ಕೊಪ್ಪಳ/ಹೊಸಪೇಟೆ: ತುಂಗಭದ್ರಾ ಜಲಾಶಯದ 19ನೇ ಮುಖ್ಯ ಗೇಟ್ ಕಳಚಿ ಎದುರಾದ ಅಪಾಯವನ್ನು ಎದುರಿಸಲು ಸರ್ಕಾರ ಸಮರೋಪಾದಿಯಲ್ಲಿ ಕಾರ್ಯನಿರತವಾಗಿದೆ. ಒಂದು ಕಡೆ ಜಲಾಶಯದ ಸುರಕ್ಷತೆಗೆ ಗಮನ ನೀಡುವುದು ಮತ್ತು ಅದಕ್ಕೆ ಪೂರಕವಾದ ಕ್ರಮಕೈಗೊಳ್ಳುವುದು ಇನ್ನೊಂದೆಡೆ ಹೊಸ ಗೇಟ್ ತಯಾರಿಕೆ ಹಾಗೂ ಅಳವಡಿಕೆ ಸಂಬಂಧ ತುರ್ತು ಕ್ರಮಕೈಗೊಂಡಿದೆ.
ಕಳಚಿರುವ ಗೇಟ್ನ ಡಿಸೈನ್ ಅನ್ನು ಡಿಸೈನರ್ ಕನ್ನಯ್ಯ ನಾಯ್ಡು ಅವರಿಂದ ತರಿಸಿಕೊಳ್ಳಲಾಗಿದೆ. ಹಾಗೆಯೇ, ಗುತ್ತಿಗೆದಾರ ಸಂಸ್ಥೆಗಳಾದ ಕೃಷ್ಣಯ್ಯ, ನಾರಾಯಣ ಹಾಗೂ ಹಿಂದುಸ್ಥಾನ್ ಸಂಸ್ಥೆಯ ತಂಡಗಳು ಪ್ರಕ್ರಿಯೆಗೆ ಚಾಲನೆ ನೀಡಿವೆ. ತಂತ್ರಜ್ಞರಿಗೆ ಈಗಾಗಲೇ ಅಣೆಕಟ್ಟಿನ ವಿನ್ಯಾಸ ನಕ್ಷೆ ನೀಡಲಾಗಿದೆ. ಹೈದರಾಬಾದ್ ಹಾಗೂ ಬೆಂಗಳೂರಿನಿಂದ ತಜ್ಞರು ಜಲಾಶಯದ ಬಳಿ ಬಿಡಾರ ಹೂಡಿದ್ದಾರೆ. ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, 19 ನೇ ಗೇಟ್ ದುರಸ್ತಿಗೆ ಉನ್ನತ ಅನುಭವವುಳ್ಳವರನ್ನು ಕರೆಸುತ್ತಿದ್ದೇವೆ. ತುಂಗಭದ್ರಾ ನೀರಾವರಿ ನಿಗಮದಲ್ಲಿಯೂ ಉತ್ತಮ ತಂತ್ರಜ್ಞರಿದ್ದಾರೆ. ಅಲ್ಲದೇ ಗುತ್ತಿಗೆದಾರ ಸಂಸ್ಥೆಗಳ ನೆರವು ಪಡೆಯಲಾಗಿದೆ ಎಂದರು.
ಯಾರಿಗೆಷ್ಟು ಹೊಣೆ?: ನೀರನ್ನು ಹೊರಗೆ ಬಿಡದ ಹೊರತು ಗೇಟ್ ದುರಸ್ತಿ ಸಾಧ್ಯವಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಅಣೆಕಟ್ಟಿನ 1 ರಿಂದ 16 ನೇ ಗೇಟುಗಳನ್ನು ಸಿಡಬ್ಲೂ್ಯಸಿ ನಿರ್ವಹಣೆ ಮಾಡುತ್ತದೆ. 17 ರಿಂದ 32 ರವರೆಗಿನ ಜವಾಬ್ದಾರಿ ಕರ್ನಾಟಕ ಸರ್ಕಾರದ್ದಾಗಿದೆ. ಕೇಂದ್ರ ಜಲ ಆಯೋಗದವರೂ ಒಂದಷ್ಟು ತಂತ್ರಜ್ಞರನ್ನು ಕಳುಹಿಸಿದ್ದಾರೆ. ನಾವೂ ನುರಿತ ತಂತ್ರಜ್ಞರನ್ನು ಕಳುಹಿಸಿದ್ದೇವೆ ಎಂದರು.
ನೀರು ನಗ್ಗುವ ಸಾಧ್ಯತೆ: ನಿತ್ಯ ಸರಾಸರಿ 8ರಿಂದ 10 ಟಿಎಂಸಿ ಅಡಿ ನೀರನ್ನು ಜಲಾಶಯದಿಂದ ನದಿಗೆ ಹರಿಸಲು ನಿರ್ಧರಿಸಲಾಗಿದೆ. ಜಲಾಶಯದಿಂದ 60 ಟಿಎಂಸಿ ನೀರು ಖಾಲಿಯಾಗಲು 5 ರಿಂದ 6 ದಿನ ಬೇಕಾಗಲಿದೆ. ನದಿ ದಡಕ್ಕೆ ಹೊಂದಿಕೊಂಡ ಹೊಲ-ಗದ್ದೆಗಳು, ನಡುಗಡ್ಡೆ ಜಮೀನುಗಳು, ವಿರುಪಾಪುರ ಗಡ್ಡಿ, ನಗರಗಡ್ಡಿ, ಹಮ್ಮದ ನಗರಗಡ್ಡಿಗಳ ಸಂಪರ್ಕ ಕಡಿತಗೊಳ್ಳಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತಗಳು ಸಿದ್ಧತೆ ಮಾಡಿಕೊಂಡಿವೆ. ನಾಲ್ಕು ಜಿಲ್ಲೆಗಳ ನದಿ ಪಾತ್ರದ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ನಡುಗಡ್ಡೆಯಲ್ಲಿರುವವರನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲಾಗುತ್ತಿದೆ.
ಟಿಬಿ ಡ್ಯಾಂ ಬೋರ್ಡ್ ಟೆಕ್ನಿಕಲ್ ವಿಚಾರದಲ್ಲಿ ಕಾಟಚಾರದ ವರದಿ ಕೊಟ್ಟಿವೆ. ಅದಕ್ಕಾಗಿ ಇಂತಹ ಪರಿಸ್ಥಿತಿ ಬಂದಿದೆ. ಜಲಾಶಯದ ಸಮಸ್ಯೆಗೆ ಸರ್ಕಾರದ ನಿರ್ಲಕ್ಷ್ಯ ಎನ್ನಲು ಆಗುವುದಿಲ್ಲ.
| ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ
ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆ ನಿರ್ವಹಣೆಗೆ ಜಲಾಶಯದಲ್ಲಿ 90 ಟಿಎಂಸಿ ನೀರು ಇರಬೇಕು. ಮಳೆ ಬರುವ ಸಾಧ್ಯತೆಯಿದ್ದು, ದುರಸ್ತಿ ಬಳಿಕ ಜಲಾಶಯ ಮತ್ತೆ ಭರ್ತಿಯಾಗುವ ಸಾಧ್ಯತೆಯಿದೆ.
| ಬಸಪ್ಪ ಜಾನಕರ್ ನೀರಾವರಿ ಇಲಾಖೆ ಎಇಇ, ಮುನಿರಾಬಾದ್
ವಿಜಯೇಂದ್ರ, ಸಿಎಂ ಭೇಟಿ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೋಮವಾರ ಜಲಾಶಯಕ್ಕೆ ಭೇಟಿ ನೀಡುವರು. ಮಂಗಳವಾರ ಸಿಎಂ ಸಿದ್ದರಾಮಯ್ಯ ಭೇಟಿಕೊಡುವರು. ಆ.13ರಂದು ನಾನು, ಸಿಎಂ ಬಾಗಿನ ಅರ್ಪಿಸುವ ಕಾರ್ಯಕ್ರಮವಿತ್ತು. ಈಗ ಮುಂದೂಡಲಾಗಿದೆ. ಮೊದಲು ಅಣೆಕಟ್ಟಿನ ಸುರಕ್ಷತೆ ನಮಗೆ ಮುಖ್ಯ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಭಾನುವಾರ ಸಚಿವ ಶಿವರಾಜ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ್, ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಿದ್ದರು. ವಿಜಯನಗರ, ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ಸಚಿವ, ಶಾಸಕರು, ಸಂಸದರು, ಮಾಜಿ ಸಚಿವರು, ಮಾಜಿ ಶಾಸಕರೂ ಭೇಟಿ ನೀಡಿದ್ದರು.
ಮುಖ್ಯಾಂಶಗಳು
1. ಸುರಕ್ಷತೆಯೆಡೆಗೆ ತೋರುತ್ತಿರುವ ಅಸಡ್ಡೆಗೆ ಹಿಡಿದ ಕೈಗನ್ನಡಿಯಾಗಿದೆ. ನಿರ್ವಹಣೆಯ ಹೊಣೆ ಹೊತ್ತ ತುಂಗಭದ್ರಾ ಬೋರ್ಡ ನಿರ್ವಹಣೆಯಲ್ಲಿ ತೋರಿದ ನಿಷ್ಕಾಳಜಿ ಎಂಬ ಗುಮಾನಿ ಮೂಡಿದೆ.
2. ಅವಘಡ ಇದೇ ಮೊದಲಲ್ಲ. 2005ರಲ್ಲಿ ನಾರಾಯಣಪುರ ಜಲಾಶಯದ ಗೇಟ್ನ ಸ್ಟಾಪ್ ಲಾಕ್ ಕಳಚಿ ಪ್ರವಾಹಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿ ಅಪಾರ ನೀರು ಹೊರಹರಿದಿತ್ತು.
3. ಬೇಸಿಗೆಯಲ್ಲಿ ಜಲಾಶಯದ ಮುಖ್ಯ ಗೇಟ್ಗಳು, ವಿತರಣಾ ಕಾಲುವೆ ಗೇಟ್ಗಳ ವಿಧದ ಪರೀಕ್ಷೆ ಮಾಡಬೇಕು. ಆ ಕೆಲಸ ಸರಿಯಾಗಿ ಆಗುತ್ತಿಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ರೈತರ ರಕ್ಷಣೆಗೆ ನಾವಿದ್ದೇವೆ ಡಿಸಿಎಂ ಅಭಯ
ಹೊಸ ಗೇಟನ್ನು ಹಾಕಬೇಕೆಂದರೆ ಜಲಾಶಯ ಒತ್ತಡ ಕಡಿಮೆ ಮಾಡಬೇಕಿದೆ. ರೈತರಿಗೆ ಕನಿಷ್ಠ ಒಂದು ಬೆಳಗಾದರೂ ಒದಗಿಸುವಷ್ಟು ನೀರು ಉಳಿಸಿಕೊಳ್ಳುತ್ತೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು. ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ಈ ಮೂರು ರಾಜ್ಯಗಳ ರೈತರಿಗೆ ಬಹುಮುಖ್ಯವಾದ ಜಲಾಶಯ ಇದಾಗಿದೆ. ಕರ್ನಾಟಕದ 12 ಲಕ್ಷ ಹೆಕ್ಟೆರ್ ಅಚ್ಚುಕಟ್ಟು ಪ್ರದೇಶವನ್ನು ಇದು ಹೊಂದಿದೆ. ಕೊಪ್ಪಳ, ರಾಯಚೂರು, ಬಳ್ಳಾರಿ ಸೇರಿ ಅನೇಕ ಜಿಲ್ಲೆಗಳು ಲಾಭ ಪಡೆಯುತ್ತಿವೆ. ನಮ್ಮ ರೈತರು ಆತಂಕಪಡಬೇಕಾಗಿಲ್ಲ ಸರ್ಕಾರ ನಿಮ್ಮ ಜತೆಗಿದೆ ಎಂದರು. ಇದು 60 ರಿಂದ 70 ವರ್ಷದ ಜಲಾಶಯವಾಗಿದೆ, ಘಟನೆಗೆ ಸಂಬಂಧಿಸಿದಂತೆ ಯಾವ ಅಧಿಕಾರಿಗಳನ್ನೂ ದೂರುವುದಿಲ್ಲ. ದೇಶದ ಸಂಪತ್ತನ್ನು ಕಾಪಾಡಬೇಕಿದೆ. ಅಣೆಕಟ್ಟಿನ ಎರಡು ಕಿಲೋಮೀಟರ್ ಸುತ್ತಳತೆಯಲ್ಲಿ ತಂತ್ರಜ್ಞರು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಹೊರತುಪಡಿಸಿ ಜನಪ್ರತಿನಿಧಿಗಳಿಗೂ ಪ್ರವೇಶ ನಿರ್ಬಂಧಿಸಲಾಗಿದೆ ಎಂದರು.
