ಜೆಡಿಎಸ್​ ಗೆಲ್ಲೋದು 2 ಸ್ಥಾನ ಮಾತ್ರ; 3ಕ್ಕಿಂತ ಹೆಚ್ಚು ಗೆದ್ರೆ ರಾಜಕೀಯ ನಿವೃತ್ತಿ

ತುಮಕೂರು: ಕಾಂಗ್ರೆಸ್​ ಮತ್ತು ಜೆಡಿಎಸ್​ ನಡುವೆ ನಡೆದ ಲೋಕಸಭಾ ಚುನಾವಣೆಯ ಸೀಟು ಹಂಚಿಕೆಯಲ್ಲಿ ತುಮಕೂರು ಕ್ಷೇತ್ರ ಜೆಡಿಎಸ್​ ವಶವಾದ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಹಾಲಿ ಸಂಸದ ಮುದ್ದಹನುಮೇಗೌಡಗೆ ಟಿಕೆಟ್​ ಕೈತಪ್ಪಿದ್ದಕ್ಕೆ ಕಾಂಗ್ರೆಸ್​ ಮಾಜಿ ಶಾಸಕ ಕೆ.ಎನ್​. ರಾಜಣ್ಣ ಜೆಡಿಎಸ್​ ವಿರುದ್ಧ ಗುಡುಗಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜೆಡಿಎಸ್​ಗೆ ಎಷ್ಟೇ ಸೀಟು ಬಿಟ್ಟು ಕೊಟ್ಟರೂ ಗೆಲ್ಲುವುದು ಮಾತ್ರ ಎರಡರಿಂದ ಮೂರು ಸ್ಥಾನ. ಒಂದು ವೇಳೆ ಮೂರಕ್ಕಿಂತ ಹೆಚ್ಚು ಸ್ಥಾನ ಗೆದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು.

ನಾವು ಸನ್ಯಾಸಿಗಳಲ್ಲ
ಮಂಡ್ಯ ಮತ್ತು ಹಾಸನದಲ್ಲಿ ಜೆಡಿಎಸ್​ ಗೆಲುವು ಸುಲಭವಲ್ಲ. ತುಮಕೂರು ಕ್ಷೇತ್ರ ಬಿಟ್ಟು ಕೊಟ್ಟರೆ ನಾನು ಪಕ್ಷೇತರವಾಗಿಯಾದರೂ ಸ್ಪರ್ಧೆ ಮಾಡುತ್ತೇನೆ. ಕಾಂಗ್ರೆಸ್ ಉಳಿಸುವುದಕ್ಕೋಸ್ಕರ ನಾನು ಸ್ಪರ್ಧೆ ಮಾಡುತ್ತೇನೆ. ನಾವೇನು ಸನ್ಯಾಸಿಗಳಲ್ಲ. ನಮ್ಮ ಅನಿಸಿಕೆಗಳನ್ನು ಕಾರ್ಯಗತ ಮಾಡಲು ಏನೆಲ್ಲಾ ಮಾಡಬೇಕು ಅದನ್ನೆಲ್ಲಾ ಮಾಡುತ್ತೇವೆ. ಹಾಸನ, ಮಂಡ್ಯ ಹಾಗೂ ಬೆಂಗಳೂರು ನಗರದ ರಾಜಕೀಯ ಮುಖಂಡರೊಂದಿಗೆ ಸಂಪರ್ಕದಲ್ಲಿ ಇದ್ದೇವೆ. ಎಲ್ಲರೂ ಸೇರಿ ಏನು ಮಾಡಬೇಕು ಅದನ್ನು ಮಾಡುತ್ತೇವೆ ಎಂದು ತಿಳಿಸಿದರು.

ಹಾಲಿ ಸಂಸದರ ಕ್ಷೇತ್ರವನ್ನು ತ್ಯಾಗ ಮಾಡಲ್ಲ
ಸೀಟು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಇನ್ನೂ ನಿರ್ಣಯ ಮಾಡಿಲ್ಲ. 16 ರಂದು ಕಾಂಗ್ರೆಸ್ ಅಂತಿಮ ನಿರ್ಣಯ ಮಾಡುತ್ತದೆ. ಸೀಟು ಹಂಚಿಕೆ ವಿಚಾರದಲ್ಲಿ ಮಾಧ್ಯಮದ ವರದಿ ಉಹಾಪೋಹದಿಂದ ಕೂಡಿದೆ. ಹಾಲಿ ಸಂಸದರ ಕ್ಷೇತ್ರವನ್ನು ತ್ಯಾಗ ಮಾಡಲ್ಲ ಎಂದು ನಾವು ಹೈಕಮಾಂಡ್​ಗೆ ಹೇಳಿದ್ದೇವೆ. ಹೀಗಾಗಿ ಈಗಲೇ ಯಾವುದೇ ಉಹಾಪೋಹಕ್ಕೆ ಕಿವಿಗೊಡಬಾರದು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.

ದೇವೇಗೌಡರು ಖಳನಾಯಕರಾಗಿದ್ದಾರೆ
ಮುದ್ದಹನುಮೇಗೌಡರನ್ನು ಒಕ್ಕಲಿಗರ ಚಾಂಪಿಯನ್ ಎಂದು ಕರೆಯುತ್ತಾರೆ. ಮುದ್ದಹನುಮೇಗೌಡ ಒಕ್ಕಲಿಗರಲ್ವಾ? ಅಥವಾ ದೊಕ್ಕಲನಾ? ಇದು ದೇವೇಗೌಡರಿಗೆ ಗೊತ್ತಾಗಿಲ್ವಾ? ಒಕ್ಕಲಿಗರಿಗೆ ಮೋಸ ಮಾಡೋದಾ? ಕಣ್ಣೀರಿಗೆ ದೇವೇಗೌಡರ ಕುಟುಂಬ ಹೆಸರುವಾಸಿಯಾಗಿದೆ. ಅವರಿಗೆ ಅದೇ ಬಂಡವಾಳ. ದೇವೇಗೌಡರಿಗೆ ಒಳ್ಳೆಯ ಹೆಸರಿತ್ತು. ಮೊಮ್ಮಕ್ಕಳನ್ನು ಬೆಳೆಸಲು ಬೇರೆ ಒಕ್ಕಲಿಗರನ್ನು ತುಳಿದು ಅದೇ ಸಮಾಜದಲ್ಲೇ ಖಳನಾಯಕರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು. (ದಿಗ್ವಿಜಯ ನ್ಯೂಸ್​)