ಷೆಯಲ್ಲಿದ್ದ ಸಂತ್ರಸ್ತರಿಗೆ ಬೇಸರ ಮೂಡಿಸಿದೆ.
ಅತಿವೃಷ್ಟಿಯಿಂದ ಮನೆ ಕುಸಿದು ಬಿದ್ದಿದ್ದು ಮರು ಮನೆ ನಿರ್ವಿುಸಿಕೊಳ್ಳಲು ನಮಗೆ ಆರ್ಥಿಕವಾಗಿ ಬಲವಿಲ್ಲ. ತಾಲೂಕು ಆಡಳಿತ ಕೇವಲ 3,200 ರೂ.ಪರಿಹಾರ ನೀಡಿದರೆ ಅದು ಯಾವುದಕ್ಕೂ ಸಾಲುವುದಿಲ್ಲ. ಆದ್ದರಿಂದ ಸರ್ಕಾರ ಪುನಃ ಪರಿಶೀಲಿಸಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಯಾದ ಮನೆಗಳಿಗೆ ಸೂಕ್ತ ಪರಿಹಾರ ನೀಡಬೇಕು.
| ಕಲ್ಲನಗೌಡ ಪಾಟೀಲ, ಡೋಣಿ ಗ್ರಾಮಸ್ಥ
ಸರ್ಕಾರ ಪ್ರವಾಹ ಪೀಡಿತ ಪ್ರದೇಶಕ್ಕೆ ತಾಲೂಕನ್ನು ಒಳಪಡಿಸಿಲ್ಲ. ತಾಲೂಕಿನಲ್ಲಿ ಅತಿವೃಷ್ಟಿಯಿಂದಾಗಿ 604 ಮನೆಗಳು ಹಾನಿಯಾಗಿದ್ದವು. ಈ ಪೈಕಿ 543 ಮನೆಗಳಿಗೆ ಎನ್ಡಿಆರ್ಎಫ್ನ ನಿಯಮಾನುಸಾರ ಪ್ರತಿ ಮನೆಗಳಿಗೆ 3,200 ರೂ.ನಂತೆ ಪರಿಹಾರ ವಿತರಿಸಿದ್ದೇವೆ. ಇನ್ನುಳಿದ ಮನೆಗಳ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.
| ಡಾ.ವೆಂಕಟೇಶ ನಾಯಕ, ತಹಸೀಲ್ದಾರ್
ಯಮಸ್ವರೂಪಿಯಾಗಿವೆ ಟಿಪ್ಪರ್, ಲಾರಿ ಸಂಚಾರ