More

    ತುಮಕೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ

    ತುಮಕೂರು: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಸ್ಮಾರ್ಟ್‌ಸಿಟಿ ಯೋಜನೆ ಅಡಿ ಹೈಟೆಕ್ ಸ್ಪರ್ಶ ಪಡೆಯಲಿದ್ದು, 82.18 ಕೋಟಿ ರೂಪಾಯಿ ವೆಚ್ಚದಲ್ಲಿ ಬಹುಮಡಿ ‘ಸ್ಮಾರ್ಟ್ ಬಸ್ ಟರ್ಮಿನಲ್’ ನಿರ್ಮಿಸಲಾಗುತ್ತಿದೆ.

    ಏರ್‌ಪೋರ್ಟ್ (ವಿಮಾನ ನಿಲ್ದಾಣ) ಮಾದರಿಯಲ್ಲಿ ತಲೆಎತ್ತಲಿರುವ ಬಸ್ ನಿಲ್ದಾಣವು ಹತ್ತುಹಲವು ಸ್ಮಾರ್ಟ್ ವಿಶೇಷತೆ ಹೊಂದಿದೆ. ಬಿ 1, 2 ನೆಲಮಹಡಿ ಹಾಗೂ 3 ಅಂತಸ್ತಿನ ಬಸ್ ನಿಲ್ದಾಣವು ಅತ್ಯಾಧುನಿಕವಾಗಿ ನಿರ್ಮಾಣಗೊಳ್ಳಲಿದೆ. ಬೆಂಗಳೂರು ಹೆಬ್ಬಾಗಿಲು ತುಮಕೂರು ಜಿಲ್ಲೆ. ಜಿಲ್ಲೆಯ ಮೂಲಕ ಮಧ್ಯಕರ್ನಾಟಕ ಹಾಗೂ ಉತ್ತರ ಕರ್ನಾಟಕ ಬಸ್‌ಗಳು ಹಾದುಹೋಗಲಿದ್ದು, ಪ್ರತಿನಿತ್ಯ 2400 ಬಸ್‌ಗಳು ಸಾರಿಗೆ ಬಸ್ ನಿಲ್ದಾಣವನ್ನು ಹಾದುಹೋಗಲಿವೆ. ಬಸ್ ಸಂಚಾರದ ಒತ್ತಡದ ದಟ್ಟಣೆಗೆ ಪರಿಹಾರವಾಗಿ ಸ್ಮಾರ್ಟ್ ಬಸ್ ನಿಲ್ದಾಣ ನಿರ್ಮಿಸುವ ಯೋಜನೆಗೆ ಚಾಲನೆ ನೀಡಲಾಗಿದೆ.

    ಬಹುಮಹಡಿ ಬಸ್ ಟರ್ಮಿನಲ್: ವಿಮಾನ ನಿಲ್ದಾಣ ಮಾದರಿಯಂತೆ ಬಹುಮಹಡಿ ಬಸ್ ಟರ್ಮಿನಲ್ ನಿರ್ಮಿಸುವ ಯೋಜನೆಯನ್ನು ಸ್ಮಾರ್ಟ್‌ಸಿಟಿ ಕೈಗೆತ್ತಿಕೊಂಡಿದೆ. ಎರಡೂವರೆ ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಂಡು ಕೆಎಸ್‌ಆರ್‌ಟಿಸಿಗೆ ಹಸ್ತಾಂತರಿಸಲಾಗುವುದು.
    ವೈ-ಫೈ, ಇಂಟರ್‌ನೆಟ್ ಸಹಿತ ಅತ್ಯಾಧುನಿಕ ಸಂಪರ್ಕ ಸೌಲಭ್ಯ ಇರಲಿದೆ. ಗುಜರಾತ್ ವಡೋದರದಲ್ಲಿನ ಬಸ್ ಟಿರ್ಮಿನಲ್‌ನಂತೆ ತುಮಕೂರು ಬಸ್ ನಿಲ್ದಾಣ ನಿರ್ಮಾಣಗೊಳ್ಳಲಿದೆ.

