ಅದೊಂದು ಸಣ್ಣ ಘಟನೆಯಷ್ಟೆ, ಅದೂ ಬಗೆಹರಿದಿದೆ: ಸಾ ರಾ ಮಹೇಶ್​ ನಿಂದನೆ ಪ್ರಕರಣಕ್ಕೆ ತೆರೆ ಎಳೆದ ಎಸ್​ಪಿ ದಿವ್ಯಾ

ತುಮಕೂರು: ಸಿದ್ಧಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿಗಳ ಕ್ರಿಯಾ ಸಮಾಧಿ ಪ್ರಕ್ರಿಯೆ ನಡೆಯುವ ವೇಳೆ ಸಚಿವ ಸಾ.ರಾ ಮಹೇಶ್​ ಅವರು ತುಮಕೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್​ ಅವರ ಮೇಲೆ ನಿಂದನಾತ್ಮಕ ಶಬ್ದ ಬಳಿಸಿದರು ಎಂಬ ಪ್ರಕರಣಕ್ಕೆ ಸ್ವತಃ ದಿವ್ಯಾ ಅವರೇ ತೆರೆ ಎಳೆದಿದ್ದಾರೆ.

ಇಂದು ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ” ಅದೊಂದು ಸಣ್ಣ ಘಟನೆಯಷ್ಟೇ. ಕ್ರಿಯಾ ಸಮಾಧಿ ನಡೆಯುತ್ತಿದ್ದ ಸ್ಥಳ ಕಿರಿದಾಗಿತ್ತು. ಆದರೆ, ಹೆಚ್ಚಿನ ಜನರಿಗೆ ದರ್ಶನ ಸಿಗಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಹೀಗಾಗಿಯೇ ಅಲ್ಲಿ ಕೆಲ ಕ್ಷಣಗಳ ಕಾಲ ಸಚಿವರು ಮತ್ತು ಭಕ್ತರಿಗೆ ಸ್ವಲ್ಪ ಸಮಸ್ಯೆ ಸೃಷ್ಟಿಯಾಯಿತು. ಅಲ್ಲದೆ, ಅದು ಅಲ್ಲಿಯೇ ಬಗೆಹರಿದಿದೆ. ಇದನ್ನು ದೊಡ್ಡದು ಮಾಡುವ ಅಗತ್ಯವೇನಿಲ್ಲ,” ಎಂದು ಅವರು ವಿವಾದಕ್ಕೆ ತೆರೆ ಎಳೆದಿದ್ದಾರೆ.

ಕರ್ತವ್ಯ ನಿರತ ಅಧಿಕಾರಿ ಮೇಲೆ ಸಚಿವರು ದರ್ಪ ತೋರಿದರು ಎಂಬ ಸಂಗತಿ ಬುಧವಾರ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಈಡಾಗಿತ್ತು.