| ಮಂಜುನಾಥ ಅಯ್ಯಸ್ವಾಮಿ, ಹೊಸಪೇಟೆ
ತುಂಗಭದ್ರೆ ರೌದ್ರಾವತಾರಕ್ಕೆ ಕೊಚ್ಚಿ ಹೋಗಿರುವ ಜಲಾಶಯದ 19ನೇ ಕ್ರಸ್ಟ್ಗೇಟ್ ಜಾಗದಲ್ಲಿ ಸ್ಟಾಪ್ಲಾಗ್ ಗೇಟ್ ಹಾಕಿ, ನೀರನ್ನು ಉಳಿಸುವ ಪ್ರಯತ್ನ ತಜ್ಞರಿಂದ ಆರಂಭವಾಗಿದೆ. 20 ಟನ್ ಭಾರದ ಒಂದು ಎಲಿಮೆಂಟ್ ಅಳವಡಿಕೆಗೆ ಸಿದ್ಧತೆ ನಡೆದಿದೆ. ಸ್ಟಾಪ್ ಲಾಗ್ ಗೇಟ್ನ ಐದು ಎಲಿಮೆಂಟ್ಗಳ ಪೈಕಿ ಜಿಂದಾಲ್ನಿಂದ ಒಂದು ಎಲಿಮೆಂಟ್ ಹೊತ್ತ ಲಾರಿ ಗುರುವಾರ ಮಧ್ಯಾಹ್ನ 12ರ ವೇಳೆಗೆ ಜಲಾಶಯದ ಮೇಲೆ ಬಂದಿದೆ. ಮೂರು ದಿನಗಳಲ್ಲಿ ಅಳವಡಿಕೆ ಕಾರ್ಯ ನಡೆಯಲಿದೆ ಎಂದು ಟಿಬಿಬಿ ಅಧಿಕಾರಿಗಳು ಹೇಳಿದ್ದಾರೆ.
ಇನ್ನೂ 4 ಎಲಿಮೆಂಟ್ಗಳು ನಾರಾಯಣ, ಹಿಂದುಸ್ಥಾನ್ ಇಂಜನಿಯರ್ಸ್ಗಳಿಂದ ಬರಬೇಕಿದೆ. ಜಲಾಶಯದ ಆವರಣಕ್ಕೆ ಎಲಿಮೆಂಟ್ ಬರುತ್ತಿದ್ದಂತೆ ಡ್ಯಾಂ ಗೇಟ್ಗಳ ಎಕ್ಸ್ಪರ್ಟ್ ಕನ್ಹಯ್ಯ ನಾಯ್ಡು ಮತ್ತು ತಂಡ ಸಂತಸಗೊಂಡಿತು. ತಜ್ಞರು ಹಾಗೂ ಅಧಿಕಾರಿಗಳು ಎಲಿಮೆಂಟ್ ಪರಿಶೀಲನೆ ಮಾಡಿದರು. ಎಲಿಮೆಂಟ್ ಅಳವಡಿಕೆ ವೇಳೆ ಅವಘಡಗಳಾಗದಂತೆ ಮುಂಜಾಗೃತ ಕ್ರಮವಾಗಿ ರಕ್ಷಣ ಪಡೆಯು ಡ್ಯಾಂ ಮುಂಭಾಗ ಹಾಗೂ ಮೇಲ್ಭಾಗದಲ್ಲಿ ಬೀಡುಬಿಟ್ಟಿದೆ. ಬೆಂಗಳೂರಿನ
ಎಸ್ಡಿಆರ್ಪಿ ಆರು ಸಿಬ್ಬಂದಿ, ಹೊಸಪೇಟೆ ಅಗ್ನಿಶಾಮಕ ದಳದ 10 ಸಿಬ್ಬಂದಿ ಹಾಗೂ ಒಬಿಎಂ ಬೋಟ್ ಸೇರಿ ರಕ್ಷಣ ಕಾರ್ಯಕ್ಕೆ ಬೇಕಾಗಿರುವ ತಯಾರಿ ನಡೆದಿದೆ. ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಗುರುವಾರ ಸಂಜೆ ಜಲಾಶಯದ ಬಳಿ ಗೇಟ್ ಅಳವಡಿಕೆ ವೀಕ್ಷಿಸಿದರು. ಗೇಟ್ ಅಳವಡಿಕೆ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗೆ ವೈಯಕ್ತಿಕವಾಗಿ ಬಹುಮಾನ ನೀಡುವುದಾಗಿಯೂ ಘೊಷಿಸಿದರು.