    ನೆಲಮಹಡಿಯಲ್ಲಿ ಸಿಟಿ ಬಸ್ ನಿಲ್ದಾಣ: ಹೈಟೆಕ್ ಬಸ್ ಟಿರ್ಮಿನಲ್‌ನ ನೆಲಮಹಡಿಯಲ್ಲಿ ಸಿಟಿ ಬಸ್ ನಿಲ್ದಾಣ ಇರಲಿದೆ. ಸದ್ಯ 50 ಸಿಟಿ ಬಸ್‌ಗಳು ನಗರದಲ್ಲಿ ಕಾರ್ಯಾಚರಣೆಯಲ್ಲಿದ್ದು, 30 ಬಸ್‌ಗಳು ನಿಲ್ಲುವ ವ್ಯವಸ್ಥೆ ಇರಲಿದೆ. ಪ್ರತಿನಿತ್ಯ ನಗರಸಾರಿಗೆಯ 1200 ಟ್ರಿಪ್‌ಗಳನ್ನು ಮಾಡಲಿವೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ನಗರ ಸಾರಿಗೆ ಬಸ್‌ಗಳನ್ನು ಹೆಚ್ಚಳ ಮಾಡಬಹುದು.

    ಬಿ1, ಬಿ2ನಲ್ಲಿ ವಾಹನ ಪಾರ್ಕಿಂಗ್!: ಬೇಸ್1, 2ನಲ್ಲಿ ವಿಶಾಲವಾದ ಅತ್ಯಾಧುನಿಕ ವಾಹನ ಪಾರ್ಕಿಂಗ್ ವ್ಯವಸ್ಥೆ ಇರಲಿದೆ. ಬೇಸ್ -1ನಲ್ಲಿ ಕಾರು ಪಾರ್ಕಿಂಗ್ ಮಾಡಲಾಗಿದೆ. 167 ನಾಲ್ಕುಚಕ್ರದ ವಾಹನಗಳನ್ನು ಒಟ್ಟಿಗೆ ಪಾರ್ಕ್ ಮಾಡಬಹುದು. ಏಕಕಡೆ ಪ್ರವೇಶ ಹಾಗೂ ನಿರ್ಗಮನ ಇರಲಿದ್ದು, 4 ಲಿಫ್ಟ್ ಹಾಗೂ 4 ಕಡೆ ಮೆಟ್ಟಿಲುಗಳನ್ನು ನಿರ್ಮಿಸಲಾಗುವುದು. ಸಬ್‌ವೇ ಸಂಪರ್ಕ ವ್ಯವಸ್ಥೆ ಕೂಡ ಮಾಡಲಾಗುವುದು.

    ಬಸ್ ನಿಲ್ದಾಣ ಸ್ಥಳಾಂತರ: ಸಾರಿಗ್ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ಪೂರ್ಣವಾಗುವ ವರೆಗೂ ಈಗಿರುವ ಬಸ್ ನಿಲ್ದಾಣವನ್ನು ಹತ್ತಿರದಲ್ಲಿರುವ ಜೆ.ಸಿ.ರಸ್ತೆಯ ಖಾಸಗಿ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ಕೆಎಸ್‌ಆರ್‌ಟಿಸಿ ಬಸ್ ಡಿಪೋ-1 ಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ. ಜ.8ರಿಂದ ಈ ಬಸ್ ನಿಲ್ದಾಣ ಕಾರ್ಯಾರಂಭ ಮಾಡಲಿದೆ. ಅಶೋಕರಸ್ತೆಯಿಂದ ಬಸವೇಶ್ವರ ರಸ್ತೆ ಮೂಲಕ ನಿಲ್ದಾಣ ಪ್ರವೇಶಿಸುವ ಬಸ್‌ಗಳು ಗುಬ್ಬಿ ವೀರಣ್ಣ ಕಲಾಕ್ಷೇತ್ರ ಭಾಗದಲ್ಲಿ ನಿರ್ಗಮಿಸಲಿವೆ. 2 ನಿರ್ಗಮನ ದ್ವಾರಗಳಿರಲಿವೆ.