ಹೊಣೆಗೇಡಿ ಕಾಂಗ್ರೆಸ್ ಸರ್ಕಾರವೇ ಕಾರಣ
ಬೆಂಗಳೂರು: ಕ್ರಸ್ಟಗೇಟ್ ಸರಪಳಿ ತುಂಡಾಗಿ ಗೇಟ್ ಕೊಚ್ಚಿ ಹೋಗಿರುವುದಕ್ಕೆ ಹೊಣೆಗೇಡಿ ಕಾಂಗ್ರೆಸ್ ಸರ್ಕಾರವೇ ಕಾರಣವೆಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಲ ಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ತಮ್ಮ ಇಲಾಖೆಗಳ ನಿರ್ವಹಣೆಗಿಂತ ಕಾಂಗ್ರೆಸ್ ಹೈಕಮಾಂಡ್ ಕೆಲಸವೇ ಹೆಚ್ಚಾಗಿದೆ. ಚುನಾವಣೆಗೆ ಹಣ ಹೊಂದಿಸುವಲ್ಲಿ ಬ್ಯುಸಿಯಾಗಿರುವ ಡಿಎಂಸಿಗೆ ಇಲಾಖೆಯ ಕರ್ತವ್ಯನಿರ್ವಹಿಸಲು ಪಾಪ ಸಮಯ ಎಲ್ಲಿದೆ? ಎಂದು ವ್ಯಂಗ್ಯವಾಡಿದ್ದಾರೆ. ಕಾಲಕಾಲಕ್ಕೆ ಜಲಾಶಯದ ತಾಂತ್ರಿಕ ಸಮಿತಿ ಸಭೆ ಮಾಡಿ ಡ್ಯಾಂನ ಸುರಕ್ಷತೆ, ನಿರ್ವಹಣೆ ಬಗ್ಗೆ ಗಮನಹರಿಸಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಚಾಟಿ ಬೀಸಿದ್ದಾರೆ. ಸಿಎಂ ಕುರ್ಚಿ ಮೇಲೆ ಟವಲ್ ಹಾಕೋದರಲ್ಲೇ ಬ್ಯುಸಿಯಾಗಿರುವ ಡಿಸಿಎಂ ಸಾಹೇರಿಗೆ ಡ್ಯಾಂ ರಿಪೇರಿ ಮಾಡಿಸಲು ಸಮಯ, ಆಸಕ್ತಿ ಎಲ್ಲಿದೆ? ಅಧಿಕಾರದ ತೆವಲಿಗೆ ರೈತರ ಬದುಕಿನ ಜತೆ ಇನ್ನೆಷ್ಟು ದಿನ ಚೆಲ್ಲಾಟವಾಡುತ್ತೀರಿ. ನಾಡಿನ ಅನ್ನದಾತರ ಶಾಪ ತಟ್ಟುವ ಮುನ್ನ ರಾಜೀನಾಮೆ ಕೊಟ್ಟು ತೊಲಗಿ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ತಜ್ಞರ ಸಮಿತಿ ಕಳೆದ ವರ್ಷ ಜಲಾಶಯ ಪರಿಶೀಲಿಸಿ ಇನ್ನೂ 70 ವರ್ಷ ಗೇಟ್ಗಳು ಎನೂ ಆಗುವುದಿಲ್ಲ ಎಂದು ವರದಿ ನೀಡಿತ್ತು. ಪ್ರತಿ ವರ್ಷ ಜಲಾಶಯದ ಶೇ.75 ಭಾಗ ದುರಸ್ತಿ ಕಾರ್ಯ ನಡೆಯುತ್ತದೆ. 5 ವರ್ಷಕ್ಕೊಮ್ಮೆ ಸರ್ವೆ ನಡೆಯುತ್ತದೆ. ಈ ಬಾರಿಯೂ ನಿರ್ವಹಣೆ ಮಾಡಲಾಗಿದೆ.
| ಒ.ಆರ್.ಕೆ. ರೆಡ್ಡಿ ತುಂಗಭದ್ರಾ ಬೋಡ್ ಕಾರ್ಯದರ್ಶಿ
ಇರೋದು 4 ಜನ, 4 ಬಲ್ಬ್, 4 ಫ್ಯಾನ್… 20 ಲಕ್ಷ ರೂ. ಕರೆಂಟ್ ಬಿಲ್ ಪಡೆದ ಕುಟುಂಬ ಕಂಗಾಲು