ಕಾರ್ಯಾಚರಣೆಗೆ ಸರಳು ಅಡ್ಡಿ: ಗೇಟ್ನ ಬಲ ಭಾಗದಲ್ಲಿ ಸಿಲುಕಿದ್ದ ಹಳೇ ಗೇಟ್ನ ಸರಳು ಕಾರ್ಯಾಚರಣೆಗೆ ಅಡ್ಡಿಯಾಗಿದೆ. ತಾಂತ್ರಿಕ ಸಿಬ್ಬಂದಿ ಕ್ರೇನ್ ಸಹಾಯದಿಂದ ಹರಿವ ನೀರಿನಲ್ಲಿ ಜೀವ ಪಣಕ್ಕಿಟ್ಟು ಮೇಲೆತ್ತಿದರು. ಜಿಂದಾಲ್ನಿಂದ ಬಂದ ಎಲಿಮೆಂಟ್ 64 ಅಡಿ ಉದ್ದ ಇದ್ದು, ಕ್ರೇನ್ನಿಂದ ಮೇಲೆತ್ತಿದಾಗ ತಡೆಗೋಡೆಗೆ ಬಡಿಯುವ ಆತಂಕ ಎದುರಾಗಿದೆ. ಡ್ಯಾಂ ಹಳೇಯದಾಗಿದ್ದು, ರಿಸ್ಕ್ ತೆಗೆದುಕೊಳ್ಳಲು ತಜ್ಞರು ಹಿಂದೇಟು ಹಾಕಿದರು. ಮಧ್ಯಾಹ್ನ ಮೂರು ಗಂಟೆಯಿಂದ ಸಂಜೆವರೆಗೆ ನಡೆದ ಕಾರ್ಯಾಚರಣೆ ಫಲ ನೀಡಲಿಲ್ಲ. ನೀರಿನಾಳದಲ್ಲಿ 100 ಟನ್ಗೂ ಅಧಿಕ ಒತ್ತಡವಿದೆ. ಇದರೊಂದಿಗೆ ಒಳಹರಿವು ಹೆಚ್ಚಳ, ಮಳೆ ಛಾಯೆ ಕಾಮಗಾರಿಗೆ ತಡೆಯೊಡ್ಡುವ ಭೀತಿ ಹೆಚ್ಚಿಸಿದೆ. ಶಾಶ್ವತ ಪರಿಹಾರಕ್ಕೆ ಕ್ರಸ್ಟ್ ಗೇಟ್ವರೆಗೆ (68 ಟಿಎಂಸಿ ಅಡಿ) ಖಾಲಿಯಾಗುವುದು ಅನಿವಾರ್ಯ.
77.122 ಟಿಎಂಸಿ ಅಡಿಗೆ ಇಳಿಕೆ : ಗುರುವಾರ ಬೆಳಗ್ಗೆ ವೇಳೆಗೆ ಟಿಬಿ ಡ್ಯಾಂ ನೀರಿನ ಮಟ್ಟ 77.211 ಟಿಎಂಸಿ ಅಡಿಗೆ ಇಳಿಕೆಯಾಗಿತ್ತು. ಕಳೆದ ಐದು ದಿನದಲ್ಲಿ ಜಲಾಶಯದಿಂದ ಅಂದಾಜು 0 ಟಿಎಂಸಿ ಅಡಿ ನೀರು ನದಿಗೆ ಹರಿದು ಹೋಗಿದೆ. ಡ್ಯಾಂ ಮಟ್ಟ 1625 ಅಡಿಗೆ ಕುಸಿದಿದೆ. ಒಳಹರಿವು 37,173 ಕ್ಯೂಸೆಕ್ಗೆ ಏರಿಕೆ ಕಂಡಿದೆ.
ರಾಕೇಶ್ ಸಿಂಗ್ಗೆ ಜಲಾಶಯಗಳ ಗೇಟ್ ಪರಿಶೀಲನೆ ಹೊಣೆ
ಬೆಂಗಳೂರು: ತುಂಗಭದ್ರಾ ಜಲಾಶಯದ 19ನೇ ಗೇಟ್ನಲ್ಲಿನ ಅವಘಡದ ಬಳಿಕ ಎಚ್ಚೆತ್ತ ಸರ್ಕಾರ ಇತರ ಎಲ್ಲ ಜಲಾಶಯಗಳಲ್ಲಿರುವ ಗೇಟ್ಗಳ ಭದ್ರತೆ ಬಗ್ಗೆ ಪರಿಶೀಲಿಸಲು ಉನ್ನತ ಮಟ್ಟದ ಸಮಿತಿ ರಚಿಸಿದೆ. ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯಕಾರ್ಯದರ್ಶಿಯಾಗಿ ಸೇವಾ ನಿವೃತ್ತರಾಗಿರುವ ರಾಕೇಶ್ ಸಿಂಗ್ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ನೇಮಿಸಲು ಜಲಸಂಪನ್ಮೂಲ ಇಲಾಖೆ ನಿರ್ಧರಿಸಿದೆ. ತುಂಗಭದ್ರಾ ಜಲಾಶಯದಲ್ಲಿ ನಡೆದ ಘಟನೆ ಮುಖ್ಯ ಎಚ್ಚರಿಕೆ ಸಂಕೇತ ಎಂದು ಭಾವಿಸಬೇಕಾಗಿದೆ, ಇದೇ ರೀತಿ ರಾಜ್ಯದ ಎಲ್ಲ ಜಲಾಶಯಗಳ ಗೇಟ್ಗಳನ್ನು ಸೂಕ್ತ ತಾಂತ್ರಿಕ ನಿಪುಣರನ್ನೊಳಗೊಂಡ ಸಮಿತಿ ಪರಿಶೀಲನೆ ನಡೆಸಿ ಅಗತ್ಯ ದುರಸ್ತಿ, ಮತ್ತು ಬದಲಾವಣೆ ಮಾಡುವಂತ ಕೆಲಸ ಕೂಡಲೇ ಕೈಗೊಳ್ಳಬೇಕಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟಿದ್ದು, ಸಮಿತಿ ಮೂಲಕ ವರದಿ ಪಡೆದುಕೊಂಡು ಮುಂದುವರಿಯಲು ಸೂಚನೆ ನೀಡಿದ್ದಾರೆ.
ಜಿಂದಾಲ್ನಿಂದ ಒಂದು ಎಲಿಮೆಂಟ್ ಬಂದಿದೆ. ಅಳವಡಿಕೆಗೆ ಸಿದ್ಧತೆ ಪ್ರಕ್ರಿಯೆ ನಡೆದಿದೆ. ಶೀಘ್ರ ಶುಭ ಸುದ್ದಿ ಕೊಡುತ್ತೇನೆ. ಮೊದಲ ಎಲಿಮೆಂಟ್ ಅಳವಡಿಸೊದು ನನ್ನ ಜೀವನದಲ್ಲಿ ದೊಡ್ಡ ಚಾಲೆಂಜ್ ಆಗಿದೆ. ಮೊದಲ ಬಾರಿಗೆ ಈ ರೀತಿ ಪ್ರಯತ್ನ ಮಾಡುತ್ತಿದ್ದೇವೆ.
| ಕನ್ನಯ್ಯ ನಾಯ್ಡು ಡ್ಯಾಂ ಗೇಟ್ಗಳ ತಜ್ಞ
ಬಿಎಸ್ ಯಡಿಯೂರಪ್ಪ ಆಪ್ತ, ಅರಸೀಕೆರೆ ಮಾಜಿ ಶಾಸಕ ಎ.ಎಸ್ ಬಸವರಾಜು ನಿಧನ