    ಎಕ್ಸ್‌ಪ್ರೆಸ್, ಗ್ರಾಮೀಣ ಸಾರಿಗೆ ಬಸ್: ಮೊದಲ ಅಂತಸ್ತು ಎಕ್ಸ್‌ಪ್ರೆಸ್, ಗ್ರಾಮೀಣ ಸಾರಿಗೆ ಬಸ್ ನಿಲ್ದಾಣಕ್ಕೆ ಮೀಸಲಿರಿಸಲಾಗಿದೆ. 35 ಬಸ್‌ಗಳು ಒಟ್ಟಿಗೆ ಬಂದು ನಿಲ್ಲುವ ವ್ಯವಸ್ಥೆ ಇರಲಿದೆ. ಜತೆಗೆ ಆಡಳಿತ ಕಚೇರಿ, ಪ್ರಯಾಣಿಕರ ವಿಶ್ರಾಂತಿ ಕೊಠಡಿ, ಕುಡಿಯುವ ನೀರು, ಲಗ್ಗೇಜ್ ಕೊಠಡಿ ಜತೆಗೆ ಶೌಚಾಗೃಹ ಸೌಲಭ್ಯ. ಲಿಫ್ಟ್ , ಎಸ್ಕಲೇಟರ್ ಸಹ ಪ್ರಯಾಣಿಕರಿಗೆ ಇರಲಿದೆ. ಅಂಗಡಿ-ಮಳಿಗೆಗಳು ನಿರ್ಮಿಸಲಾಗುವುದು.

    ತಾತ್ಕಾಲಿಕ ಬಸ್ ನಿಲ್ದಾಣ ಇಂದಿನಿಂದ ಕಾರ್ಯಾಚರಣೆ: ನಿಗಮದ ತುಮಕೂರು ಘಟಕ-1ರ ಸ್ಥಳಕ್ಕೆ ಬಸ್ ನಿಲ್ದಾಣ ಇಂದಿನಿಂದ ತಾತ್ಕಾಲಿಕವಾಗಿ ಸ್ಥಳಾಂತರಗೊಳಿಸಲಾಗಿದೆ. ತಾತ್ಕಾಲಿಕ ಬಸ್‌ನಿಲ್ದಾಣ 3.20 ಎಕರೆ ವಿಸ್ತೀರ್ಣವಿದ್ದು, ಸದರಿ ನಿಲ್ದಾಣದಿಂದ ಪ್ರತಿನಿತ್ಯ 2989 ಆಗಮನ/ನಿರ್ಗಮನ ಇರುತ್ತವೆ. ನಿಲ್ದಾಣದಲ್ಲಿ 10 ಅಂಕಣಗಳು, ಪ್ರಯಾಣಿಕರು ಕುಳಿತುಕೊಳ್ಳಲು ಆಸನಗಳು, ಪ್ರತ್ಯೇಕವಾಗಿ 3 ಮಹಿಳಾ ಹಾಗೂ 3 ಪುರುಷರ ಶೌಚಾಲಯ ವ್ಯವಸ್ಥೆ ಸೇರಿದಂತೆ ಎಲ್ಲಾ ಸೌಕರ್ಯ ಒದಗಿಸಲಾಗಿದೆ.

    ಮಾಲ್, ಸಿನಿಮಾ ಹಾಲ್:2 ಹಾಗೂ 3 ನೇ ಅಂತಸ್ತಿನಲ್ಲಿ ಮಾಲ್‌ಗಳು, ಖಾಸಗಿ ಕಚೇರಿ ಕಟ್ಟಡಗಳನ್ನು ನಿರ್ಮಿಸಲಾಗುವುದು. ಛಾವಣಿಯಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸಿ 65 ಕೆವಿ ಸೌರ ವಿದ್ಯುತ್ ಉತ್ಪಾದನೆಗೆ ಅವಕಾಶ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts